ನಿಗಮಗಳಲ್ಲಿ ಗುರಿ, ಸಾಧನೆ ಹೆಚ್ಚಿಸಿ- ಮೀನಾಕ್ಷಿ ಶಾಂತಿಗೋಡು  

Spread the love

ನಿಗಮಗಳಲ್ಲಿ ಗುರಿ, ಸಾಧನೆ ಹೆಚ್ಚಿಸಿ- ಮೀನಾಕ್ಷಿ ಶಾಂತಿಗೋಡು  

ಮಂಗಳೂರು: ವಿವಿಧ ನಿಗಮಗಳಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸ್ವಸಹಾಯ ಸಂಘಗಳಿಗೆ ನೀಡುವ ಸಹಾಯಧನ ಹಾಗೂ ನೆರವಿನ ಗುರಿ ಹಾಗೂ ಸಾಧನೆಯನ್ನು ಹೆಚ್ಚಿಸಿ ಎಂದು ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಸಲಹೆ ಮಾಡಿದರು.

ಅವರಿಂದು ನೇತ್ರಾವತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಿಗಮದಿಂದ ದೊರಕುವ ಕಿರುಸಾಲ ಯೋಜನೆಗೆ(ಪ್ರೇರಣಾ) ಜಿಲ್ಲೆಯಲ್ಲಿ ಸ್ವಸಹಾಯ ಸಂಸ್ಥೆಗಳಿಂದ ಸಾಕಷ್ಟು ಬೇಡಿಕೆ ಇದ್ದರೂ ಮಾಹಿತಿ ಹಾಗೂ ಹೆಚ್ಚಿನ ಗುರಿ ನಿಗದಿಯ ಅಗತ್ಯವಿದೆ ಎಂದು ಅಧ್ಯಕ್ಷರು ಹೇಳಿದರು.

ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ 63 ಗುರಿ ಇದ್ದು, ಮೈಕ್ರೋ ಕ್ರೆಡಿಟ್ ಕಿರುಸಾಲ ಯೋಜನೆಗೆ 173 ಗುರಿ ಹಾಗೂ ಗಂಗಾಕಲ್ಯಾಣ ಯೋಜನೆಗೆ ಗುರಿ ನಿಗಮದ ಕೇಂದ್ರ ಕಚೇರಿಯಿಂದ ನಿಗದಿಪಡಿಸಲಾಗಿದೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಕರಾದ ಅನಿತ ವಿ ಮಡ್ಲೂರ್ ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ ಉದ್ಯಮಶೀಲತೆಗಾಗಿ ಸಮೃದ್ಧಿ ಯೋಜನೆಯನ್ನು ಆರಂಭಿಸಲಾಗಿದ್ದು, ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿದೆ. ಈ ಯೋಜನೆಯಡಿ ಪ್ರತಿಷ್ಠಿತ ಕಂಪೆನಿಗಳ ರೀಟೈಲ್ ಮಳಿಗೆ ತೆರೆಯಲು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲಾಗುವುದು. ಇದರಡಿ ನಿಗಮದಿಂದ 10 ಲಕ್ಷ ರೂ. ಗಳವರೆಗೆ ಸಹಾಯಧನ ನೀಡಲಾಗುವುದು.

ಐರಾವತ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿದ್ದು, ಈ ಯೋಜನೆಯಡಿ ಟ್ಯಾಕ್ಷಿ ಖರೀದಿಗೆ ಐದು ಲಕ್ಷ ರೂ.ಗಳವರೆಗೆ ಸಹಾಯಧನ ಹಾಗೂ ಓಲಾ, ಉಬರ್, ಮೇರುವಿನಂತಹ ಸಂಸ್ಥೆಗಳ ಮೂಲಕ ಫಲಾನುಭವಿಗಳಿಗೆ ಸಂಪರ್ಕ ಸಾಧಿಸಿ ಉದ್ಯೋಗ ಸೃಷ್ಟಿಗೆ ನೆರವನ್ನು ನೀಡಲಾಗುವುದು ಎಂದು ಅವರು ವಿವರಿಸಿದರು.

ಇದರ ಜೊತೆಗೆ ನಿಗಮಗಳಿಂದ ದೊರೆಯುವ ಯೋಜನೆಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ವಸಹಾಯ ಸಂಘಗಳ ಪಟ್ಟಿ ತಯಾರಿಸಿ ಮಾಹಿತಿ ನೀಡುವ ಕೆಲಸ ಹಾಗೂ ಗುಂಪುಗಳ ಸಭೆಯಲ್ಲೂ ಮಾಹಿತಿ ನೀಡಲಾಗುವುದು ಎಂದು ಅನಿತ ವಿವರಿಸಿದರು.

