ದೀಪದ ಎಣ್ಣೆ ಪಡೆಯಲು ಬಂದವರಿಗೆ ಸೀಡ್ ಬಾಲ್ ನೀಡಿ ಪರಿಸರ ಜಾಗೃತಿ ಮೂಡಿಸುವ ಗೋವಿಂದ ಪೂಜಾರಿ

Spread the love

ದೀಪದ ಎಣ್ಣೆ ಪಡೆಯಲು ಬಂದವರಿಗೆ ಸೀಡ್ ಬಾಲ್ ನೀಡಿ ಪರಿಸರ ಜಾಗೃತಿ ಮೂಡಿಸುವ ಗೋವಿಂದ ಪೂಜಾರಿ

ಉಡುಪಿ: ದೇವಸ್ಥಾನಕ್ಕೆ ಪೂಜೆಗಾಗಿ ಅಂಗಡಿಗೆ ಎಣ್ಣೆ ಪಡೆಯೋಕೆ ಬಂದ ಗಿರಾಕಿಗಳಿಗೆ ಸೀಡ್ ಬಾಲ್ ನೀಡುವ ಮೂಲಕ ಇಲ್ಲಿಯ ಅಂಗಡಿಯ ಮಾಲಕರು ಪರಿಸರ ಪ್ರೇಮ ಬೆಳೆಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಉಡುಪಿ ಜಿಲ್ಲೆಯ ಸಾಸ್ತಾನ ಊರು ಇಂದು ಜಗತ್ಪ್ರಸಿದ್ದ, ಹಲವು ರೀತಿಯ ಸಾಧನೆಗಳನ್ನು ಮಾಡಿದವರು ಇಲ್ಲಿ ಇದ್ದರೂ, ಇತ್ತೀಚೆಗೆ ಕೆಲವೊಂದು ಸಮಾನ ಮನಸ್ಕ ಯುವಕರು ಸೇರಿ ಆರಂಭಿಸಿದ ಸಾಸ್ತಾನ ಮಿತ್ರರು ತಂಡ ತಮ್ಮ ಪರಿಸರ ಕಾಳಜಿ ಹಾಗೂ ಜಾಗೃತಿಯ ಮೂಲಕ ಜಗತ್ತಿಗೆ ಸಾಸ್ತಾನವನ್ನು ಪರಿಚಯಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಸರ್ವಧರ್ಮೀಯರು ಅನೋನ್ಯತೆಯಿಂದ ಬಾಳುತ್ತಿರುವ ಈ ಊರಿನಲ್ಲಿ ಇರುವ ಹಲವಾರು ದೇವಾಲಯಗಳಲ್ಲಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆಡು ಭಾಷೆಯಲ್ಲಿ ಈಶ್ವರ ದೇವಸ್ಥಾನ ಅಥವಾ ಈಶ್ವರ ಮಠ ಎಂದೇ ಪ್ರಸಿದ್ದ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಿಂದೂ ಮತ್ತು ಕ್ರೈಸ್ತ ಧರ್ಮಿಯರ ಸಂಗಮ ಎಂಬಂತೆ ಚರ್ಚು ಮತ್ತು ದೇವಸ್ಥಾನ ಎದುರು ಬದರಾಗಿ ಇದ್ದು ಧಾರ್ಮಿಕ ಸೌಹಾರ್ದತೆಯನ್ನು ಮೆರೆಯುತ್ತಿದೆ.

ಈ ಈಶ್ವರ ದೇವಸ್ಥಾನಕ್ಕೆ ಸೋಮವಾರದಂದು ಪೂಜೆ ಸಲ್ಲಿಸಲು ಬರುವ ಭಕ್ತರ ಸಂಖ್ಯೆ ಸಾವಿರಕ್ಕೂ ಅಧಿಕ. ಪ್ರತಿ ಸೋಮವಾರ ಭಕ್ತರು ದೇವಸ್ಥಾನಕ್ಕೆ ಬಂದು ಎಣ್ಣೆಯನ್ನು ಹಾಕಿ ದೀಪ ಹಚ್ಚಿ ಪೂಜೆ ಸಲ್ಲಿಸುವುದು ವಾಡಿಕೆ. ದೇವಸ್ಥಾನದ ಪಕ್ಕದಲ್ಲಿನ ಅಂಗಡಿಗಳಿಂದ ಎಣ್ಣೆಯನ್ನು ಖರೀದಿಸುವ ಭಕ್ತರು ಪೂಜೆ ಮಾಡಿ ವಾಪಾಸು ಮನೆಗೆ ತೆರಳುತ್ತಾರೆ.

