ದತ್ತಮಾಲಾ ಅಭಿಯಾನ: ಉದ್ವಿಗ್ನ ಚಿಕ್ಕಮಗಳೂರನ್ನು ಎರಡೇ ಗಂಟೆಯಲ್ಲಿ ನಿಯಂತ್ರಣಕ್ಕೆ ತಂದ ಅಣ್ಣಾಮಲೈ

Spread the love

ದತ್ತಮಾಲಾ ಅಭಿಯಾನ: ಉದ್ವಿಗ್ನ ಚಿಕ್ಕಮಗಳೂರನ್ನು ಎರಡೇ ಗಂಟೆಯಲ್ಲಿ ನಿಯಂತ್ರಣಕ್ಕೆ ತಂದ ಅಣ್ಣಾಮಲೈ

ಚಿಕ್ಕಮಗಳೂರು: ದತ್ತಜಯಂತಿ ಪ್ರಯುಕ್ತ ಭಾನುವಾರ ಇಲ್ಲಿಗೆ ಸಮೀಪದ ಇನಾಂ ದತ್ತಾತ್ರೇಯ ಪೀಠಕ್ಕೆ ವಿವಿಧೆಡೆಗಳಿಂದ ಬಂದಿದ್ದ ಸಹಸ್ರಾರು ದತ್ತಮಾಲಾಧಾರಿಗಳ ಪೈಕಿ ಒಬ್ಬ ವ್ಯಕ್ತಿ ಆವರಣದ ಬೇಲಿ ಏರಿ ಜಿಗಿದು ನಿರ್ಬಂಧಿತ ಪ್ರದೇಶದಲ್ಲಿ ಭಗವಾದ್ವಜ ನೆಟ್ಟಿದ್ದರ ಪರಿಣಾಮ ಉಂಟಾದ ಬಿಗುವಿನ ಪರಿಸ್ಥಿತಿಯನ್ನು ಸ್ವತಃ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ನೇತೃತ್ವದ ಪೋಲಿಸರ ತಂಡ ಕೇವಲ ಎರಡು ಗಂಟೆಯಲ್ಲಿ ನಿಯಂತ್ರಣಕ್ಕೆ ತರುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದ್ದಾರೆ.

ಇತರ ಕೆಲವು ಭಕ್ತರು ನಿರ್ಬಂಧಿತ ಪ್ರದೇಶದೊಳಗೆ ತೆರಳಿ ಗೋರಿಗೆ ನೆಟ್ಟಿದ್ದ ನಾಮಫಲಕವನ್ನು ಉರುಳಿಸಿದರು. ಇದರಿಂದ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು.

ಕೂಡಲೇ ಪೊಲೀಸರು ಭಗವಾಧ್ವಜ ನೆಟ್ಟ ದತ್ತಭಕ್ತನನ್ನು ನಿಷೇಧಿತ ಪ್ರದೇಶದಿಂದ ಎಳೆದೊಯ್ದುರು. ಈ ಸಂದರ್ಭದ ತಳ್ಳಾಟ ನಡೆದು ಬೇಲಿ ಪಕ್ಕದಲ್ಲಿ ಅಳವಡಿಸಿದ್ದ ಮರದ ಕಟ್ಟಿಗೆಗಳ ಬ್ಯಾರಿಕೇಡ್‌ ನೂಕಾಟದಲ್ಲಿ ಬಿದ್ದಿತು. ಕೆಲವರು ಕೇಸರಿ ಶಲ್ಯಗಳನ್ನು ಗಂಟುಕಟ್ಟಿ ನಿರ್ಬಂಧಿತ ಪ್ರದೇಶದ ಕಡೆಗೆ ತೂರಿದರು.  ನಗರದಲ್ಲಿ ಸಂಜೆ ಕೆಲವು ಕಿಡಿಗೇಡಿಗಳು ಖಾಸಗಿ ಬಸ್‌ ಮೇಲೆ ಕಲ್ಲು ತೂರಿ ಗಾಜು ಪುಡಿಗೊಳಿಸಿದ್ದಾರೆ.

ದತ್ತಪೀಠದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಕೆ.ಅಣ್ಣಾಮಲೈ ಪ್ರತಿಕ್ರಿಯಿಸಿ ಈಗಾಗಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಇನ್ನು ಅರ್ಧ ಗಂಟೆಯಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತೇವೆ. ಘಟನೆಗೆ ಕಾರಣವಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಈಗಾಗಲೇ ಘಟನೆಗೆ ಸಂಬಂಧಪಟ್ಟಂತೆ ಕೆಲವರವನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 307 ಕೇಸ್ ದಾಖಲಾಗಲಿದೆ ಎಂದು ಹೇಳಿದರು.

ನಗರಾದ್ಯಂತ ಪೊಲೀಸರ ಕಟ್ಟೆಚ್ಚರ ಇದ್ದು, ರಸ್ತೆಯ ಪಕ್ಕದಲ್ಲಿ ಯಾರೂ ನಿಲ್ಲದಂತೆ ಸೂಚನೆ ನೀಡಲಾಗಿದೆ.  ಸ್ವತಃ ಎಸ್ಪಿ ಅಣ್ಣಾಮಲೈ ನಗರದಲ್ಲಿ ಗಸ್ತು ತಿರುಗಿ ರಸ್ತೆಯಲ್ಲಿ ಹಾಗೂ ಗುಂಪಾಗಿ ನಿಂತಿದ್ದವರನ್ನು ಮನೆಗೆ ಕಳುಹಿಸಿದ್ದಾರೆ.

ಇನ್ನು ನಗರದ ಎಲ್ಲಾ ಅಂಗಡಿ ಮುಂಗಟ್ಟು ತೆರೆಯದಿರಲು ಆದೇಶ ಹೊರಡಿಸಲಾಗಿದ್ದು, ಚಿಕ್ಕಮಗಳೂರು ನಗರದಲ್ಲಿ ಸಂಪೂರ್ಣ ನಿಶಬ್ದ ವಾತಾವರಣ ನಿರ್ಮಾಣವಾಗಿದೆ.


Spread the love