ಎಲ್ಲ ತಾಲೂಕುಗಳ ಶಾಲೆಗಳಲ್ಲಿ ಕಡ್ಡಾಯವಾಗಿ ಆಟದ ಮೈದಾನ ನಿರ್ಮಾಣ ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಿ ನರೇಗಾ ಯೋಜನೆಯಡಿ ಬೆಳ್ತಂಗಡಿಯಲ್ಲಿ 4 ಆಟದ ಮೈದಾನ, 17 ಆವರಣಗೋಡೆ ಸಂಪೂರ್ಣಗೊಂಡಿದೆ. 16 ಆವರಣ ಗೋಡೆ ಪ್ರಗತಿಯಲ್ಲಿರುತ್ತದೆ.

ಬಂಟ್ವಾಳ ತಾಲೂಕಿನಲ್ಲಿ 13 ಕಾಮಗಾರಿಗಳು ಪ್ರಗತಿಯಲ್ಲಿದೆ. ಸುಳ್ಯದಲ್ಲಿ 44 ಶಾಲಾ ಆವರಣ ಕಾಮಗಾರಿಗಳಲ್ಲಿ 23 ಸಂಪೂರ್ಣವಾಗಿದೆ. ಆಟದ ಮೈದಾನದಲ್ಲಿ 18 ಕಾಮಗಾರಿ ಆರಂಭವಾಗಿದ್ದು 8 ಸಂಪೂರ್ಣವಾಗಿದೆ.

ಪುತ್ತೂರಿನಲ್ಲಿ ಶಾಲಾ ಆವರಣಗೋಡೆಗೆ ಸಂಬಂದಿಸಿದಂತೆ 68 ಕಾಮಗಾರಿಗಳಿಗೆ ಅಂದಾಜುಪಟ್ಟಿ ತಯಾರಿಸಿದ್ದು, 46 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 16 ಪೂರ್ಣಗೊಂಡಿದೆ 36 ಕಾಮಗಾರಿ ಪ್ರಗತಿಯಲ್ಲಿದೆ.

ಮಂಗಳೂರಿನಲ್ಲಿ ಆಟದ ಮೈದಾನಕ್ಕೆ ಬೇಡಿಕೆ ಇಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಗೈರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಅಧಿಕಾರಿಗಳು ಕೆಡಿಪಿ ಸಭೆಯನ್ನು ಹಗರುವಾಗಿ ಪರಿಗಣಿಸದೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಿರಬೇಕೆಂದರು.

ಶಿಕ್ಷಣ ಇಲಾಖೆಯೂ ಈ ನಿಟ್ಟಿನಲ್ಲಿ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಾಧನೆ ದಾಖಲಿಸಲೂ ಪೂರಕ ನಿರ್ದೇಶನ ವಿದ್ಯಾಂಗ ಇಲಾಖೆಯ ಉಪನಿರ್ದೇಶಕರು ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ನೀಡಬೇಕೆಂದು ಅಧ್ಯಕ್ಷರು ಹೇಳಿದರು.

ಪಡುಪೆರಾರ ಗ್ರಾಮ ಪಂಚಾಯತ್‍ನ ಮುರ ಅಂಗನವಾಡಿಗೆ ಸಂಬಂಧಪಟ್ಟಂತೆ ಇಂದು ಮಧ್ಯಾಹ್ನದೊಳಗೆ ಪಿಡಿಒ ಅವರನ್ನು ಕರೆಸಿ ಅಂಗನವಾಡಿ ಹಸ್ತಾಂತರಕ್ಕೆ ಕ್ರಮಕೈಗೊಳ್ಳಬೇಕು; ನರೇಗಾದ ಬಗ್ಗೆ ಅವರಿಗೆ ಮಾಹಿತಿ ನೀಡಬೇಕೆಂದು ಸಾಮಾಜಿಕ ಸ್ಥಾಯಿಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ ಹೇಳಿದರು.

