ಪತ್ರಕರ್ತನೊಬ್ಬನ ಜೀವನೋತ್ಸಾಹದ ಸಂಕಥನ 18 ಫೆಬ್ರವರಿ 2018 ರಂದು  ಲೋಕಾರ್ಪಣೆ

Spread the love

ಪತ್ರಕರ್ತನೊಬ್ಬನ ಜೀವನೋತ್ಸಾಹದ ಸಂಕಥನ 18 ಫೆಬ್ರವರಿ 2018 ರಂದು  ಲೋಕಾರ್ಪಣೆ

1995ನೆ ಇಸವಿಯಲ್ಲಿ ಹೊಸದಿಗಂತ ಪತ್ರಿಕೆಯ ವಾರದ ಕಾಲಂನಲ್ಲಿ 26 ವಾರ ಮೂಡಿಬಂದ ‘ವಿಶೇಷ ಸೃಷ್ಟಿಗಳ ಲೋಕದಲ್ಲಿ’ ಮಂಗಳೂರಿನ ಹಿರಿಯ ಪತ್ರಕರ್ತ  ಪದ್ಯಾಣ ಗೋಪಾಲಕೃಷ್ಣ  (ಪ.ಗೋ.)  ಅವರ ಅಂಕಣ ಬರಹ

ವೃತ್ತ ಪತ್ರಿಕಾ ಜಗತ್ತಿನ ಎಲ್ಲಾ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನ ಮುಖಗಳು, ಅನುಭವಿಸಿದ ನೋವು- ನಲಿವುಗಳನ್ನು ನಿರ್ಮೋಹದಿಂದ ವಸ್ತುನಿಷ್ಟವಾಗಿ ಬರೆದ ಈ  ಅಂಕಣ ಬರಹ  ವೃತ್ತ ಪತ್ರಿಕೆಗಳ ಕಾಲಂ ಸಾಹಿತ್ಯದಲ್ಲೂ,ಕನ್ನಡ ಸಾಹಿತ್ಯದಲ್ಲೂ ಒಂದು ವಿಶಿಷ್ಟ ಬರವಣಿಗೆ ಹಾಗು  ಈ  ಅಂಕಣ ಬರಹ  ಪ ಗೋ ಆತ್ಮಕಥೆಯ ಒಂದು ಭಾಗವೂ ಹೌದು.

ಅಂದು 1995 ರಲ್ಲಿ ಹೊಸದಿಗಂತ ಪತ್ರಿಕೆಯ  ಅಪಾರ ಸಂಖ್ಯೆಯ ಒದುಗರಿಂದ ಮೆಚ್ಚುಗೆ ಪಡೆದ  ಅಂಕಣ ಬರಹ ‘ವಿಶೇಷ ಸೃಷ್ಟಿಗಳ ಲೋಕದಲ್ಲಿ’  22 ವರ್ಷಗಳ  ನಂತರ  ಇಂದು  2018  ರಲ್ಲಿ  ‘ಅನುಭವ ಅನುಭಾವಗಳ ನಡುವೆ’ ಶೀರ್ಷಿಕೆಯೊಂದಿಗೆ ಪತ್ರಕರ್ತನೊಬ್ಬನ ಜೀವನೋತ್ಸಾಹದ ಸಂಕಥನವಾಗಿ ಇನ್ನೊಮ್ಮೆ ನಾಡಿನ  ಒದುಗರ ಮುಂದೆ ಕಾಂತಾವರ ಕನ್ನಡ ಸಂಘದ  ‘ಸಂಸ್ಕೃತಿ ಸಂವರ್ಧನಾ ಮಾಲೆ’ಯ ಮೂರನೆ ಕುಸುಮವಾಗಿ ಪುಸ್ತಕ  ರೂಪದಲ್ಲಿ ಲೋಕಾರ್ಪಣೆಯಾಗಲಿದೆ.

ಉಡುಪಿ ಜಿಲ್ಲೆಯ  ಕಾರ್ಕಳ  ತಾಲೂಕಿನಲ್ಲಿರುವ ಕಾಂತಾವರ ಕನ್ನಡ ಸಂಘದ, ಕೆ. ಬಿ. ಜಿನರಾಜ ಹೆಗ್ಡೆ  ಸ್ಮಾರಕ ಕನ್ನಡ ಭವನದಲ್ಲಿ  ರವಿವಾರ, ದಿನಾಂಕ  18 ಫೆಬ್ರವರಿ 2018 ರಂದು   ಪೂರ್ವಾಹ್ನ 10:00 ಗಂಟೆಯಿಂದ  ಜರುಗುವ ಸಮಾರಂಭದಲ್ಲಿ  ಹಿರಿಯ  ರಾಜಕೀಯ ಮುತ್ಸದ್ಧಿ ಮತ್ತು ಸಂಸ್ಕೃತಿ  ಚಿಂತಕ  ಧಾರವಾಡದ ಶ್ರೀ ಚಂದ್ರಕಾಂತ ಬೆಲ್ಲದ್  ಅವರ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಮತ್ತು ಸಂಸ್ಕೃತಿ  ಚಿಂತಕ ಡಾ .ಏರ್ಯ  ಲಕ್ಷ್ಮೀ ನಾರಾಯಣ ಆಳ್ವ  ಅವರಿಂದ  ಬೆಂಗಳೂರಿನ ಪಾಂಚಜನ್ಯ ಪಬ್ಲಿಕೇಷನ್ಸ್  ಪ್ರಕಟಣೆಯ  ಪುಸ್ತಕ  ‘ಅನುಭವ ಅನುಭಾವಗಳ ನಡುವೆ’  ಲೋಕಾರ್ಪಣೆಯಾಗಲಿದೆ.

