ನ. 21 ಕೊಂಕಣಿ ಖಾರ್ವಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನ ಸಿದ್ದಾರಯ್ಯರಿಂದ  ಉದ್ಘಾಟನೆ

Spread the love

ನ. 21 ಕೊಂಕಣಿ ಖಾರ್ವಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನ ಸಿದ್ದಾರಯ್ಯರಿಂದ  ಉದ್ಘಾಟನೆ

ಉಡುಪಿ: ಉಡುಪಿ ಅಖಿಲ ಭಾರತದಲ್ಲಿರುವ ಸಮಸ್ತ ಕೊಂಕಣಿ ಖಾರ್ವಿ ಸಮಾಜ ಭಾಂಧವರಿಗಾಗಿ ಕುಂದಾಫುರ ತಾಲೂಕಿನ ತ್ರಾಸಿ ಖಾರ್ವಿ ಜಂಕ್ಷನ್ ಬಳಿ ಕೊಂಕಣಿ ಖಾರ್ವಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣವಾಗಿದ್ದು ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಭವನವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನವೆಂಬರ್ 21ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಅಧ್ಯಕ್ಷರಾದ ಕೆ. ಬಿ. ಖಾರ್ವಿ ಹೇಳೀದರು.

ಅವರು ಶುಕ್ರವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಮಂಗಳೂರಿನಿಂದ ಕಾರವಾರದವರೆಗೆ, ಶಿವಮೊಗ್ಗ ಜಿಲ್ಲೆ ಹಾಗೂ ಗೋವಾ ಮಹಾರಾಷ್ಟ್ರಗಳಲ್ಲಿ ವಾಸ್ತವ್ಯವನ್ನು ಹೊಂದಿದ್ದಾರೆ. ಹೆಚ್ಚಿನ ಜನರು ಮೀನುಗಾರಿಕೆಯನ್ನೇ ಮೂಲ ಉದ್ಯೋಗವಾಗಿ ಮಾಡಿಕೊಂಡು ಬಂದಿದ್ದು, ಇಂದಿಗೂ ಚಿಕ್ಕ ಗುಡಿಸಲುಗಳಲ್ಲಿಯೇ ವಾಸಿಸುತ್ತಿರುವ ಈ ಸಮುದಾಯವು ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದೆ.

1958ರಲ್ಲಿ ಖಾರ್ವಿ ಸಮಾಜದ ಪ್ರಮುಖರಾದ ಕುಂದಾಪುರ ಕನ್ಯಾನ ಕೋಡಿಯ ದಿ. ನರಸಿಂಹ ಅರ್ಕಾಟಿಯವರು ಈ ಸಂಘವನ್ನು ಸ್ಥಾಪಿಸಿದ್ದು, ಸಂಘವು ಅಂದಿನಿಂದ2011 ರ ವರೆಗೆ ಸುಮಾರು 53 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿತ್ತು. ಸಮಾಜದ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಮುನ್ನಡೆದಿತ್ತು. ಸಮಾಜವು ಪರಿಶಿಷ್ಠ ಜನಾಂಗ ಸೇರಿಸುವ ಬಗ್ಗೆ, ಹೋರಾಟ, ಕಡಲುಕೊರೆತ ನಿಯಂತ್ರಿಸುವ ಸಮುದ್ರ ತಡೆಗೋಡೆ ನಿರ್ಮಿಸುವ ಕುರಿತು ಹೋರಾಟ, ಸರ್ಕಾರದಿಂದ ಯಾಂತ್ರಿಕೃತ ದೋಣಿಗಳು ಪಡೆಯುವ ಬಗ್ಗೆ ಹೋರಾಟಗಳು ಸೇರಿದಂತೆ ಅನೇಕ ಸಮ್ಮೇಳನಗಳನ್ನು ನಡೆಸಿದ್ದರು. ಆದರೆ ಆರ್ಥಿಕ ಬಲವಿಲ್ಲದೆ ಸಂಘದ ಚಟುವಟಿಕೆಗಳು ಮಂದವಾಗಿ ನಡೆಯುತ್ತಿತ್ತು. 2011 ರಲ್ಲಿ ಸಮಾಜದಲ್ಲಿ ಪ್ರಗತಿ ಚಿಂತನೆ ನಡೆಸಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಟಿ ವಿ ಮೋಹನದಾಸ ಪೈ ಅವರು ಅಖಿಲಾ ಬಾರತ ಕೊಂಕಣಿ ಖಾರ್ವಿಸಮುದಾಯವನ್ನು ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ಸಾಗಲು ಸಹಕಾರ ನೀಡಲಾರಂಭಿಸಿದರು. ಎರಡು ದಿನಗಳ ವಿಶೇಷ ಕಾರ್ಯಾಗಾರ ಮಾಡಿ ಸಮಾಜದ ಆರ್ಥಿಕ ಸ್ಥಿತಗತಿ ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಮಾಜದ ಮುಖಂಡರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಾರ್ಗದರ್ಶಕರು ಮಾರ್ಗದರ್ಶನ ನೀಡಿದರು.

