ನಿಜವಾದ ವಿದ್ಯಾವಂತರು ಎಂದಿಗೂ ಅಹಂಕಾರದಿಂದ ವರ್ತಿಸದೆ ವಿನಯಶೀಲರಾಗಿರುತ್ತಾರೆ – ಶೃಂಗೇರಿ ಶ್ರೀ ವಿಧುಶೇಖರಭಾರತೀತೀರ್ಥ ಸ್ವಾಮೀಜಿ

Spread the love

ನಿಜವಾದ ವಿದ್ಯಾವಂತರು ಎಂದಿಗೂ ಅಹಂಕಾರದಿಂದ ವರ್ತಿಸದೆ ವಿನಯಶೀಲರಾಗಿರುತ್ತಾರೆ – ಶೃಂಗೇರಿ ಶ್ರೀ ವಿಧುಶೇಖರಭಾರತೀತೀರ್ಥ ಸ್ವಾಮೀಜಿ

ಕುಂದಾಪುರ: ನಿಜವಾದ ವಿದ್ಯಾವಂತರು ಎಂದಿಗೂ ಅಹಂಕಾರದಿಂದ ವರ್ತಿಸದೆ ವಿನಯಶೀಲರಾಗಿರುತ್ತಾರೆ. ಅವರ ಮನಸ್ಸಲ್ಲಿ ಇನ್ನೂ ತಿಳಿಯಬೇಕು ಎನ್ನುವ ವಿಷಯ ಇರುತ್ತದೆ. ಇದೇ ಭಾವನೆ ಅವರನ್ನು ಮತ್ತಷ್ಟು ವಿನಯಶೀಲರಾಗುವಂತೆ ಮಾಡುತ್ತದೆ. ವಿದ್ಯಾಭ್ಯಾಸದ ಕಾಲ ಅತ್ಯಂತ ಮುಖ್ಯವಾದ ಕಾಲ. ಜೀವನದ ಮೊದಲ ಅಧ್ಯಾಯವೇ ವಿದ್ಯಾಭ್ಯಾಸಕ್ಕಾಗಿ ಮೀಸಲಿಡುತ್ತೇವೆ. ವಿದ್ಯೆಯನ್ನು ಪರಿಪೂರ್ಣವಾಗಿ ಪಡೆದುಕೊಂಡಾಗ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶ್ರೀ ವಿಧುಶೇಖರಭಾರತೀತೀರ್ಥ ಮಹಾಸನ್ನಿಧಾನಂಗಳವರ ಅಭಿಪ್ರಾಯಪಟ್ಟರು.

ಗುರುವಾರ ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್ (ರಿ) ನ ಯಡಾಡಿ-ಮತ್ಯಾಡಿಯ ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ನೂತನ ಶಾಲಾ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿ ಅವರು ಪ್ರವಚನ ನೀಡಿದರು.
ಮಕ್ಕಳು ಕೇವಲ ವಿದ್ಯಾರ್ಥಿಗಳಲ್ಲ. ಅವರು ನಮ್ಮ ದೇಶದ ಭವಿಷ್ಯ. ಅವರಿಗೆ ಸಮಂಜಸವಾದ ವಿದ್ಯಾಭ್ಯಾಸ ನೀಡಿದರೆ ಉತ್ತಮ ವ್ಯಕ್ತಿಗಳಾಗಿ ಬೆಳೆದು ದೇಶಕ್ಕೆ ಉತ್ತಮ ಹೆಸರನ್ನು ತರುತ್ತಾರೆ. ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಓದಿದ ಅರ್ಧ ಭಾಗ ಪರೀಕ್ಷೆ ಬಂದಾಗ ಹೆದರಿಕೆಯಿಂದ ಮರೆತು ಹೋಗುತ್ತದೆ. ಪರೀಕ್ಷೆ ಎಂದರೆ ಭಯ ಇರಬೇಕು. ಪರೀಕ್ಷೆ ಬರೆಯಬೇಕಿದ್ದರೆ ದ್ವಿಗುಣವಾಗಿ ವಿಷಯಗಳನ್ನು ಅರ್ಥೈಸಿಕೊಂಡು ಓದಬೇಕು. ಕ್ರಮವಾಗಿ ಅಭ್ಯಾಸ ನಡೆಸಿದಾಗ ಉತ್ತಮವಾಗಿ ವಿದ್ಯಾಭ್ಯಾಸ ನಡೆಸಲು ಸಾಧ್ಯ ಎಂದರು.

