ತಲ್ವಾರ್ ಹಿಡಿದು ನೃತ್ಯ ಮಾಡಿ ರೀಲ್ಸ್ ಮಾಡಿದ ವಿಡಿಯೋ ಪೋಸ್ಟ್ – ಇಬ್ಬರ ಬಂಧನ

Spread the love

ತಲ್ವಾರ್ ಹಿಡಿದು ನೃತ್ಯ ಮಾಡಿ ರೀಲ್ಸ್ ಮಾಡಿದ ವಿಡಿಯೋ ಪೋಸ್ಟ್ ಇಬ್ಬರ ಬಂಧನ

ಮಂಗಳೂರು: ತಲ್ವಾರ್ ಹಿಡಿದು ಹಾಡಿಗೆ ನೃತ್ಯ ಮಾಡಿ ರೀಲ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ಬಂದರು ನಿವಾಸಿ ಅಮೀರ್ ಸುಹೇಲ್ (28), ಕಾವೂರು ನಿವಾಸಿ ಸುರೇಶ (29) ಎಂದು ಗುರುತಿಸಲಾಗಿದೆ.

ದಿನಾಂಕ 13-12-2025 ರಂದು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ “Suresh Psy” ಎಂಬ ಖಾತೆ ಮೂಲಕ MOB ಅಸಾಮಿ ಅಮೀರ್ ಸುಹೇಲ್ ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋವನ್ನು VIBES ಹಾಗೂ ಬಿಳಿ ಬಣ್ಣದ ಹಾರ್ಟ್ ಚಿಹ್ನೆಯೊಂದಿಗೆ ಸ್ಟೋರಿ ಆಗಿ ಹಂಚಿಕೊಳ್ಳಲಾಗಿತ್ತು. ಈ ವಿಡಿಯೋ ಸಾರ್ವಜನಿಕರಲ್ಲಿ ಆತಂಕ ಮತ್ತು ಭಯಕ್ಕೆ ಕಾರಣವಾಗಿರುವುದನ್ನು ಗಮನಿಸಿದ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 188/2025 ಕಲಂ 352(2) ಭಾರತೀಯ ನ್ಯಾಯ ಸಂಹಿತೆ2023, 25(1ಬಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ 66 ಐ.ಟಿ. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆ ವೇಳೆ, ದಿನಾಂಕ 13-12-2025 ರಂದು ಆರೋಪಿಗಳನ್ನು ರೀಲ್ಸ್ ಮಾಡಲು ಬಳಸಿದ ತಲ್ವಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್ಗಳ ಸಹಿತ ಬಂಧಿಸಲಾಗಿದೆ.

ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಠಾಣಾ ಸಿಬ್ಬಂದಿಗಳಾದ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ ಮತ್ತು ರಿಯಾಜ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ.


Spread the love