ತಾಂತ್ರಿಕ ವಸ್ತುಪ್ರದರ್ಶನ ಸಮಾರೋಪ

Spread the love

ತಾಂತ್ರಿಕ ವಸ್ತುಪ್ರದರ್ಶನ ಸಮಾರೋಪ

ಮ0ಗಳೂರು: “ದೇಶದ ಅಭಿವೃದ್ಧಿಯಲ್ಲಿ ಕೌಶಲ್ಯಭರಿತ ತಂತ್ರಜ್ಞರ ಪಾತ್ರ ಮಹತ್ವವಾಗಿದೆ. ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುವ ಅಭಿಯಂತರರು ಹಾಗೂ ವಾಸ್ತುಶಿಲ್ಪಿಗಳು ಇಂದಿನ ಬೇಡಿಕೆಯಾಗಿದ್ದಾರೆ. ಆದ್ದರಿಂದ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಪ್ರಸರಿಸಿದ ಸರ್. ಎಂ. ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಪಾಲಿಸಿ, ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಸಕಾಲದಲ್ಲಿ ಗುರುತಿಸಿ, ಬೆಳಗಿಸಿ ತಮ್ಮ ಅಭಿವೃದ್ಧಿಯೊಂದಿಗೆ ರಾಷ್ಟ್ರದ ಉನ್ನತಿಗೆ ವಿನೂತನ ತಾಂತ್ರಿಕತೆಯನ್ನು ಕಂಡುಕೊಳ್ಳುವಲ್ಲಿ ಯುವ ಪ್ರತಿಭೆ ಭಾಗಿಗಳಾಗಬೇಕು” ಎಂದು ಮೈಸೂರು ವಿಭಾಗೀಯ ಉದ್ಯೋಗ ಮತ್ತು ತರಬೇತಿ ಇಲಾಖಾ ಜಂಟಿನಿರ್ದೇಶಕ ಪಿ.ಕೆ. ನಾಗರಾಜ್ ಶಿಕ್ಷಣಾಥಿಗಳಿಗೆ ಕರೆ ನೀಡಿದರು.

engineers-day

ಮಂಗಳೂರು ಕದ್ರಿಹಿಲ್ಸ್‍ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಕೊಡಗು, ದಕ್ಷಿಣಕನ್ನಡ ಹಾಗೂ ಉಡುಪಿ ಇಂಜಿನಿಯರ್ಸ್ ಅಸೋಸಿಯೇಶನ್ಸ್ ಇವರ ಜಂಟಿ ಆಶ್ರಯದಲ್ಲಿ ಇಂಜಿನಿಯರ್ಸ್ ಡೇ 2016 ಆಚರಣೆ ಪ್ರಯುಕ್ತ ಆಯೋಜಿಸಿದ್ದ ತಾಂತ್ರಿಕ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಉಪನಿರ್ದೇಶಕ ಏಕಾಂತ ಸ್ವಾಮಿ, ಕೊಡಗು ದ.ಕ. ಮತ್ತು ಉಡುಪಿ ಇಂಜಿನಿಯರ್ಸ್ ಅಸೋಶಿಯೇಶನ್ (ರಿ) ಇದರ ಮಾಜಿ ಕಾರ್ಯಾಧ್ಯಕ್ಷ ಬಿ.ಪದ್ಮನಾಭ ರೈ, ಕಾರ್ಯದರ್ಶಿ ಎಂ.ದಿವಾಕರ ಶೆಟ್ಟಿ, ಖಜಾಂಜಿ ಪಿ.ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‍ನ ನಿವೃತ್ತ ಪ್ರಾಂಶುಪಾಲ ಎ.ವಿಷ್ಟು ಭಟ್ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆಯ ಪ್ರಾಂಶುಪಾಲ ಗಿರಿಧರ್ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ಪದ್ಮನಾಭ ರೈ ನೆರವೇರಿಸಿದರು.

ಜಿಲ್ಲೆಯ 17 ಐ.ಟಿ.ಐ.ಗಳ ಶಿಕ್ಷಣಾರ್ಥಿಗಳು ತಾಂತ್ರಿಕ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎ.ಜಿ.ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆಯವರು ಪ್ರಥಮ ಸ್ಥಾನವನ್ನು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕದ್ರಿಹಿಲ್ಸ್, ಮಂಗಳೂರು ದ್ವಿತೀಯ ಸ್ಥಾನ ಹಾಗೂ ಸರಸ್ವತಿ ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಣಾರ್ಥಿಗಳು ತೃತೀಯ ಸ್ಥಾನವನ್ನು ಪಡೆದರು.

ಕೊಡಗು ದ.ಕ. ಮತ್ತು ಉಡುಪಿ ಇಂಜಿನಿಯರ್ಸ್ ಅಸೋಶಿಯೇಶನ್ ಹಾಗೂ ಮಂಗಳೂರು ಸ್ಥಳೀಯ ಇನ್‍ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಕೇಂದ್ರದವತಿಯಿಂದ ವಿಜೇತರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಜುಲಿಯನ್ ಆಲ್ವಿನ್ ಡಿಕುನ್ನಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.


Spread the love