ದಲಿತರ ಮನೆಯ ಒಳಗೂ ಹೋಗದೆ ಕಾಟಾಚಾರದ ಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ!

Spread the love

ದಲಿತರ ಮನೆಯ ಒಳಗೂ ಹೋಗದೆ ಕಾಟಾಚಾರದ ಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ!

ಉಡುಪಿ: ಅಲೆವೂರು ಗ್ರಾಪಂ ವ್ಯಾಪ್ತಿಯ ಪದವು ಸಿದ್ದಾರ್ಥ ನಗರದ ಕೊರಗರ ಕಾಲೋನಿಯಲ್ಲಿ ರವಿವಾರ   ಆಯೋಜಿಸಿದ ಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ ಕಾರ್ಯಕ್ರಮದಲ್ಲಿ ಕೊರಗರ ಮನೆಯಲ್ಲಿ ಸಹಭೋಜನ ಮಾಡಲು ಬಂದ  ಜಿಪಂ ಅಧ್ಯಕ್ಷರು ಸೇರಿದಂತೆ ಇತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನೆಯ ಒಳಗೂ ಹೋಗದೆ ಕೇಟರಿಂಗ್ ನವರು ತಯಾರಿಸಿದ ಊಟವನ್ನು ಮನೆಯ ಅಂಗಳದಲ್ಲಿ ಹಾಕಿದ ಟೇಬಲ್ ಕುರ್ಚಿಯಲ್ಲಿ ಕುಳಿತು ಊಟ ಮಾಡುವುದರೊಂದಿಗೆ ಕಾಟಾಚಾರದ ಕಾರ್ಯಕ್ರಮ ನಡೆಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಕೊರಗ ಸಮುದಾಯದವರಿಗೆ ಇಲಾಖಾ ಸೌಲಭ್ಯಗಳ ಮಾಹಿತಿ, ಕ್ರೀಡಾಕೂಟ ಹಾಗೂ ಸಹಭೋಜನ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕಾಲೋನಿ ಸಮೀಪದ ಮೈದಾನದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ಕಾರ್ಯಕ್ರಮ, ಕ್ರೀಡಾಕೂಟ ಮತ್ತು ಸಮಾರೋಪ ಸಮಾರಂಭವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು ಉಆಪಧ್ಯಕ್ಷೆ ಶೀಲಾ ಕೆ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಭಾಗವಹಿಸಿದ್ದರು. ಇವರ ಜೊತೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಕೂಡ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಎಲ್ಲರೂ ಸಹಭೋಜನ ನಡೆಸಲು ವ್ಯವಸ್ಥೆ ಕಲ್ಪಿಸಿದ ಸಿದ್ದಾರ್ಥ ನಗರದ ತುಕ್ರ ಕೊರಗ ಅವರ ಮನೆಗೆ ತೆರಳಿ ಅವರ ಮನೆಯ ಒಳಗೂ ಹೋಗದೆ ಹೊರಗಡೆಯೇ ನಿಂತು ಮನೆಯವರ ಕಷ್ಟ ಸುಖವನ್ನು ವಿಚಾರಿಸಿ ಕೆಟರಿಂಗ್ ನವರು ಸಿದ್ದಪಡಿಸಿ ಊಟವನ್ನು ಮನೆಯ ಅಂಗಳದಲ್ಲಿ ಹಾಕಲಾದ ಟೇಬಲ್ ಕುರ್ಚಿಯಲ್ಲಿ ಕುಳಿತು ಊಟ ಮಾಡಿದರು.

ಇದಕ್ಕಿಂತಲೂ ಬೇಸರದ ವಿಷಯವೆಂದರೆ ಇವರೊಂದಿಗೆ ಕೊರಗ ಸಮುದಾಯದ ಒಬ್ಬರಿಗೂ ಕೂಡ ಕುಳಿತುಕೊಳ್ಳಲು ಅವಕಾಶ ನೀಡಿರಲಿಲ್ಲ. ಕೇವಲ ಅಧಿಕಾರಿಗಳು, ಜನಪ್ರತಿನಿಧಿಗಳೇ ಊಟ ಮಾಡಿ ತೆರಳಿದರೆ ಉಳಿದವರಿಗೆ ಮೈದಾನದಲ್ಲೇ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಈ ಕುರಿತು ತುಕ್ರ ಕೊರಗರ ಮನೆಯವರಿಗೆ ಕೇಳಿದರೆ ಕೆಲವು ದಿನಗಳ ಹಿಂದೆ ಅಲೆವೂರು ಗ್ರಾಮ ಪಂಚಾಯತಿಯವರು ಕರೆ ಮಾಡಿ 300 ಮಂದಿಗೆ ಊಟ ವ್ಯವಸ್ಥೆ ಕಲ್ಪಿಸಲು ಕೇಳಿದ್ದರು. ಆದರೆ ಅಷ್ಟು ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲು ಅಸಾಧ್ಯ ಎಂದು ಹೇಳಲಾಗಿತ್ತು. ಅದಕ್ಕೆ ಕರ್ವಾಲಿನ ಕೇಟರಿಂಗ್ ನವರಿಗೆ ಊಟದ ವ್ಯವಸ್ಥೆಯ ಜವಾಬ್ದಾರಿ ನೀಡದ್ದರು. ಏಳೆಂಟು ಮಂದಿಗೆ ಬೇಕಾದ ಊಟವನ್ನು ಮನೆಯವರೇ ಸಿದ್ದಪಡಿಸುತ್ತಿದ್ದೇವೆ ಆದರೆ 300 ಮಂದಿಗೆ ಬೇಕಾದ ಊಟ ತಯಾರಿಸುವುದು ಕಷ್ಟ ಎಂದರು.

ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ವೆಂಕಟೇಶ್ ಅವರು ಜಿಲ್ಲೆಯ ಅಧಿಕಾರಿಗಳು ಕೊರಗರ ಮೆನಯಲ್ಲಿ ಸಹಭೋಜನ ಮಾಡುವ ಕುರಿತು ದಲಿತರ ಅಭಿವೃದ್ದಿಯ ಕುರಿತಾದ ಸಭೆಯಲ್ಲಿ ತಿಳಿಸಿದ್ದರು. ಅದರಂತೆ ರವಿವಾರ ಜಿಲ್ಲಾಡಳಿತ ಕಾರ್ಯಕ್ರಮ ಆಯೋಜಿಸಿದ್ದು, ಸ್ಥಳೀಯ ಶಾಸಕರನ್ನು, ಕಡೆಗಣಿಸಿ. ಕೇವಲ ಬಿಜೆಪಿ ನಾಯಕರಿಗೆ ಮಾತ್ರ ಆಹ್ವಾನ ನೀಡಿ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ರಾಜಕೀಯ ಪಕ್ಷದ ಬಣ್ಣ ನೀಡಿರುವುದು ವಿಪರ್ಯಾಯಸ ಎಂದು ಕೆಲವೊಂದು ಗ್ರಾಮಪಂಚಾಯತ್ ಸದಸ್ಯರು.

ಏನೇ ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ತುಕ್ರ ಕೊರಗರ ಮನೆಯೋಳಗೆ ಬಂದು ಕೊರಗರೊಂದಿಗೆ ಕೂತು ಊಟ ಮಾಡುತ್ತಿದ್ದರೆ ಅದನ್ನು ಸಹಭೋಜನ ಎನ್ನಬಹುದಿತ್ತು ಆದರೆ ಇವರೇ ಅಂಗಳದಲ್ಲಿ ಕುರ್ಚಿಯಲ್ಲಿ ಕುಳಿತು ಊಟ ಮಾಡಿ ಹೋದರೆ ಹೇಗೆ ಸಹಭೋಜನ ಆಗುತ್ತದೆ ಎನ್ನುವುದು ಸ್ಥಳೀಯ ಅಭಿಪ್ರಾಯ.

ಶಿಕ್ಷಣ , ಮಾಹಿತಿಯಿಂದ ಕೊರಗ ಜನಾಂಗ ಅಭಿವೃದ್ದಿ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಜಿಲ್ಲೆಯ ಮೂಲ ನಿವಾಸಿ ಕೊರಗ ಸಮುದಾಯ ಶಿಕ್ಷಣ ಮತ್ತು ಮಾಹಿತಿಯ ಕೊರತೆಯಿಂದ ಹಿಂದುಳಿದಿದ್ದು, ಈ ಸಮುದಾಯಕ್ಕೆ ಅಗತ್ಯ ಶಿಕ್ಷಣ ಮತ್ತು ಮಾಹಿತಿ ನೀಡುವುದರಿಂದ ಇತರೆ ಸಮುದಾಯಗಳಂತೆ ಈ ಸಮುದಾಯದ ಅಭಿವೃದ್ದಿ  ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

