ಡಿಸೆಂಬರ್ 4: ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಒತ್ತಾಯಿಸಿ ಧರಣಿ

Spread the love

ಡಿಸೆಂಬರ್ 4: ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಒತ್ತಾಯಿಸಿ ಧರಣಿ

ಮಂಗಳೂರು: ಜಾಗತೀಕರಣ, ಉದಾರೀಕರಣದ ನೀತಿಗಳನ್ನು ದೇಶ ಅಂಗೀಕರಿಸಿದ ನಂತರದ ದಿನಗಳಲ್ಲಿ ಆರೋಗ್ಯ ಶಿಕ್ಷಣದಂತಹ ಜನತೆಯ ಅತ್ಯಂತ ಮೂಲಭೂತ ಬೇಡಿಕೆಗಳನ್ನು ಸರಕಾರ ಹಂತಹಂತವಾಗಿ ಖಾಸಗೀಕರಣಗೊಳಿಸಿರುವುದು ಇಂದಿನ ಎಲ್ಲಾ ಸಮಸ್ಯೆಗಳ ಮೂಲ. ಬಜೆಟ್‍ನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೀಸಲಿಡುತ್ತಿದ್ದ ಹಣದ ಪ್ರಮಾಣವನ್ನು ಕಡಿತಗೊಳಿಸಿರುವುದು. ಸರಕಾರವೇ ರೂಪಿಸಿರುವ ನಿಯಮಗಳನ್ನು ಕಡೆಗಣಿಸಿ ಸರಕಾರಿ ಆಸ್ಪತ್ರೆಗಳನ್ನು ದುರ್ಬಲಗೊಳಿಸಿರುವುದು ನಮ್ಮ ಕಣ್ಣೆದುರಿಗಿದೆ. ಉದಾಹರಣೆಗೆ ಕರ್ನಾಟಕ ರಾಜ್ಯದ ಖಾಸಗೀ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರಲ್ಲಿ ಅಂಗೀಕಾರಗೊಂಡು ಜಾರಿಗೆ ಬಂದಿದ್ದರೂ ಖಾಸಗೀ ಆಸ್ಪತ್ರೆಗಳು ಆ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹಳೆಯ ಕಾಯ್ದೆಯ ಪ್ರಕಾರವೇ ದರಪಟ್ಟಿಗಳನ್ನು ಖಾಸಗೀ ಆಸ್ಪತ್ರೆಗಳು ಪ್ರದರ್ಶಿಸುವುದು, ಜಿಲ್ಲಾ ಮಟ್ಟದ ರೆಗ್ಯುಲೇಟಿಂಗ್ ಪ್ರಾಧಿಕಾರದ ಸಭೆಗಳು ಎಲ್ಲೂ ನಡೆದದ್ದನ್ನು ಯಾರೂ ಕಂಡಿಲ್ಲ. ಹಾಗೆಯೇ ಸರಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿ ಸರಕಾರವೇ ರೂಪಿಸಿರುವ ನಿಯಮಗಳ ಪ್ರಕಾರ ಜನಸಂಖ್ಯಾಧಾರಿತವಾಗಿ ಪ್ರಾಥಮಿಕ, ಸಮುದಾಯ, ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಸ್ಥಾಪಿಸಲು, ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿಲ್ಲ. ಸರಕಾರದ ನಿರಾಸಕ್ತಿಯಿಂದ ಸರಕಾರಿ ಆಸ್ಪತ್ರೆಗಳು ಹೀನಾಯ ಸ್ಥಿತಿಯಲ್ಲಿರುವುದು ಕಂಡು ಬರುತ್ತಿದೆ.

ವೈದ್ಯರುಗಳ ಕೊರತೆಯಂತೂ ಸರಕಾರಿ ಆಸ್ಪತ್ರೆಗಳಲ್ಲಿ ಎದ್ದು ಕಾಣುತ್ತಿದೆ. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುವ ಬದಲಿಗೆ ದುಡ್ಡುಲ್ಲ ಕುಬೇರರಿಗೆ ಮೆಡಿಕಲ್ ಕಾಲೇಜು ನಡೆಸಲು ಮುಕ್ತ ಅವಕಾಶ ನೀಡಿರುವುದರಿಂದ ವೈದ್ಯಕೀಯ ಪದವಿ ಪಡೆಯಲು ಕೋಟ್ಯಾಂತರ ರೂಪಾಯಿ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಐದಾರು ಕೋಟಿ ಖರ್ಚು ಮಾಡಿ ವೈದ್ಯ ಪದವಿ ಪಡೆದವರು ಕಡಿಮೆ ಆದಾಯ ಎಂಬ ಕಾರಣಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ನಿರಾಕರಿಸುತ್ತಾರೆ. ಖಾಸಗೀ ಆಸ್ಪತ್ರೆಗಳಲ್ಲಿ ರೋಗಿಗಳನ್ನು ತಮಗಿಷ್ಟ ಬಂದಂತೆ ದರ ವಿಧಿಸುತ್ತಾರೆ.

ಸರಕಾರದ ಈ ರೀತಿಯ ನಿಲುವುಗಳಿಂದಾಗಿ ಜನತೆ ಆರೋಗ್ಯಕ್ಕೆ ಸಂಬಂಧಿಸಿ ಗಂಭೀರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ತಮಗುಂಟಾಗುವ ಅನಾರೋಗ್ಯದ ಚಿಕಿತ್ಸೆ ಪಡೆಯಲಾಗದೆ ಪರಿತಪಿಸುತ್ತಿದ್ದಾರೆ. ಇಂತಹ ಸ್ಥಿತಿಗೆ ಕಾರಣವಾಗಿರುವ ಖಾಸಗೀ ಆಸ್ಪತ್ರೆಗಳನ್ನು ನಿಯಂತ್ರಿಸಬೇಕು, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಡಿವೈಎಫ್‍ಐ ರಾಜ್ಯಾದ್ಯಾಂತ ಹೋರಾಟವನ್ನು ಕೈಗೆತ್ತಿಕೊಂಡಿದೆ. ಅದರಂತೆ 2017 ಡಿಸೆಂಬರ್ 4ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ, ಪ್ರತಿಭಟನೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 


Spread the love