ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರ

Spread the love

ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರ

ದಕ್ಷಿಣಕನ್ನಡ ಕಣ್ಣಿನ ವೈದ್ಯರ ಸಂಘದ ಅಧ್ಯಕ್ಷ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಹಸಂಚಾಲಕ ಡಾ.ಸುಧೀರ್ ಹೆಗ್ಡೆ ಅವರ ನೇತೃತ್ವದಲ್ಲಿ ಕಣ್ಣಿನ ತಪಾಸಣೆ, ಚಿಕಿತ್ಸೆ, ಔಷಧಿ, ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆ ಉಚಿತ ಶಿಬಿರ ವಾಲ್ಪಾಡಿ-ಅಳಿಯೂರಿನ ಶ್ರೀಶನೀಶ್ವರ ದೇವಸ್ಥಾನ ವಿಕಾಸನಗರದಲ್ಲಿ ಭಾನುವಾರ ಜರುಗಿತು.

ಉದ್ಯಮಿ ಪ್ರವೀಣ್ ಭಟ್ ಕಾನಂಗಿ ಶಿಬಿರಕ್ಕೆ ಚಾಲನೆ ನೀಡಿ, ಕಣ್ಣುದೇವರು ಮಾಡಿದ ಅದ್ಭುತ ಸೃಷ್ಟಿ. ಅದನ್ನು ನಾವು ಜತನದಿಂದ ಕಾಪಾಡಿಕೊಳ್ಳಬೇಕು. ಕಣ್ಣಿನ ತಜ್ಞರ ಸಲಹೆಯನ್ನು ಸಕಾಲದಲ್ಲಿ ಪಡೆದು, ಕಣ್ಣಿನ ಆರೋಗ್ಯದ ರಕ್ಷಣೆ ಮಾಡಬೇಕು ಎಂದರು.

ಡಾ.ಸುಧೀರ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಣ್ಣಿನ ಸಣ್ಣ ದೋಷದಿಂದ ಅಂಧತ್ವ ತರುವ ಸಂಭವವಿರುವುದರಿಂದ ಸೂಕ್ತ ಚಿಕಿತ್ಸೆ, ಆರೈಕೆ ಅವಶ್ಯಕ. ಕಣ್ಣಿನ ದೋಷ ಬಂದಾಗ ಮಾತ್ರವಲ್ಲ, ದೈನಂದಿನ ಜೀವನದಲ್ಲೂ ಕಣ್ಣಿನ ಆರೈಕೆ ಮುಖ್ಯ. ಕಣ್ಣಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಪೌಷ್ಟಿಕ ಆಹಾರ ಸೇವನೆ, ಬಿಸಿಲಿನಿಂದ ರಕ್ಷಣೆ ಸಹಿತ ಹಲವಾರು ಮುಂಜಾಗ್ರತ ಕ್ರಮಗಳಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕಣ್ಣಿನ ದೋಷವನ್ನು ಹೊಂದಿರುವವರಿಗೆ ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದ್ದಲ್ಲಿ ಅದನ್ನು ಕೂಡ ಉಚಿತವಾಗಿ ಮಾಡುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದರು.

 

ದಕ್ಷಿಣಕನ್ನಡ ಕಣ್ಣಿನ ವೈದ್ಯರ ಸಂಘದ ಕಾರ್ಯದರ್ಶಿ ಡಾ.ಅಜಯ್ ಕುಡ್ವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಶಿರ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಹೆಗ್ಡೆ, ನೆಲ್ಲಿಕಾರು ಗ್ರಾ.ಪಂ ಅಧ್ಯಕ್ಷ ಜಯಂತ್ ಹೆಗ್ಡೆ, ದರೆಗುಡ್ಡೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ವಾಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ್ ಸುವರ್ಣ, ವಿಕಾಸನಗರ ಶ್ರೀ ಶನೀಶ್ವರ ದೇವಸ್ಥಾನದ ಅಧ್ಯಕ್ಷ ಪಾಶ್ರ್ವನಾಥ ಜೈನ್, ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ ಜೈನ್, ಬಿಜೆಪಿ ಶಿರ್ತಾಡಿ ಶಕ್ತಿ ಕೇಂದ್ರದ ರಮೇಶ್ ಪೂಜಾರಿ ಉಪಸ್ಥಿತರಿದ್ದರು.

ವಾಲ್ಪಾಡಿ ಪಂಚಾಯಿತಿ ಸದಸ್ಯ ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

310 ಮಂದಿ ಭಾಗಿ
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ನಿವಾರಣಾ ವಿಭಾಗ) ದ.ಕ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಕಣ್ಣಿನ ದೋಷವುಳ್ಳ 310 ಮಂದಿ ಭಾಗವಹಿಸಿದ್ದು, 162 ಮಂದಿಗೆ ಕನ್ನಡಕದ ವ್ಯವಸ್ಥೆ, 47 ಮಂದಿಗೆ ಶಸ್ತ್ರಚಿಕಿತ್ಸೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದು, ಉಳಿದವರಿಗೆ ಶಿಬಿರದಲ್ಲೇ ಔಷಧಿ ನೀಡಲಾಯಿತು


Spread the love