ಪದವಿಯಲ್ಲಿ ತುಳು ಕಲಿಕೆ ಸ್ವಾಗತಾರ್ಹ

Spread the love

ಪದವಿಯಲ್ಲಿ ತುಳು ಕಲಿಕೆ ಸ್ವಾಗತಾರ್ಹ
ಮಂಗಳೂರು :- ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ತುಳು ಭಾಷೆಯನ್ನು ಭಾಷಾ ಪಠ್ಯವಾಗಿ ಈಗಾಗಲೇ ಕಲಿಸಲಾಗುತ್ತಿದ್ದು, ಈ ವರ್ಷದಿಂದ ಪದವಿಯಲ್ಲಿಯೂ ತುಳುವನ್ನು ಭಾಷೆಯಾಗಿ ಕಲಿಸಲು ಆರಂಭಿಸಲಾಗಿದೆ. ಮಂಗಳೂರು ವಿ.ವಿ.ಯ ಈ ಪ್ರಯತ್ನ ಸ್ವಾಗತಾರ್ಹ ವಿಚಾರ ಎಂದು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರುಭವನದಲ್ಲಿ ನಡೆದ ರಥಬೀದಿಯ ಡಾ.ಪಿ.ದಯಾನಂದ ಪೈ.ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತುಳು ಭಾಷಾ ತರಗತಿಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು. ಪದವಿಯ ಬಿ.ಎ./ಬಿ.ಕಾಂ./ಬಿ.ಎಸ್ಸಿ. ತರಗತಿಗಳಿಗೆ ತುಳುವನ್ನು ಭಾಷೆಯಾಗಿ ಕಲಿಸುತ್ತಿರುವ ಕಾಲೇಜನ್ನು ಅಭಿನಂದಿಸಿದ ಅವರು ಮಂಗಳೂರು ವಿ.ವಿ.ಯ ಅಧೀನದಲ್ಲಿರುವ ಎಲ್ಲಾ ಕಾಲೇಜುಗಳೂ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕೆಂದು ನುಡಿದರು. ತುಳು ಭಾಷಾ ಪಠ್ಯವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹೊರತಂದಿದ್ದು, ಮುಂದೆಯೂ ಕೂಡ ಅಕಾಡೆಮಿ ತುಳು ಕಲಿಕೆಗೆ ಬೇಕಾದ ಸರ್ವ ಸಹಕಾರವನ್ನು ನೀಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ, ನಿರ್ದೇಶನದ ನೂತನ ತುಳು ಚಲನಚಿತ್ರ ‘ಗಿರಿಗಿಟ್’ ಇದರ ಮೊದಲ ಹಾಡಿನ ವೀಡಿಯೋವನ್ನು ನಿಶ್ಯಬ್ದ – 2 ಕನ್ನಡ ಚಲನಚಿತ್ರದ ನಿರ್ದೇಶಕರಾದ ತಾರನಾಥ ಶೆಟ್ಟಿ ಬೋಳಾರ್ ಅವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ತುಳು ಚಲನಚಿತ್ರ ನಟರಾದ ಭೋಜರಾಜ ವಾಮಂಜೂರು ಮಾತನಾಡುತ್ತ ತುಳು ಭಾಷಾ ಅಭಿವೃದ್ಧಿಗೆ ತುಳು ರಂಗಭೂಮಿ ಮತ್ತು ಚಿತ್ರರಂಗದ ಕೊಡುಗೆ ಅಪಾರ ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ ಹೆಬ್ಬಾರ್ ಸಿ. ಅವರು ತುಳು ಭಾಷೆಯು ಸಾಂಸ್ಕøತಿಕವಾಗಿ ಅತ್ಯಂತ ಮಹತ್ವದ ಭಾಷೆಯಾಗಿದ್ದು, ಸ್ಥಳೀಯವಾಗಿ ಎಲ್ಲಾ ವರ್ಗದ ಜನರನ್ನು ಒಂದುಗೂಡಿಸುವ ಶಕ್ತಿ ತುಳುವಿಗಿದೆ ಎಂದು ನುಡಿದರು.
ಸಮಾರಂಭದಲ್ಲಿ ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶಿವರಾಮ್ ಪಿ., ಡಾ.ಜಯಕರ ಭಂಡಾರಿ, ಡಾ.ಪ್ರಕಾಶಚಂದ್ರ ಶಿಶಿಲ, ಡಾ.ತೆರೆಸಾ ಪಿರೇರಾ ಹಾಗೂ ಗಿರಿಗಿಟ್ ಚಿತ್ರತಂಡದ ಬಳಗದವರು ಉಪಸ್ಥಿತರಿದ್ದರು.


Spread the love