ನಿಖರ ಮಾಹಿತಿ ನೀಡಿ ಆರ್ಥಿಕ ಗಣತಿ ಯಶಸ್ವಿಗೊಳಿಸಿ- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್

Spread the love

ನಿಖರ ಮಾಹಿತಿ ನೀಡಿ ಆರ್ಥಿಕ ಗಣತಿ ಯಶಸ್ವಿಗೊಳಿಸಿ- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ 

ಮಂಗಳೂರು: ಜಿಲ್ಲೆಯಲ್ಲಿ ಇಂದಿನಿಂದ 7 ನೇ ಆರ್ಥಿಕ ಗಣತಿ ಆರಂಭವಾಗಿದ್ದು, ಮೂರು ತಿಂಗಳುಗಳ ಕಾಲ ಜಿಲ್ಲೆಯಾದ್ಯಂತ ನಡೆಯಲಿರುವ ಗಣತಿಯಲ್ಲಿ ಸಂಘಟಿತ ಹಾಗೂ ಅಸಂಘಟಿತ ಆರ್ಥಿಕ ವಲಯಗಳ ಬಗ್ಗೆ ಮಾಹಿತಿಯನ್ನು ಗಣತಿದಾರರು ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಗಣತಿದಾರರಿಗೆ ನಿಖರವಾದ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್ಥಿಕ ಗಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತೀ 5 ವರ್ಷಕೊಮ್ಮೆ ಈ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಆರ್ಥಿಕ ಗಣತಿಯಲ್ಲಿ ನಗರ ಮತ್ತು ಗ್ರಾಮೀಣ ಸೇರಿದಂತೆ ಜಿಲ್ಲೆಯ ಭೌಗೋಳಿಕ ಗಡಿಯೊಳಗೆ ನೆಲೆಗೊಂಡಿರುವ ಎಲ್ಲಾ ಉದ್ದಿಮೆಗಳ/ಘಟಕಗಳಲ್ಲಿ ಜರುಗುತ್ತಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಸಂಗ್ರಹಿಸಲಾಗುತ್ತದೆ. ಗಣತಿಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಯೋಜನೆಗಳನ್ನು ರೂಪಿಸುವ ಉದ್ದೇಶಕ್ಕೆ ಮತ್ತು ವಿವಿಧ ವಲಯಗಳಿಂದ ಆರ್ಥಿಕತೆಗೆ ದೊರಕುವ ಕೊಡುಗೆಗಳನ್ನು ಅಂದಾಜಿಸಲು ಉಪಯೋಗಿಸಲಾಗುವುದೆಂದು ಹೇಳಿದರು. ಇದೇ ಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ 2012-13 ರ ಸಾಲಿನಲ್ಲಿ ನಡೆದ 6 ನೇ ಆರ್ಥಿಕ ಗಣತಿ ಕಾರ್ಯದಲ್ಲಿ ಒಟ್ಟು 2,25,639 ಉದ್ದಿಮೆಗಳಿದ್ದು ಇದರಲ್ಲಿ 60,239 ಸ್ಥಿರ ವಾಣಿಜ್ಯ ಉದ್ದಿಮೆಗಳು, 20,178 ಕಟ್ಟಡದ ಹೊರಗೆ ಸ್ಥಿರವಲ್ಲದ ಉದ್ದಿಮೆಗಳು, 1,45,222 ಕಟ್ಟಡದ ಒಳಗಿನ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ತಿಳಿಸಿದರು.

ದೇಶದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ನಡೆಯುತ್ತಿರುವ ಆರ್ಥಿಕ ಗಣತಿಗೂ ಸಿಎಎ, ಎನ್‍ಆರ್‍ಸಿಗೂ ಯಾವುದೇ ಸಂಬಂಧವಿಲ್ಲ, ಗಣತಿಕಾರ್ಯವನ್ನು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿದ್ದು ಗಣತಿದಾರರು ಮಾಹಿತಿ ಸಂಗ್ರಹಿಸಲು ಬಂದಾಗ ಸಾರ್ವಜನಿಕರು, ಉದ್ದಿಮೆದಾರರು ಅಗತ್ಯ ಮತ್ತು ನಿಖರವದ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಕೋರಿದರು.

ಗ್ರಾಮೀಣ ಪ್ರದೇಶದಲ್ಲಿ ಬ್ಲಾಕ್‍ಗಳನ್ನು ಗುರುತಿಸಲು ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಟ್ಟಣ ಪ್ರದೇಶದಲ್ಲಿ ಸಂಬಂಧಿಸಿದ ಮುಖ್ಯಾಧಿಕಾರಿಗಳು ಹಾಗೂ ಇತರ ಇಲಾಖಾಧಿಕಾರಿಗಳು ಗಣತಿದಾರರಿಗೆ ನೆರವಾಗುವಂತೆ ನಿರ್ದೇಶನ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಮಗ್ರ ಮತ್ತು ಸಂಪೂರ್ಣ ಗಣತಿ ಕಾರ್ಯ ಜರಗುವ ಬಗ್ಗೆ ಪರಿಶೀಲನೆ ಕೈಗೊಳ್ಳುವಂತೆ ಅವರು ತಿಳಿಸಿದರು.

ಕೈಗಾರಿಕೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಕಾರ್ಮಿಕ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಉದ್ಯಮಿಗಳಿಗೆ ಮತ್ತು ವಾಣಿಜ್ಯ ಘಟಕಗಳಿಗೆ ಗಣತಿಕಾರ್ಯದಲ್ಲಿ ಸಹಕರಿಸುವಂತೆ ನಿರ್ದೇಶನ ನೀಡುವುದರ ಜೊತೆಗೆ ನಿಖರವಾದ ಮಾಹಿತಿ ಸಂಗ್ರಹಣೆಯಾಗುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ.ಉದಯ ಶೆಟ್ಟಿ, ಸಹಾಯಕ ನಿರ್ದೇಶಕ ಮನ್‍ಮೋಹನ್, ಸಹಾಯಕ ಸಾಂಖ್ಯಿಕ ಅಧಿಕಾರಿ ಎ.ಡಿ ಬೋಪಯ್ಯ, ಜಿಲ್ಲಾ ವ್ಯವಸ್ಥಾಪಕರು ಸಿಎಸ್‍ಸಿ ಇ ಗವರ್ನೆನ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಶವಿನ್ ಬಿ.ಎಸ್, ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಸೇವಾ ಸಿಂಧು ಅಕ್ಷತಾ ಕೆ.ಎನ್, ಜಿಲ್ಲಾ ವ್ಯವಸ್ಥಾಪಕರು ಸಿಎಸ್‍ಸಿ ಇ ಗವರ್ನೆನ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಪ್ರಶಾಂತ್ ಕೆ.ಬಿ ಉಪಸ್ಥಿತರಿದ್ದರು.


Spread the love