20 ವರ್ಷಗಳ ಗುರಿಯಿಟ್ಟು ಸಮಾಜದ ಅಭಿವೃದ್ಧೀಗೆ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾವು ಮುಂದಾಯಿತು. ವಿಶ್ವ ಕೊಂಕಣಿಯ ಟಿ ವಿ ಮೋಹನದಾಸ ಪೈ ಹಾಗೂ ತಂಡದವರ ಮಾರ್ಗದರ್ಶನದೊಂದಿಗೆ ಬೃಹತ್ ಸಮುದಾಯ ಭವನ ನಿರ್ಮಾಣಕ್ಕೆ ಸಂಕಲ್ಪ ತೆಗೆದುಕೊಳ್ಳಲಾಯಿತು. ಸಮಾಜದ ಕುಲಗುರುಗಳಾದ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಅನುಗ್ರಹ ಹಾಗೂ ಧರ್ಮಸ್ಥಳದ ಧರ್ಮಾಧೀಕಾರಿ ವೀರೇಂದ್ರ ಹೆಗ್ಡೆಯವರ ಆಶೀರ್ವಾದಗಳೊಂದಿಗೆ 2011 ನವೆಂಬರ್ 18 ರಂದು ಭವನದ ಶಿಲನ್ಯಾಸ ಕಾರ್ಯಕ್ರಮ ನಡೆಯಿತು.

ಗಂಗೊಳ್ಳಿ ಸಮೀಪದ ತ್ರಾಸಿಯ ರಾಹೆದ್ದಾರಿ 66 ರ ಬಳಿ ಭೂಮಿಯನ್ನು ಖರೀದಿಸಿ ಟಿವಿ ಮೋಹನದಾಸ ಪೈ ಅವರ ಉಪಸ್ಥತಿಯಲ್ಲಿ ನಡೆದ ಅಭೂತೂರ್ವ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಅಖಿಲ ಭಾರತ ಮಟ್ಟದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಕೊಂಕಣಿ ಖಾರ್ವಿ ಸಮಾಜದವರು ಪಾಲ್ಗೊಂಡು ಇತಿಹಾಸ ನಿರ್ಮಾಣವಾಯಿತು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಸಚಿವರು, ಶಾಸಕರು ಹಾಗೂ ಗಣ್ಯರು ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.

ಕರ್ನಾಟಕದ ಉತ್ತರಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ದಕ್ಷಿಣಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಗೋವಾ ಮತ್ತು ಮುಂಬೈನಿಂದ ಸುಮಾರು 40 ಊರುಗಳಿಂದ ಆಗಮಿಸಿದ ಕೊಂಕಣ ಖಾರ್ವಿ ಸಮಾಜದ ಮುಖಂಡರು ಪ್ರತಿ ಊರಿನಿಂದ ಪೂಜೆ ಮಾಡಿ ತಂದ ಇಟ್ಟಿಗೆಗಳನ್ನು ಅಡಿಗಲ್ಲು ಸಮಾರಂಭಕ್ಕೆ ಹಾಕಲಾಯಿತು. ಅನಂತರ ಪ್ತಿಯೊಂದ ಸಮಾಜದ ಊರುಗಳಿಗೆ ಹೋಗಿ ಪ್ರಚಾರ ಸಭೆ ಹಾಗೂ ಸಂಘಟನಾ ಸಭೆಗಳನ್ನು ನಡೆಸಲಾಯಿತು. ಕೊಂಕಣಿ ಖಾರ್ವಿ ಶೈಕ್ಷಣಿಕ ಸಾಂಸ್ಕೃತಿಕ ಸಮುದಾಯ ಭವನ ನಿರ್ಮಾಣದ ಉದ್ದೇಶವನ್ನು ತಿಳಿಸಲಾಯಿತು. ಈವರೆಗೆ ಸುಮಾರು 300 ಕ್ಕಿಂತ ಅಧಿಕ ಸಭೇಗಳನ್ನು ನಡೆಸಿ ಸಮಾಜವನ್ನು ಸಂಘಟಿಸುವ ಪ್ರಯತ್ನ ನಡೆಸಲಾಗಿದೆ.

