ದೇವರು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಜನಪದರಲ್ಲಿ ಬೇರೂರಿದೆ-ಡಾ. ಅಂಬಳಿಕೆ ಹಿರಿಯಣ್ಣ

Spread the love

ದೇವರು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಜನಪದರಲ್ಲಿ ಬೇರೂರಿದೆ-ಡಾ. ಅಂಬಳಿಕೆ ಹಿರಿಯಣ್ಣ

ಮೂಡುಬಿದಿರೆ: ಜನರ ಬದುಕಿನಲ್ಲಿ ಆರಾಧನೆ ವಿಶೇಷ ಮಹತ್ವ ಪಡೆದಿದೆ. ತಮ್ಮ ಜೀವನದ ಆಗುಹೋಗುಗಳಲ್ಲಿ ದೇವಾನುದೇವತೆಗಳ ಪ್ರಭಾವ ಇದ್ದೇ ಇರುತ್ತದೆ ಎಂದು ಡಾ. ಅಂಬಳಿಕೆ ಹಿರಿಯಣ್ಣ ಹೇಳಿದರು. ಆಳ್ವಾಸ್ ನುಡಿಸಿರಿಯ ಮೂರನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ `ಕರ್ನಾಟಕ ದರ್ಶನ ಸಾಹಿತ್ಯ’ ಎಂಬ ವಿಚಾರಗೋಷ್ಠಿಯಲ್ಲಿ ಜನಪದ ಆರಾಧನೆ ಕುರಿತು ಅವರು ಮಾತನಾಡಿದರು.

`ತನ್ನ ಆಲೋಚನೆ ಮತ್ತು ರೂಪಾಂತರಗಳಿಗೆ ಪ್ರೇರಣೆಯಾದ ಪ್ರಕೃತಿಯ ಅಗೋಚರ ಶಕ್ತಿಗಳನ್ನು ಆರಾಧಿಸುತ್ತಾ ಬಂದ ಮನುಷ್ಯ ಪ್ರಕೃತಿಯ ವೈರುಧ್ಯಗಳನ್ನು ಕಂಡು ಬೆರಗಾದ. ಮೊದ ಮೊದಲು ಭಯದಿಂದ ಈ ಶಕ್ತಿಗಳನ್ನು ಆರಾಧಿಸಲು ಆರಂಭಿಸಿದ. ಕ್ರಮೇಣ ಪ್ರಕೃತಿಯಲ್ಲಿನ ಚರಾಚರ ವಸ್ತುಗಳಲ್ಲೆಲ್ಲಾ ದೈವತ್ವದ ಅಂಶಗಳನ್ನು ಕಂಡುಕೊಂಡ. ಹರಿಯುವ ನೀರು, ಉರಿಯುವ ಸೂರ್ಯ, ಗಿಡ, ಮರ ಕಲ್ಲುಗಳಲ್ಲಿ ಚೈತನ್ಯವನ್ನು ಕಂಡ. ಅವುಗಳನ್ನು ಪೂಜಿಸತೊಡಗಿದ. ಆದ್ದರಿಂದಲೇ ಹಳ್ಳಿಗಾಡಿನ ಗುಡಿ ಗುಡಾರಗಳ ಉದ್ಭವ ಮೂರ್ತಿಗಳೆಲ್ಲವೂ ಬಹುಪಾಲು ಶಿಲೆಗಳು ವೃಕ್ಷಗಳೇ ಆಗಿವೆ. ಇವುಗಳಿಗೆಲ್ಲಾ ಗುಡಿಗೋಪುರಗಳನ್ನು ಕಟ್ಟಿಕೊಂಡು ಅವುಗಳನ್ನೇ ಭಕ್ತಿಯಿಂದ ಆರಾಧಿಸುತ್ತಾ ಬಂದ. ಹೀಗೆ ಜನಪದ ಆರಾಧನೆ ಬೆಳೆದು ಬಂತು’ ಎಂದು ಹೇಳಿದರು.

