ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ: ಬುಕ್ಕಿಯ ಸೆರೆ
ಮಂಗಳೂರು: ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮತ್ತು ಮಟ್ಕಾ ದಂಧೆ ನಡೆಸುತ್ತಿದ್ದು, ಹಲವು ತಿಂಗಳಿನಿಂದ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಬುಕ್ಕಿಯೊಬ್ಬನನ್ನು ನಗರ ಅಪರಾಧ ದಳದ (ಸಿಸಿಬಿ) ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೊಣಾಜೆ ನಿವಾಸಿ ವಿಶ್ವಾಸ್ (40) ಬಂಧಿತ ಆರೋಪಿ. ಈತನಿಂದ ₹ 5,200 ನಗದು, ಮೊಬೈಲ್ ಮತ್ತು ಕಾರು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ತಮ್ಮ ಡೆಂಝಿಲ್ ಎಂಬಾತ ಕೂಡ ಬೆಟ್ಟಿಂಗ್ ದಂಧೆಯಲ್ಲಿ ಪ್ರಮುಖನಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.
ವಿಶ್ವಾಸ್ ಗೋವಾದಲ್ಲಿದ್ದುಕೊಂಡು ಪ್ಲೇ 365 ಆ್ಯಪ್ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಡೆಂಝಿಲ್ ಈತನಿಗೆ ಸಹಾಯ ಮಾಡುತ್ತಿದ್ದ. ಆತನ ಮೂಲಕ ನಗರದಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ. ಡೆಂಝಿಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ತೊಡಗಿಸುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದ. ಆನ್‍ಲೈನ್ ಮೂಲಕವೇ ಹಣದ ವಹಿವಾಟು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವಾಸ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಕೆಲವು ತಿಂಗಳ ಹಿಂದೆಯೇ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿ ಗೋವಾದಲ್ಲಿ ತಲೆಮರೆಸಿಕೊಂಡ ಕಾರಣ ಬಂಧನ ಸಾಧ್ಯವಾಗಿರಲಿಲ್ಲ.
ಗುರುವಾರ ಆರೋಪಿಯು ನಗರಕ್ಕೆ ಬಂದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿ ವಿಶ್ವಾಸ್‌ನನ್ನು ಬಂಧಿಸಿದ್ದಾರೆ. ಈತನ ತಮ್ಮ ಡೆಂಝಿಲ್ ಮಹಾರಾಷ್ಟ್ರಕ್ಕೆ ತೆರಳಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ವಿಶ್ವಾಸ್ ನಗರದಲ್ಲಿ ಬೆಟ್ಟಿಂಗ್ ಜೊತೆಯಲ್ಲೇ ಮಟ್ಕಾ ದಂಧೆಯನ್ನೂ ನಡೆಸುತ್ತಿದ್ದ. ಕ್ರಿಕೆಟ್ ವಿಶ್ವಕಪ್ ವೇಳೆಯೂ ಬೆಟ್ಟಿಂಗ್ ದಂಧೆ ನಡೆಸಲು ಸಂಚು ರೂಪಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ನಾಲ್ಕು ಪ್ರಕರಣಗಳಿವೆ. ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ಮಂಗಳೂರು ಪೂರ್ವ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
            