 ಅವರು ಭಾನುವಾರ ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ನಡೆದ ಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಉಡುಪಿ ಜಿಲ್ಲೆಯು ಎಲ್ಲ ಕ್ಷೇತ್ರದಲ್ಲಿ ಮುಂದುವರೆದಿದ್ದು, ಜಿಲ್ಲೆಯ  ಮಾವ ಸೂಚ್ಯಂಕ ವರದಿಯು ರಾಜ್ಯದಲ್ಲೆ ಪ್ರಥಮ ಸ್ಥಾನದಲ್ಲಿದೆ. ಆದರೆ ಜಿಲ್ಲೆಯ ಕೊರಗ ಸಮುದಾಯ ಮಾತ್ರ  ಅಭಿವೃದ್ದಿಯಿಂದ ಹಿಂದೆ ಉಳಿದಿದ್ದು, ಈ ಸಮುದಾಯದವರಿಗೆ ಸರ್ಕಾರದ ಕಾರ್ಯಕ್ರಮಗಳ ಕುರಿತು ಪೂರ್ಣ ಮಾಹಿತಿ ಮತ್ತು ಶಿಕ್ಷಣ ಸೌಲಭ್ಯ ಒದಗಿಸಬೇಕಾಗಿದೆ, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳು ಮತ್ತು ಗ್ರಾಮ ಪಂಚಾಯತ್ ಗಳು ತಮ್ಮ ವ್ಯಾಪ್ತಿಯಲ್ಲಿನ ಕೊರಗ ಕಾಲೋನಿಗಳಿಗೆ ಭೇಟಿ ನೀಡಿ, ಮಾಹಿತಿ ನೀಡುವ ಕಾರ್ಯಕ್ರಮ ನಡೆಯುತ್ತಿದೆ, ಹಲವಾರು ವರ್ಷಗಳಿಂದ ಶೋಷಣೆಗೆ  ಒಳಗಾಗಿರುವ ಈ ಸಮುದಾಯದಲ್ಲಿ ಬದಲಾವಣೆ ತರಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

   ಅತ್ಯಂತ ಮುಗ್ದರಾಗಿರುವ ಕಾರಣ ಈ ಸಮುದಾಯದ ನಿರಂತರ ಶೋಷಣೆ ನಡೆಯುತ್ತಿದೆ, ಕೊರಗ ಸಮುದಾಯದವರು ಶಿಕ್ಷಣ ಪಡೆದು , ತಮ್ಮಲ್ಲಿನ ಕೀಳಿರಿಮೆಯಿಂದ ಹೊರಬರಬೇಕಾಗಿದೆ, ನಿರಾಶದಾಯಕ ಭವನೆಗಳನ್ನು ಬಿಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿಯೊಬ್ಬರೂ ಜಾಬ್ ಕಾರ್ಡ್ ಮಾಡಿಸಿಕೊಂಡು ವೈಯಕ್ತಿಕ ಮತ್ತು ಸಮುದಾಯಿಕ ಅಭಿವೃದ್ದಿ ಕಾರ್ಯಗಳನ್ನು ಮಾಡುವಂತೆ ಹಾಗೂ ಐಟಿಡಿಪಿ ಇಲಾಖೆ ಹಾಗೂ ಇತರೆ ಇಲಾಖೆಗಳಲ್ಲಿ ತಮಗೆ ಇರುವ ಇರುವ ಕಾರ್ಯಕ್ರಮಗಳ ಮಾಹಿತಿ ಪಡೆದು, ಸೌಲಭ್ಯಗಳ ಸದುಪಯೋಗ ಪಡೆಯಿರಿ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ ಬಾಜು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಅಲೆವೂರು ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ನಾಯಕ್, ತಾ.ಪಂ. ಸದಸ್ಯೆ ಬೇಬಿ ರಾಜೇಶ್, ನೀಲಾವರ ಮಹಿಷ ಮರ್ಧಿನಿ ದೇವಾಲಯದ ಆಡಳಿತ ಮೊಕ್ತೇಸರ ಸುಪ್ರಸಾದ್ ಶೆಟ್ಟಿ, ಪಿಡಿಓ ಬೂದ ಪೂಜಾರಿ, ಕೊರಗ ಮುಖಂಡರಾದ ರವಿ, ಲಕ್ಷ್ಮಿ , ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

 ಸುಂದರಿ ಮತ್ತು ತುಕ್ರ ಕೊರಗ ದಂಪತಿಯ ಮನೆಯಲ್ಲಿ ಜಿಲ್ಲಾಧಿಕರಿಗಳು ಹಾಗೂ ಜನಪ್ರತಿನಿಧಿಗಳಿಂದ ಸಹಭೋಜನ ಕಾರ್ಯಕ್ರಮ ನಡೆಯಿತು.

 ವಿವಿಧ ಸ್ಪರ್ದೇಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಅಲೆವೂರು ಗ್ರಾ.ಪಂ. ಪಿಡಿಓ ಬೂಧ ಪೂಜಾರಿ ಸ್ವಾಗತಿಸಿದರು,   ಅಧ್ಯಕ್ಷ ಶ್ರೀಕಾಂತ ನಾಯಕ್ ವಂದಿಸಿದರು.

 


Spread the love