ಅರ್ಚನೆ ಹಾಗೂ ಪೂಜಾಪ್ರಕಾರಗಳ ಬಗ್ಗೆ ವಿವರಿಸಿದ ಡಾ.ಅಂಬಳಿಕೆ ಹಿರಿಯಣ್ಣ, ಎಲ್ಲಾ ಮತಧರ್ಮಗಳಲ್ಲಿಯೂ ಸಾಮಾನ್ಯವಾಗಿ ಕಂಡು ಬರುವ ಒಂದು ಸಂಗತಿಯೆಂದರೆ `ಅರ್ಚನೆ’. ಪೂಜ್ಯ ಭಾವನೆ ಅರ್ಚನೆಗೆ ಆಧಾರ. ದಾರಿ ಬದಿಯಲ್ಲಿ ಬಿದ್ದಿರುವ ಒಂದು ಕಲ್ಲು ಕೂಡ ಅರ್ಚನೆಗೆ ಒಳಗಾಗುವಲ್ಲಿ ನಮ್ಮ ಜನಪದರ ಮುಗ್ಧತೆಯಿದೆ. ಯಾವುದೇ ಒಂದು ವಸ್ತುವಿಗೆ ಪೂಜ್ಯಸ್ಥಾನ ನೀಡಿ ವಿಧ್ಯುಕ್ತವಾಗಿ ಗೌರವಿಸುವುದೇ ಅರ್ಚನೆ. ಅಂಥಹ ವಸ್ತು ಮಾನಸಿಕವಾಗಿರಬಹುದು ಅಥವಾ ಭೌತಿಕವಾಗಿರಬಹುದು. ಪ್ರತಿಯೊಂದು ಧರ್ಮದಲ್ಲಿಯೂ ಅದರದೇ ಆದ ಅರ್ಚನಾ ರೀತಿ ನೀತಿಗಳಿವೆ. ಪೂಜ್ಯಭಾವ ತೋರುವಲ್ಲಿಯೂ ಅನೇಕ ಪ್ರಕಾರಗಳಿವೆ. ಈ ಪ್ರಕಾರಗಳು ಧರ್ಮಕ್ಕನುಗುಣವಾಗಿ, ನಂಬಿಕೆಗಳಿಗನುಗುಣವಾಗಿ ಭಿನ್ನರೂಪಗಳನ್ನು ಪಡೆದುಕೊಂಡಿದ್ದರೂ ಅವೆಲ್ಲದರ ಹಿಂದೆ ಇರುವ ಭಾವ ಒಂದೇ ಅದುವೇ ಆರಾಧನೆ ಎಂದು ತಿಳಿಸಿದರು.
ಮಾನವಶಾಸ್ತ್ರಜ್ಞರು, ಅಧ್ಯಯನದ ಸೌಲಭ್ಯಕ್ಕಾಗಿ, ಆರಾಧನೆಗಳನ್ನು ಮೂರು ಮುಖ್ಯ ವಿಭಾಗಗಳನ್ನಾಗಿ ಮಾಡಿಕೊಳ್ಳುತ್ತಾರೆ ಎಂದ ಅವರು ಆರಾಧನೆಗಳ ಬಗ್ಗೆ ವಿವರಿಸಿದರು. ಮೊದಲನೇಯದು ಧಾರ್ಮಿಕ ಆರಾಧನೆ, ಎರಡನೇಯದು ಮಾಂತ್ರಿಕ ಆರಾಧನೆ, ಮೂರನೇಯದು ಮಾಟಮೋಡಿ. ವಿಭಾಗಘಳು ಎಷ್ಟೇ ಇದ್ದರೂ ಅವೆಲ್ಲ ಮಾನವನ ಜೀವನ ದೃಷ್ಟಿ, ನಂಬಿಕೆ, ಆಶೋೀತ್ತರಗಳನ್ನೇ ಒಳಗೊಳ್ಳುತ್ತವೆ. ಇಲ್ಲಿ ಮನುಷ್ಯನ ಭಾವ ಪ್ರಪಂಚಕ್ಕೆಸಂಬಂಧಿಸಿದ ಆರಾಧನೆಗಳಿವೆ, ನೈಸರ್ಗಿಕ ಕ್ರಿಯೆಗಳಿಗೆ ಸಂಬಂಂಧಿಸಿದ ಆರಾಧನೆಗಳಿವೆ, ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಆರಾಧನೆಗಳಿವೆ, ಸಾಮಾಜಿಕ ರೂಪಾಂತರಗಳಿವೆ, ಆರ್ಥಿಕ ಚಟುವಟಿಕೆಗಳಿಗೆ ಅಂಬಂಧಿಸಿದ ಆರಾಧನೆಘಳಿವೆ ಇವೆಲ್ಲವೂ ಮಾನವನ ಜೀವನದಲ್ಲಿ ಪ್ರಮುಖ ಪಾತ್ರವನ್ನು ಪಡೆದುಕೊಂಡಿವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಮಲ್ಲಿಕಾ ಎಸ್. ಘಂಟಿ ಉಪಸ್ಥಿತರಿದ್ದರು.

ವರದಿ: ಕಾವ್ಯ ಗೌಡ, ಆಳ್ವಾಸ್ ಪತ್ರಿಕೋದ್ಯಮ ವಿಭಾಗ


Spread the love