ಪರಿವರ್ತನಾ ಟ್ರಸ್ಟ್ ವತಿಯಿಂದ ಕೇಂದ್ರದ ಮಂಗಳಮುಖಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ ವಿರುದ್ದ ಪ್ರತಿಭಟನೆ

Spread the love

ಪರಿವರ್ತನಾ ಟ್ರಸ್ಟ್ ವತಿಯಿಂದ ಕೇಂದ್ರದ ಮಂಗಳಮುಖಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ ವಿರುದ್ದ ಪ್ರತಿಭಟನೆ

ಮಂಗಳೂರು: ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಜಿಲ್ಲಾದಿಕಾರಿ ಕಚೇರಿಯ ಎದುರು ಕೇಂದ್ರ ಸರಕಾರದ ಮಂಗಳಮುಖಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ 2016ನ್ನು ವಿರೋಧಿಸಿ ಮಂಗಳಮುಖಿಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಟ್ರಸ್ಟ್ನ ಕಾರ್ಯದರ್ಶಿ ಸಂಜನಾ, ಸಮಾಜದಲ್ಲಿ ನಮಗೆ ಇತರರಂತೆ ಬದುಕಲು ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ನಾವು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ನಮ್ಮ ಬೇಡಿಕೆಗಳು ಈಡೇರಿಲ್ಲ. ಬದಲಿಗೆ ಕೇಂದ್ರ ಸರಕಾರ ಕಾಯ್ದೆ ಮೂಲಕ ಮತ್ತಷ್ಟು ದೌರ್ಜನ್ಯಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಾದಿ ಕಾಲದಿಂದಲೂ ನಮ್ಮನ್ನು ಮಂಗಳಮುಖಿಯರೆಂದು ಹೆಸರಿಸಿ, ಸಮಾಜದಿಂದ ದೂರವಿರಿಸಿ, ಲೈಂಗಿಕ ಕಾರ್ಯಕ್ಕೆ ನಮ್ಮನ್ನು ಬಳಸಿಕೊಂಡು ಇದೀಗ ನೀವು ಅದರಿಂದ ಹೊರಬನ್ನಿ, ನಿಮ್ಮ ಮನೆಯವರ ಜತೆ ಸೇರಿ ಎಂದು ಸರಕಾರ ಹೇಳುತ್ತಿದೆ. ನಮ್ಮನ್ನು ಮನೆಯಿಂದ ದೂರ ಮಾಡಿ ಮತ್ತೆ ನಮ್ಮನ್ನು ಕುಟುಂಬದವರು ಹತ್ತಿರಕ್ಕೆ ಸೇರಿಸುತ್ತಾರೆಯೇ ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸರಕಾರ ಮಂಗಳಮುಖಿಯರಿಗೆ ತೊಂದರೆಯನ್ನು ನೀಡುವ ನಮ್ಮನ್ನು ಇನ್ನೂ ಪಾತಾಳಕ್ಕೆ ತಳ್ಳುವ ಈ ಕಾಯ್ದೆಯನ್ನು ಕೈಬಿಡಬೇಕು ಎಂದು ಟ್ರಸ್ಟಿನ ಕೋಶಾಧಿಕಾರಿ ಶ್ರೀನಿಧಿ ಒತ್ತಾಯಿಸಿದರು.

ಕಾಯ್ದೆ ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರ ಮೊದಲು ನಮಗೆ ನಮ್ಮ ಹಕ್ಕನ್ನು ಒದಗಿಸಿ. ಬದುಕಲು ಯೋಗ್ಯವಾದ ವಾತಾವರಣ ಕಲ್ಪಿಸಿ ಎಂದು ಉಪಾಧ್ಯಕ್ಷೆ ರಮ್ಯಾಗೌಡ ಆಗ್ರಹಿಸಿದರು.

ಸದಸ್ಯೆ ಕುಮಾರಿ ಮಾತನಾಡಿ, ನಮ್ಮನ್ನು ಮನೆಯವರು ದೂರ ಮಾಡಿದ ಬಳಿಕ ನಾವು ನಮ್ಮ ಸಮುದಾಯದವರ ಜತೆ ಸೇರಿ ಒಗ್ಗಟ್ಟಿನ ಬದುಕು ಬದುಕುತ್ತಿದ್ದೇವೆ. ನನಗೀಗ 50 ವರ್ಷ ಪ್ರಾಯ. ಕಳೆದ 35 ವರ್ಷಗಳಿಂದ ನಾನು ನನ್ನ ಕುಟುಂಬದವರಿಂದ ದೂರವಾಗಿ ಬದುಕು ಕಟ್ಟಿಕೊಂಡಿದ್ದೇನೆ. ಇದೀಗ ಆ ಬದುಕನ್ನು ನಮ್ಮಿಂದ ಕಸಿಯುವ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಂಗಳಮುಖಿಯರು ಕಾಯ್ದೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.


Spread the love