ಆದರೆ ದೇವಸ್ಥಾನದ ಪಕ್ಕದಲ್ಲಿಯೇ ಒಂದು ಅಂಗಡಿ ಇದ್ದು, ಕಳೆದ ಹಲವಾರು ವರ್ಷಗಳಿಂದ ಈ ಅಂಗಡಿಯನ್ನು ಗೋವಿಂದ ಪೂಜಾರಿ ಎನ್ನುವ ವ್ಯಕ್ತಿ ನಡೆಸುತ್ತಿದ್ದು ಭಕ್ತರಿಗೆ ದೇವಸ್ಥಾನಕ್ಕೆ ಬೇಕಾದ ಎಣ್ಣೆಯನ್ನು ಒದಗಿಸುವುದರೊಂದಿಗೆ ಇತರ ಸಾಮಾನುಗಳು ಕೂಡ ಇಲ್ಲಿ ದೊರೆಯುತ್ತವೆ. ಆದರೆ ಸಾಸ್ತಾನದಲ್ಲಿ ಯುವಕರು ಸೇರಿ ಪರಿಸರ ಉಳಿಸುವ ನಿಟ್ಟಿನಲ್ಲಿ ಆರಂಭಿಸಿದ ಸಾಸ್ತಾನ ಮಿತ್ರರ ಪರಿಸರ ಕಾಳಜಿಗೆ ಈ ಅಂಗಡಿಯ ಗೋವಿಂದ ಪೂಜಾರಿ ಕೂಡ ಕೈ ಜೋಡಿಸಿದ್ದಾರೆ. ಸಾಸ್ತಾನ ಮಿತ್ರರು ಇತ್ತೀಚೆಗೆ ತಯಾರಿಸಿದ ಸೀಡ್ ಬಾಲ್ (ಬೀಜದುಂಡೆಗಳು) ಹಲವು ಕಡೆಗೆ ಜನರು ಕೇಳಿ ಕೊಂಡು ಹೋಗುತ್ತಿದ್ದು, ಗೋವಿಂದ ಪೂಜಾರಿಯವರು ಕೂಡ ಅವರ ಅಂಗಡಿಯಲ್ಲಿ ದೇವರಿಗೆ ದೀಪದ ಎಣ್ಣೆ ಜೊತೆ ಒಂದೊಂದು ಸೀಡ್ ಬಾಲ್ (ಬೀಜದುಂಡೆ) ವಿತರಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಮೂಲಕ ಸಾಸ್ತಾನ ಮಿತ್ರರ ಪರಿಸರ ಕಾಳಜಿಗೆ ತಮ್ಮ ವಿಶೇಷ ಬೆಂಬಲವನ್ನು ನೀಡುತ್ತಿದ್ದಾರೆ.

ಸಾಸ್ತಾನ ಮಿತ್ರರು ತಂಡ ಪರಿಸರ ಕಾಳಜಿಗೆ ಹಲವಾರು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸೆಲ್ಫಿ ವಿತ್ ಗ್ರೀನ್, ಹಕ್ಕಿಗಳಿಗೆ ಬೇಸಿಗೆ ಕಾಲದಲ್ಲಿ ನೀರು, ಪರಿಸರ ಸ್ವಚ್ಚತೆ ಹೀಗೆ ಹತ್ತು ಹಲವು ರೀತಿಯಲ್ಲಿ ಪರಿಸರ ಕಾಳಜಿ ಮೆರೆಯುತ್ತಿರುವುದು ಶ್ಲಾಘನೀಯ ಸಂಗತಿ. ಸಾಸ್ತಾನ ಮಿತ್ರರು ತಂಡವನ್ನು ಸಾಸ್ತಾನದ ಯುವಕ ಹ.ರಾ. ವಿನಯಚಂದ್ರ ಮುನ್ನಡೆಸುತ್ತಿದ್ದಾರೆ. ಅವರ ಬೆಂಬಲಕ್ಕೆ ಊರಿಯ ಯುವ ಪಡೆ ನಿಂತು ಸಹಕರಿಸುತ್ತಿದೆ.


Spread the love