ಡಿಕೆಶಿ, ಜಿಲ್ಲೆಯ ನಾಯಕರ ವಿರುದ್ದ ಹೇಳಿಕೆ ನೀಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಿ – ಸೌರಭ್ ಬಲ್ಲಾಳ್
ಉಡುಪಿ: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಭಾಷಣದ ಬಗ್ಗೆ ಆಕ್ಷೇಪ ಮಾಡಿದ್ದಲ್ಲದೆ ಉಡುಪಿ ಜಿಲ್ಲೆಯ ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರ ವಿರುದ್ದ ಕೇವಲವಾಗಿ ಮಾತನಾಡಿರುವ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿಯವರನ್ನು ಕೂಡಲೇ ಹುದ್ದೆಯಿಂದ ಮುಕ್ತಗೊಳಿಸುವಂತೆ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಆಗ್ರಹಿಸಿದ್ದಾರೆ.
ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷರು, ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಮಾತನಾಡುತ್ತಾ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಜನತೆಗೆ ಎಸಗಿದ ದ್ರೋಹವನ್ನು ಉಲ್ಲೇಖಿಸಿದ್ದರು, ಮತ್ತು ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಹೋರಾಟ ನಡೆಸಬೇಕು ಎಂದು ಬಹಿರಂಗ ಸಭೆಯಲ್ಲಿ ಕರೆ ನೀಡಿದ್ದರು. ಆದರೆ ಯುವ ಕಾಂಗ್ರೆಸ್ ಉಡುಪಿ ಜಿಲ್ಲಾದ್ಯಕ್ಷರಾಗಿರುವ ಕೃಷ್ಣ ಶೆಟ್ಟಿ ಬಜಗೋಳಿ ಅವರು ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಸ್ಥಳೀಯ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಭಾಷಣದ ವಿರುದ್ದವೇ ಈಗ ಬಹಿರಂಗ ಹೇಳಿಕೆ ನೀಡಿರುವುದು ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ.
ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೀವ್ರ ಸ್ಪರ್ಧೆಯಾದರೂ ಕೂಡ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವುದರಿಂದ, ಇಂದು ಕೂಡ ಜನರ ಹೃದಯದಲ್ಲಿ ಶಾಸಕರು ಹಾಗೂ ಸಂಸದರಾಗಿದ್ದಾರೆ.
ಕೇವಲ ಚುನಾವಣೆಯಲ್ಲಿ ಗೆಲುವಲ್ಲ , ಜನಸೇವೆ ಎನ್ನುವ ನಿಸ್ವಾರ್ಥ ಧ್ಯೇಯದೊಂದಿಗೆ ನಮ್ಮ ಅಭ್ಯರ್ಥಿಗಳು ನಿರಂತರವಾಗಿ ಕ್ಷೇತ್ರದಲ್ಲಿ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದು, ಇದರ ಫಲವಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯುವ ಕಾಂಗ್ರೆಸ್ ವತಿಯಿಂದ ನಡೆದ ಚುನಾವಣೆಗಳಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ನಮ್ಮ ನಾಯಕರು ಉತ್ತಮ ಮಾರ್ಗದರ್ಶನ ನೀಡಿದ್ದು, ಇದರಿಂದ ಪಕ್ಷದ ಶಕ್ತಿ ಮತ್ತು ಸಂಘಟನಾ ಬಲ ಹೆಚ್ಚಾಗಿದೆ. ಆದರೆ, ಪಕ್ಷದ ಕೆಲವು ನಾಯಕರನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ತೇಜೋವಧೆ ಮಾಡುವ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪಕ್ಷ ನಿಷ್ಠೆಯು ಅನುಮಾನ ಮೂಡಿಸುವಂತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲೆಯ ಪಕ್ಷದ ನಾಯಕರ ಅವರ ವಿರುದ್ದ ಹೇಳಿಕೆ ನೀಡಿ ಪಕ್ಷದಲ್ಲಿ ಅಶಿಸ್ತಿಗೆ ಕಾರಣವಾದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ವಿರುದ್ದ ಪಕ್ಷದ ನಾಯಕರು ಈ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಸೌರಭ್ ಬಲ್ಲಾಳ್ ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.