ನಿರ್ಗಮಿತ ಕೋಲಾರ ಸಿಇಒ, ಪ್ರಸ್ತುತ ಉಡುಪಿ ಡಿಸಿ ಜಗದೀಶ್ ವಿರುದ್ದ ಎಸಿಬಿ ಯಲ್ಲಿ ಪ್ರಕರಣ ದಾಖಲು

Spread the love

ನಿರ್ಗಮಿತ ಕೋಲಾರ ಸಿಇಒ, ಪ್ರಸ್ತುತ ಉಡುಪಿ ಡಿಸಿ ಜಗದೀಶ್ ವಿರುದ್ದ ಎಸಿಬಿ ಯಲ್ಲಿ ಪ್ರಕರಣ ದಾಖಲು

ಕೋಲಾರ (PV): ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಸಿಇಒ ಜಿ.ಜಗದೀಶ್ ಅವರು ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ಪಿಡಿಒಗಳ ಸಂಘದಿಂದ ಉಡುಗೊರೆ ರೂಪದಲ್ಲಿ ಬೆಳ್ಳಿ ಗದೆ, ಕಿರೀಟ ಮತ್ತು ಚಿನ್ನದ ಉಂಗುರ ಪಡೆದ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ನ್ಯಾಯಾಲಯದ ಆದೇಶದಂತೆ ಭಾನುವಾರ ಪ್ರಕರಣ ದಾಖಲಿಸಿದೆ.

ಹಾಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಪಿಡಿಒಗಳಾದ ನರಸಾಪುರ ಗ್ರಾ.ಪಂನ ಕೆ.ಮಹೇಶ್‌ಕುಮಾರ್, ಮಾಸ್ತೇನಹಳ್ಳಿ ಪಿ.ನಾರಾಯಣಪ್ಪ, ಹರಟಿ ಎಂ.ರಾಮಕೃಷ್ಣ, ಮಾಗೊಂದಿ ವಿ.ಶಂಕರ್, ಬೆಳ್ಳೂರು ಎನ್.ಸಂಪರಾಜ, ಸೂಲೂರು ಎಸ್.ಜಿ.ಹರೀಶ್‌ಕುಮಾರ್, ಹೋಳೂರು ಎಂ.ಸೋಮಶೇಖರ್, ಅಂಬ್ಲಿಕಲ್ ಅಶ್ವತ್ಥ್ ನಾರಾಯಣ, ಅಗರ ಎಂ.ಸುರೇಶ್‌ಕುಮಾರ್ ಹಾಗೂ ಶ್ರೀನಿವಾಸಪುರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಎಸ್.ಆನಂದ್ ವಿರುದ್ಧ ಐಪಿಸಿ ಕಲಂ 465, 467, 468, 471ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಸದ್ಯ ಉಡುಪಿ ಜಿಲ್ಲಾಧಿಕಾರಿ ಆಗಿರುವ ಜಗದೀಶ್ ಅವರು ಈ ಹಿಂದೆ ಕೋಲಾರ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಸರ್ಕಾರ ಅವರನ್ನು 2019ರ ಆಗಸ್ಟ್‌ನಲ್ಲಿ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿತ್ತು.

ಬಳಿಕ ಜಿ.ಪಂ ಮತ್ತು ಜಿಲ್ಲಾಡಳಿತದ ವತಿಯಿಂದ 2019ರ ಆ.23ರಂದು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ಪಿಡಿಒಗಳ ಸಂಘದ ಪದಾಧಿಕಾರಿಗಳು ಜಗದೀಶ್ ಅವರಿಗೆ ಬೆಳ್ಳಿ ಗದೆ, ಬೆಳ್ಳಿ ಕಿರೀಟ ಮತ್ತು ಚಿನ್ನದ ಉಂಗುರವನ್ನು ಸಮಾರಂಭದ ವೇದಿಕೆಯಲ್ಲಿ ಬಹಿರಂಗವಾಗಿ ಉಡುಗೊರೆ ರೂಪದಲ್ಲಿ ಕೊಟ್ಟಿದ್ದರು.

