ನಶಾ ಮುಕ್ತ ಉಡುಪಿಗೆ ಯೋಜನೆ ರೂಪಿಸಿ : ಜಿಲ್ಲಾಧಿಕಾರಿ ಜಿ.ಜಗದೀಶ್

Spread the love

ನಶಾ ಮುಕ್ತ ಉಡುಪಿಗೆ ಯೋಜನೆ ರೂಪಿಸಿ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸರಬರಾಜು, ಬಳಕೆಯನ್ನು ಸಂಪೂರ್ಣವಾಗಿ ನಿಗ್ರಹಿಸಿ, ಉಡುಪಿಯನ್ನು ನಶಾ ಮುಕ್ತ ಉಡುಪಿ ಜಿಲ್ಲೆಯನ್ನಾಗಿ ರೂಪಿಸಲು ಅಗತ್ಯವಿರುವ ಯೋಜನೆಗಳನ್ನು ಸಿದ್ದಪಡಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ , ನಶಾ ಮುಕ್ತ ಭಾರತ್ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ನಶಾ ಮುಕ್ತ ಭಾರತ ಶಿಬಿರ ಆಯೋಜಿಸಬೇಕಿದೆ, ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯೊನ್ಮುರಾಗುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಂತೆ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರತಿ ಶಾಲಾ ಕಾಲೇಜುಗಳಲ್ಲಿ ಪ್ರತ್ಯೇಕ ಕ್ಲಬ್ ಗಳನ್ನು ರಚಿಸಿ, ಅದರ ಮೂಲಕ ವಿವಿಧ ಚಟುವಟಿಕೆ , ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಯಾವುದೇ ಶಾಲೆ ಅಥವಾ ಕಾಲೇಜಿನ ಕ್ಯಾಂಪಸ್ ಗಳಲ್ಲಿ ಮಾದಕ ವಸ್ತುಗಳ ಬಳಕೆ ಪ್ರಕರಣ ಕಂಡುಬAದಲ್ಲಿ ಆ ಸಂಸ್ಥೆಯ ಮುಖ್ಯಸ್ಥರ ವಿರುದ್ದ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಮಾದಕ ವಸ್ತುಗಳ ಬಳಕೆ ನಡೆಯುತ್ತಿರುವ ಬಗ್ಗೆ, ಸರಬರಾಜು ಬಗ್ಗೆ ಮತ್ತು ಮಾದಕ ವ್ಯವನಿಗಳ ಕುರಿತು ಮಾಹಿತಿ ನೀಡಲು ಪ್ರತ್ಯೇಕ ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿ. ಪ್ರತ್ಯೇಕ ಫೇಸ್ ಬುಕ್ ಪೇಜ್ ರಚಿಸಿ, ಮಾದಕ ವಸ್ತುಗಳ ಬಳಕೆಯ ಅಪಾಯ, ಇದರ ನಿಯಂತ್ರಣ ಕುರಿತು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಪ್ರಗತಿ ವರದಿಯನ್ನು ಇದರಲ್ಲಿ ಅಳವಡಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿನ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆದು, ಸ್ವಯಂ ಸೇವಕರನ್ನು ನೇಮಿಸಿಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸ್ವಯಂ ಸೇವಕರಿಗೆ ಗುರುತಿನ ಚೀಟಿ ನೀಡಿ, ತಾಲೂಕು ಮಟ್ಟದಲ್ಲಿಯೂ ಸಹ ಸಮಿತಿ ರಚಿಸಿಕೊಂಡು ಕಾರ್ಯ ನಿರ್ವಹಿಸಿ, ಜಿಲ್ಲೆಯಲ್ಲಿನ ಡಿ ಅಡಿಕ್ಷನ್ ಸೆಂಟರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ , ವ್ಯಸನಿಗಳಿಗೆ ಕೌನ್ಸಿಲಿಂಗ್ ನೀಡಲು ವ್ಯವಸ್ಥೆ ಮಾಡಿ ಎಂದು ಡಿಸಿ ಜಿ.ಜಗದೀಶ್ ಹೇಳಿದರು.

ಜಿಲ್ಲೆಯೊಳಗೆ ಮಾದಕ ವಸ್ತುಗಳ ಸರಬರಾಜು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಪರಿಶೀಲನೆ, ಅನಿರೀಕ್ಷಿತ ದಾಳಿಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಡಿಡಿಪಿಯ ಶೇಷಶಯನ ಕಾರಿಂಜ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love