ವರ್ಷಗಟ್ಟಲೆ ಮಾಡಬೇಕಾದ ಕೆಲಸವನ್ನು ವಾರದೊಳಗೆ ಮಾಡುವ ಸಾಧನವನ್ನು ಕಂಡುಹಿಡಿದಿದ್ದಾರೆ. ಆದರೆ ಹತ್ತು ವರ್ಷಗಳ ಕಾಲ ಓದಬೇಕಾದ ವಿಷಯವನ್ನು ಒಂದು ತಿಂಗಳು ಕಾಲ ಓದುವುದಕ್ಕೆ ಯಾವ ಯಂತ್ರವನ್ನು ಕಂಡು ಹಿಡಿಯಲಿಕ್ಕೆ ಸಾಧ್ಯವಾಗಿಲ್ಲ. ಅಷ್ಟು ವರ್ಷಗಳ ಕಾಲ ನಾವು ಓದಲೇಬೇಕು. ಇದಕ್ಕಿರುವ ಏಕಮಾತ್ರ ಯಂತ್ರವಿದ್ದರೆ ಅದು ಬುದ್ದಿ ಮಾತ್ರ. ಇಂದಿನ ದಿನಗಳಲ್ಲಿ ದುರಭ್ಯಾಸಗಳ ಪಟ್ಟಿಗೆ ಮೊಬೈಲ್ ಸೇರಿಸುವ ಅವಶ್ಯಕತೆ ಇದೆ. ಮೊಬೈಲ್ ಕಂಡು ಹಿಡಿದಿದ್ದು ಮನಷ್ಯನ ಉಪಯೋಗಕ್ಕಾಗಿ. ವಿದ್ಯಾರ್ಥಿಗಳಿಗೆ ಒಂದು ಕ್ಷಣ ಮೊಬೈಲ್ ಇಲ್ಲವೆಂದರೆ ತಲೆ ಕೆಟ್ಟು ಬಿಡುತ್ತೆ. ಮನುಷ್ಯ ಮೊಬೈಲ್ ಅನ್ನು ಉಪಯೋಗ ಮಾಡುತ್ತಿಲ್ಲ. ಆದರೆ ಮನುಷ್ಯನನ್ನೇ ಮೊಬೈಲ್ ಉಪಯೋಗಿಸಿಕೊಳ್ಳುತ್ತಿರುವುದು ದುರಂತ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸ್ಪರ್ಧಾತ್ಮಕ ದಿನದಲ್ಲಿ ಪೆÇೀಷಕರಿಗೆ ಆಂಗ್ಲ ಮಾಧ್ಯಮ ಅನಿವಾರ್ಯ ಎಂಬಂತಾಗಿದೆ. ಶಾಲೆಯೇ ಶಾರದೆಯ ದೇಗುಲ. ಆ ನಿಟ್ಟಿನಲ್ಲಿ ಸರ್ಕಾರ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ಕೊಡಬೇಕಾಗಿದೆ. ಶಿಕ್ಷಣವನ್ನು ಶಿಕ್ಷಕರಿಂದ ಕಲಿತರೆ ಸಂಸ್ಕಾರವನ್ನು ಪೆÇೀಷಕರಿಂದ ಕಲಿಯಬೇಕು. ಮಕ್ಕಳು ಶಿಕ್ಷಣದ ಜೊತೆಗೆ ಲಲಿತಕಲೆಗಳನ್ನು ಅಭ್ಯಾಸ ಮಾಡಬೇಕು. ಆ ಮೂಲಕ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಿಕೊಂಡು ಕಷ್ಟದ ದಿನಗಳನ್ನು ಎದುರಿಸುವ ಶಕ್ತಿ ತುಂಬಿಕೊಳ್ಳಬೇಕು. ಅದಕ್ಕಾಗಿ ಶಿಕ್ಷಕರು ಮತ್ತು ಪೆÇೀಷಕರು ಶ್ರಮವಹಿಸಬೇಕಿದೆ ಎಂದರು.

ಬಸ್ರೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಮಾಜಿ ಶಾಸಕ ಅಪ್ಪಣೆ ಹೆಗ್ಡೆ ಮಾತನಾಡಿ, ಸಮಾಜಕ್ಕೆ ಹಿತಕರವಾದ ಉತ್ತಮ ನಾಗರಿಕರಾಗುವ ವಿದ್ಯೆ ಅತ್ಯಗತ್ಯ. ವಿದ್ಯೆ ನಮ್ಮ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಗೆ ಪೂರಕವಾಗಬೇಕು ಎಂದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ರಮೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಜಿ ಭರತ್ ಶೆಟ್ಟಿ, ಸೌಕೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಮಂಜಯ್ಯ ಶೆಟ್ಟಿ, ಮಹೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Spread the love