ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕೇಂದ್ರ ಸರ್ಕಾರದ ಪ್ರಚೋದನೆ ಕಾರಣ – ಕೆ.ಹರೀಶ್ ಕುಮಾರ್

Spread the love

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕೇಂದ್ರ ಸರ್ಕಾರದ ಪ್ರಚೋದನೆ ಕಾರಣ – ಕೆ.ಹರೀಶ್ ಕುಮಾರ್

ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಮನೆ ಮೇಲೆ ಸಿಬಿಐ ಮೂಲಕ ಮಾಡಿದ ದಾಳಿಗೆ ಕೇಂದ್ರ ಸರ್ಕಾರ ಪ್ರಚೋದನೆಯೇ ಕಾರಣ ಎಂದು ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.

ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಗೆಲುವು ಕಾಣಲಿದೆ. ಇದನ್ನು ಅರಿತ ಕೇಂದ್ರದ ಬಿಜೆಪಿ ಸರ್ಕಾರ ಸಿಬಿಐಯನ್ನು ಚೂ ಬಿಟ್ಟು ಡಿ.ಕೆ.ಶಿವಕುಮಾರ್ ರವರ ಮನೋಸ್ಥೈರ್ಯವನ್ನು ಕುಗ್ಗಿಸುವಂತಹ ಕುತಂತ್ರಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ. ಯಾವುದೋ ಹಳೆಯ ದಾವೆಯನ್ನು ಮುಂದಿಟ್ಟುಕೊಂಡು ಚುನಾವಣೆಯ ಸಂದರ್ಭ ಕೀಟಲೆ ನೀಡುವುದು ಅಮಿತ್ ಷಾ, ಮೋದಿ ಸರ್ಕಾರಕ್ಕೆ ಹವ್ಯಾಸವಾಗಿ ಬಿಟ್ಟಿದೆ. ಇದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಬಿಬಿಎಂಪಿ ವಸತಿ ಯೋಜನೆಯಲ್ಲಿ ಮುಖ್ಯಮಂತ್ರಿ ಯೆಡಿಯೂರಪ್ಪ ಕುಟುಂಬ ಅವ್ಯವಹಾರ ನಡೆಸಿದ್ದು ವಿಧಾನ ಸಭೆಯಲ್ಲಿ ಪ್ರಸ್ತಾಪವಾಗಿದ್ದರೂ ಆರ್ ಟಿಜಿಎಸ್ ಮುಖಾಂತರ ಕಿಕ್ ಬ್ಯಾಕ್ ಪಡೆದ ನಿದರ್ಶನ ಕಣ್ಣೆದುರಿಗೆ ಇದ್ದರೂ ಯಾಕೆ ಸಿಬಿಐ ಕಣ್ಣು ಮುಚ್ಚಿ ಕುಳಿತಿದೆ. ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣ, ಕೃಷಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ನೀತಿ ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಜನರ ಗಮನವನ್ನು ಬೇರೆಡೆ ಸೆಳೆಯುದಕ್ಕಾಗಿ ಈ ದಾಳಿ ನಡೆದಿರುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ನಾಯಕರು ಇಂತಹ ಯಾವುದೇ ರಾಜಕೀಯ ಪ್ರೇರಿತ ದಾಳಿಗೆ ಬೆದರುವುದಿಲ್ಲ ಮತ್ತು ಈ ಘಟನೆಯನ್ನು ದ.ಕ.ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಪ್ರತಿಭಟಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.


Spread the love