ತುಘಲಕ್ ದರ್ಬಾರಿಗೆ ಮತ್ತೊಂದು ಹೆಸರು ನರೇಂದ್ರ ಮೋದಿ- ಶತ್ರುಘ್ನ ಸಿನ್ಹಾ

Spread the love

ತುಘಲಕ್ ದರ್ಬಾರಿಗೆ ಮತ್ತೊಂದು ಹೆಸರು ನರೇಂದ್ರ ಮೋದಿ- ಶತ್ರುಘ್ನ ಸಿನ್ಹಾ

ಮುಡಿಪು: ‘ಕೇವಲ ಸುಳ್ಳು ಭರವಸೆಗಳಿಂದ ದೇಶ ಅಭಿವೃದ್ಧಿ ಕಾಣದು. ಬಡಜನರ ಪರ ಕಾಳಜಿ, ಸಮಾಜಪರ ಅಭಿವೃದ್ಧಿ ಕಾರ್ಯಗಳಿಂದ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ. ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೇರಿರುವ ಮೋದಿ ಅವರು ಕೇವಲ ಒನ್ ಮ್ಯಾನ್ ಶೋ ಆಗಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ. ಅಲ್ಲಿ ಪಕ್ಷಕ್ಕಾಗಿ ದುಡಿದಿರುವಂತಹ ಅಡ್ವಾಣಿಯಂತವರಿಗೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೇ ಬೆಲೆ ಇಲ್ಲದಂತಾಗಿದೆ’ ಎಂದು ಹಿರಿಯ ನಟ ಶತ್ರುಘ್ನ ಸಿನ್ಹಾ ಅಭಿಪ್ರಾಯಪಟ್ಟರು.

ಭಾನುವಾರ ಮುಡಿಪುವಿನಲ್ಲಿ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಅವರು ದೇಶದಲ್ಲಿ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್ಟಿಯನ್ನು ಏಕಾಏಕಿ ತಂದು ದೇಶದಲ್ಲಿ ಅದೆಷ್ಟೋ ವ್ಯಾಪಾರಸ್ಥರು, ಬಡವರು ಸಂಕಷ್ಟವನ್ನು ಎದುರಿಸು ವಂತೆ ಮಾಡಿದ್ದಾರೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಅದನ್ನು ನಾನು ವಿರೋಧಿಸಿದ್ದೆ. ಯಾರಾದರೂ ತಪ್ಪು ಎಂದು ಹೇಳಿದರೂ ಅದನ್ನು ಕೇಳದೆ ಅವರು ಸರ್ವಾಧಿಕಾರಯಂತೆ ವರ್ತಿಸುತ್ತಾರೆ. ನಾನು ಸರ್ವಧರ್ಮ, ಸರ್ವಜಾತಿ ಒಂದೇ ಎಂದು ತಿಳಿದುಕೊಂಡು ಜೀವನ ವನ್ನು ನಡೆಸಿದವನು. ಯಾವಾಗ ನಮ್ಮ ಸೈದ್ಧಾಂತಿಕ ನಿಲುವಿಗೆ, ಜಾತ್ಯತೀತ ತತ್ವಗಳಿಗೆ ಬಿಜೆಪಿ ಯಲ್ಲಿ ಬೆಲೆ ಸಿಗಲಿಲ್ಲವೋ ಪಕ್ಷ ದಿಂದ ಅನಿವಾರ್ಯವಾಗಿ ಹೊರಬರಬೇಕಾಯಿತು’ ಎಂದರು.

‘ರಾಹುಲ್ ಗಾಂಧಿ ದೇಶದ ಭರವಸೆಯ ನಾಯಕರಾಗಿದ್ದಾರೆ. ದೇಶದ ಅಭಿವೃದ್ಧಿಯ ಬಗ್ಗೆ ಕನಸು ಹೊತ್ತಿರುವ ಅವರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿ ಮಿಥುನ್ ರೈ ಅವರನ್ನು ಗೆಲ್ಲಿಸಬೇಕು.ಈ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಕೊಡುವ ಜನರನ್ನು ಆಯ್ಕೆ ಮಾಡಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಸುರೇಶ್ ಶೆಟ್ಟಿ ಮುಂಬೈ, ಇಬ್ರಾಹಿಂ ಕೋಡಿಜಾಲ್ ಇದ್ದರು.


Spread the love