ಪ.ಗೋ  ದಿವಂಗತರಾಗಿ  20 ವರ್ಷ ಕಳೆದ ನಂತರ  ಅವರ ಅಂಕಣ ಬರಹ  ಮತ್ತೊಮ್ಮೆ ಪುಸ್ತಕದ  ರೂಪದಲ್ಲಿ ಬರುತ್ತಿರುವುದು  ಹೈಸ್ಕೂಲಿನ  ಮೆಟ್ಟಲುಗಳನ್ನು ಏರದೇ ಇದ್ದ  ಪ ಗೋ  ಅವರ  ಬರಹ  ಎವರ್ -ಗ್ರೀನ್  ಎಂಬುದಕ್ಕೆ ಸಾಕ್ಷಿ

ಪ.ಗೋ ಜೀವನ ವೃತ್ತಾಂತ

 

 

 

 

 

 

 

ಪದ್ಯಾಣ ಗೋಪಾಲಕೃಷ್ಣ ಅವರ ಹುಟ್ಟೂರು ದಕ್ಷಿಣ ಕನ್ನಡ ಮತ್ತು ಈಗಿನ ಕಾಸರಗೋಡು ಜಿಲ್ಲೆಗಳ ಗಡಿಯಂಚಿನಲ್ಲಿರುವ ಅಡ್ಯನಡ್ಕ. 1928ರಲ್ಲಿ ಜನಿಸಿದ ಅವರು 1956ರಲ್ಲಿ ಕನ್ನಡ ದಿನ ಪತ್ರಿಕೆ ‘ವಿಶ್ವ ಕರ್ನಾಟಕ’ ಮುಖಾಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮುಂದೆ ತಾಯಿನಾಡು, ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ‘ಶಕ್ತಿ’ ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದವರು ಪ.ಗೋ.

1959ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ನಂತರ ಇಂಡಿಯನ್ ಎಕ್ಸ್ ಪ್ರೆಸ್ , ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಮುಂಜಾನೆ – ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಮುಂದುವರಿದರು. 1963-1964 ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ “ವಾರ್ತಾಲೋಕ”ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗುವ ಮೂಲಕ, ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. 1994 ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳನ್ನು ಇಂಗ್ಲಿಷ್ ಪತ್ರಿಕಾರಂಗದ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ಸಲ್ಲಿಸಿ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಅಂಕಣ ಬರವಣಿಗೆಯನ್ನು ಕೊನೆ ತನಕ ಮುಂದುವರಿಸಿ ದಿನಾಂಕ 10-8-1997ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು.

1956 ರಿಂದ 1997ನೇ ಇಸವಿವರೆಗೆ ನಾಲ್ಕು ದಶಕಗಳಷ್ಟು ದೀರ್ಘ ಕಾಲವಧಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಪ.ಗೋ. ಬರೆದ ಅಂಕಣ ಸಾಹಿತ್ಯವು ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದೆ. ಬೆಳ್ಳಿಯ ಸೆರಗು ಎಂಬ ಸಾಮಾಜಿಕ ಕಾದಂಬರಿ, ಗನ್ ಬೋ ಸ್ಟ್ರೀಟ್ ಮತ್ತು ಓ.ಸಿ.67 ಎಂಬ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಹೆಗ್ಗಳಿಕೆ ಅವರದ್ದು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ಯತೆ ಪಡೆದು ಕರ್ನಾಟಕ ರಾಜ್ಯ ವಾರ್ತಾ ಮತ್ತು ವಿದ್ಯುತ್ ಸಚಿವರಿಂದ ವಿಧ್ಯುಕ್ತವಾಗಿ ಉದ್ಘಾಟಿಸಿ 6 ಅಕ್ಟೋಬರ್ 1976ರಂದು ಪ್ರಾರಂಭಗೊಂಡ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು  ಪ.ಗೋಪಾಲಕೃಷ್ಣ. ಪ್ರತಿ ವರ್ಷ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗಾಗಿ ಪ.ಗೋ. ಪ್ರಶಸ್ತಿ ನೀಡಲಾಗುತ್ತಿರುವುದೂ ಇಲ್ಲಿ ಸ್ಮರಣಾರ್ಹ.

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ  ಅವರು  ತಮ್ಮ ನೆನಪಿನಾಳದಿಂದ ಬರೆದ   ‘ಪ ಗೋ ಪ್ರಪಂಚ’  ಮತ್ತು  ಸೇರಾಜೆ ಸೀತಾರಾಮ ಭಟ್  ಅವರು  ಬರೆದ  ವ್ಯಕ್ತಿ ಚಿತ್ರಣ  ‘ಸ್ವಾಭಿಮಾನದ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ‘  . ಇವುಗಳು  ಪತ್ರಕರ್ತ ಪ ಗೋ ಅವರ ಬಗ್ಗೆ 2016 ನೇ ಇಸವಿಯಲ್ಲಿ ಹೊರಬಂದ  ಪುಸ್ತಕಗಳು ,


Spread the love