ಈ ಸಂಬಂಧ ಕೋಲಾರದ ಎಸ್.ನಾರಾಯಣಸ್ವಾಮಿ ಎಂಬ ಸಾಮಾಜಿಕ ಕಾರ್ಯಕರ್ತರು ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ದಾಖಲೆ ಸಮೇತ ದೂರು ನೀಡಿ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸುವಂತೆ ಕೋರಿದ್ದರು. ಅಲ್ಲದೇ, ಕೋಲಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದರು.

ಈ ಪ್ರಕರಣದ ವಿಚಾರಣೆ ಆರಂಭಿಸಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅವರು ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ 2 ತಿಂಗಳೊಳಗೆ (ಆ.25ರೊಳಗೆ) ವರದಿ ನೀಡುವಂತೆ ಎಸಿಬಿ ಅಧಿಕಾರಿಗಳಿಗೆ ಆದೇಶಿಸಿದ್ದರು. ಜಗದೀಶ್, 9 ಮಂದಿ ಪಿಡಿಒಗಳು ಮತ್ತು ಒಬ್ಬರು ಕಾರ್ಯ ನಿರ್ವಹಣಾಧಿಕಾರಿ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶದಲ್ಲಿ ಸೂಚಿಸಿದ್ದರು.

ನ್ಯಾಯಾಲಯದ ಆದೇಶದನ್ವಯ ಎಸಿಬಿ ಅಧಿಕಾರಿಗಳು ಇದೀಗ ಜಗದೀಶ್ ಅವರು ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಶೇಷವೆಂದರೆ ಹಿಂದಿನ ಜಿಲ್ಲಾಧಿಕಾರಿ, ಹಾಕಿ ಬಿಬಿಎಂಪಿ ವಿಶೇಷ ಆಯುಕ್ತರಾಗಿರುವ ಜೆ.ಮಂಜುನಾಥ್ ಸೇರಿದಂತೆ 6 ಮಂದಿ ಅಧಿಕಾರಿಗಳನ್ನು ಪ್ರಕರಣದ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಮಂಜುನಾಥ್ ಅವರು ಬೀಳ್ಕೊಡುಗೆ ಸಮಾರಂಭದ ವೇದಿಕೆಯಲ್ಲಿದ್ದ ಕಾರಣ ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ.

ಆರೋಪವೇನು?: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಕೆಲ ಪಿಡಿಒಗಳು ಹಾಗೂ ಇತರೆ ಅಧಿಕಾರಿಗಳ ಬೆನ್ನಿಗೆ ನಿಂತು ಭ್ರಷ್ಟಾಚಾರಕ್ಕೆ ಸಹಕಾರ ನೀಡಿದಕ್ಕೆ ಪ್ರತಿಯಾಗಿ ಲಂಚದ ರೂಪದಲ್ಲಿ ಜಗದೀಶ್ ಅವರಿಗೆ ಬೆಲೆ ಬಾಳುವ ಬೆಳ್ಳಿ ಕಿರೀಟ, ಬೆಳ್ಳಿ ಗದೆ ಹಾಗೂ ಚಿನ್ನದ ಉಂಗುರವನ್ನು ಉಡುಗೊರೆ ರೂಪದಲ್ಲಿ ಲಂಚವಾಗಿ ನೀಡಲಾಗಿತ್ತು ಎಂಬುದು ದೂರುದಾರ ನಾರಾಯಣಸ್ವಾಮಿ ಅವರ ಆರೋಪವಾಗಿದೆ.

ಈ ಆರೋಪದ ಸಂಬಂಧ ಜಿಲ್ಲಾ ಪಿಡಿಒ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ‘ನಿರ್ಗಮಿತ ಸಿಇಒ ಜಗದೀಶ್ ಅವರಿಗೆ ಬಾಡಿಗೆ ಬೆಳ್ಳಿ ಗದೆ ಮತ್ತು ಕಿರೀಟ ನೀಡಿ ಸನ್ಮಾನ ಮಾಡಿದ್ದೆವು’ ಎಂದು ಸ್ಪಷ್ಟನೆ ಕೊಟ್ಟಿದ್ದರು. ಸದ್ಯ ತನಿಖೆ ಆರಂಭವಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ಸತ್ಯಾಂಶ ಬಹಿರಂಗವಾಗಲಿದೆ.


Spread the love