ಸುಮಾರು 10 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣವಾಗಿದ್ದು ಸರ್ಕಾರದಿಂದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವಧಿಯಲ್ಲಿ ಒಂದು ಕೋಟಿ ಹಾಗೂ ಸಿದ್ದರಾಮಯ್ಯನವರ ಅವಧಿಯಲ್ಲಿ ಒಂದುಕೋಟಿ ಅನುದಾನ ದೊರೆತಿದೆ. ಕೊಂಕಣಿ ಖಾರ್ವಿ ಸಮಾಜ ಭಾಂಧವರು ಪ್ರತಿಯೊಂದು ಮನೆ ಮನೆಗಳಿಂದ ಸಂಘ ಸಂಸ್ಥೆಗಳಿಂದ ಭವನಕ್ಕೆ ದೇಣಿಗೆ ನೀಡಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಸಹಕಾರ ನೀಡಿದೆ. ನಮ್ಮ ಸಮಾಜದ ಉದ್ಯಮಿಗಳೊಂದಿಗೆ ಇತರೇ ಸಮಾಜದ ಉದ್ಯಮಿಗಳು ತುಂಬಾ ಸಹಾಯ ಸಹಕಾರ ನೀಡಿದ್ದಾರೆ.

ಈ ಸಮುದಾಯ ಭವನವು ಸಭೆ ಸಮಾರಂಭ ಅಥವಾ ಕೇವಲ ಮದುವೆ ಕಾರ್ಯಗಳಿಗೆ ಉಪಯೋಗಿಸುವ ಕಲ್ಯಾಣ ಮಂಟಪವಾಗಿರದೆ ಸಮಸ್ತ ಕೊಂಕಣಿ ಖಾರ್ವಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶವನ್ನು ಹೊಂದಿದೆ. ನವೆಂಬರ್ 21 ರಂದು ಕೊಂಕಣಿ ಖಾರ್ವಿ ಭವನದ ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿವಿ ಸದಾನಂದ ಗೌಡ, ಅನಂತಕುಮಾರ್ ಹೆಗಡೆ, ಉದ್ಯಮಿ ಟಿ ವಿ ಮೋಹನದಾಸಪೈ, ಸಂಸದರಾದ ಬಿ ಎಸ್ ಯಡ್ಯೂರಪ್ಪ, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಆರ್ ವಿ ದೇಶಪಾಂಡೆ, ಹೆಚ್ ಅಂಜನೇಯ, ಪ್ರಮೋದ್ ಮಧ್ವರಾಜ್, ಶಾಸಕರಾದ ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರತಾಪ್ ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಮಾಂಕಳ ಸುಬ್ಬ ವೈದ್ಯ, ಸತೀಶ್ ಸೈಲ್, ಶಾರಾದಾ ಮೋಹನ್ ಶೆಟ್ಟಿ ಭಾಗವಹಿಸಲಿದ್ದು, ಡಾ ಜಿ ಶಂಕರ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಸಂಜೀವ ಎಂಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚಿನ ಸಮಾಜಭಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನೀರಿಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರು ಮೋಹನ್ ಬಾನಾವಳಿಕರ್, ಪ್ರಧಾನ ಕಾರ್ಯದರ್ಶಿ ಉಮಾನಾಥ ಗಂಗೊಳ್ಳಿ, ಕೋಶಾಧಿಕಾರಿ, ರವಿ ಟಿ ನಾಯ್ಕ್, ಸಲಹೆಗಾರರಾದ ವಸಂತ ಖಾರ್ವಿ ಹಾಗೂ ಇತರು ಉಪಸ್ಥತಿರಿದ್ದರು.


Spread the love