ಚೇಳ್ಯಾರಿನಲ್ಲಿ ಔಷಧಿವನ ನಿರ್ಮಾಣಕ್ಕೆ ಜಾಗವಿದ್ದು ಪರಿಶೀಲನೆ ನಡೆಸಲು ಉಪಾಧ್ಯಕ್ಷರಾದ ಕಸ್ತೂರಿ ಪಂಜ ಅವರು ಸಾಮಾಜಿಕ ಅರಣ್ಯ ವಿಭಾಗದ ಉಪಸಂರಕ್ಷಣಾಧಿಕಾರಿಗೆ ಸೂಚಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ಅನುಷ್ಠಾನಕ್ಕೆ ತಂದಿರುವ ಕಿಡಿ ಅಣೆಕಟ್ಟುಗಳಲ್ಲಿ ಮಂಗಳೂರು ತಾಲೂಕಿಗೆ ಆದ್ಯತೆ ನೀಡಿ ಎಂದೂ ಉಪಾಧ್ಯಕ್ಷರು ಹೇಳಿದರು.

ಜಿಲ್ಲೆಯಲ್ಲಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ 20 ಜನರು ತೊಡಗಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಹೊಸ 5 ರೇಷ್ಮೆ ಬೆಳೆಗಾರರನ್ನು ಗುರುತಿಸಿ ನೆರವು ನೀಡಲಾಗಿದೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ಹೇಳಿದರು.

ಕೆ ಆರ್ ಐಡಿಎಲ್ ನಿಂದ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪಾಧ್ಯಕ್ಷರು, ಪೈಪ್‍ಲೈನ್ ಮತ್ತು ಬೋರ್‍ವೆಲ್ ಇಲ್ಲದೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದ್ದು ನೀರಿನ ಮೂಲಕ್ಕೆ ಏನು ಮಾಡುವಿರಿ ಎಂದು ಪ್ರಶ್ನಿಸಿದರು. ಈಗಾಗಲೇ ಹೊಸಬೆಟ್ಟು ಗ್ರಾಮದ ಗಾಜಿಗರ ಪಲ್ಕೆ ಕೊರಗ ಕಾಲೊನಿ, ಕಟೀಲಿನ ನರ್ತಿಕಲ್ಲು ಕೊರಗ ಕಾಲನಿ, ಕಿಲ್ಪಾಡಿ ಗ್ರಾಮದ ಕೊರಗ ಕಾಲನಿ, ಕಲ್ಲಮುಂಡ್ಕೂರಿನ ಕುಂಟಾಲ ಪಲ್ಕೆ ಕೊರಗ ಕಾಲನಿ, ಪುತ್ತಿಗೆ ಗ್ರಾಮದ ಕೊರಗ ಕಾಲನಿ, ಮೂಡುಶೆಡ್ಡೆ ಗ್ರಾಮದ ಎದುರುಪದವು ಕೊರಗ ಕಾಲನಿ, ಬೆಳ್ಳಾಯುರು ಕೆರೆಕಾಡು ಪರಿಶಿಷ್ಟ ಪಂಗಡದ ಕಾಲೊನಿಗಳಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ ಎಂದು ಕೆ ಆರ್ ಐ ಡಿಎಲ್‍ನ ಕಾರ್ಯನಿರ್ವಾಹಕ ಅಭಿಯಂತರರು ಮÁಹಿತಿ ನೀಡಿದರು.

ಬೋರ್‍ವೆಲ್‍ಗೆ ಪಾಯಿಂಟ್ ಗುರುತು ಮಾಡಲಾಗಿದೆ. ಡೆಲಿವರಿ ಲೈನ್ ಪೈಪ್ ಅಳವಡಿಸಲಾಗಿದ್ದು ಬೋರ್‍ವೆಲ್ ಕೊರೆದ ನಂತರ ಕಾಮಗಾರಿ ಮುಗಿಸಿ ಸಂಬಂಧಿಸಿದವರಿಗೆ ಹಸ್ತಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡಾಕ್ಟರ್‍ಗಳ ಕೊರತೆಯನ್ನು ನಿರ್ವಹಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ಹೇಮನಾಥ ಶೆಟ್ಟಿ, ಕೃಷಿ ಸ್ಥಾಯಿಸಮಿತಿ ಅಧ್ಯಕ್ಷರಾದ ಯು ಪಿ ಇಬ್ರಾಹಿಂ, ಉಪಕಾರ್ಯದರ್ಶಿ ಡಾ. ಕೆ ಸಂತೋಷ್ ಇದ್ದರು.


Spread the love