“ಪರಿಸರದ ನಿರ್ವಹಣೆ ನಮ್ಮ ಹೊಣೆ”: ಡಾ. ಟಿ.ವಿ. ರಾಮಚಂದ್ರ

Spread the love

“ಪರಿಸರದ ನಿರ್ವಹಣೆ ನಮ್ಮ ಹೊಣೆ”: ಡಾ. ಟಿ.ವಿ. ರಾಮಚಂದ್ರ

ಮಿಜಾರು: ಮನುಷ್ಯನಿಗೆ ಪ್ರಮುಖವಾಗಿ ಬೇಕಾಗಿರುವುದು ತೃಪ್ತಿ ಹಾಗೂ ಮಾನವೀಯತೆ. ಯಾರು ಯಾಂತ್ರಿಕತೆಗೆ ಒಗ್ಗಿಕೊಂಡಿದ್ದಾರೋ, ಅವರು ಪರಿಸರದ ಕಡೆಗೆ ಗಮನಹರಿಸದೇ ಸ್ವಾರ್ಥಿಗಳಾಗಿ ಮಾನವೀಯತೆಯನ್ನು ಮರೆತು ಜೀವನವನ್ನು ನಡೆಸುತ್ತಿದ್ದಾರೆ ಎಂದು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ… ಡಾ. ಟಿ. ವಿ. ರಾಮಚಂದ್ರ ಹೇಳಿದರು.

ಅವರು ಆಳ್ವಾಸ್ ಇಂಜನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಜರುಗುತ್ತಿರುವ ಒಂದು ತಿಂಗಳ “ಬೂಟ್ ಕ್ಯಾಂಪ್”ನ ತೃತೀಯ ದಿನದ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು.

ಪರಿಸರ ನಾಶಕ್ಕೆ ಪ್ರಮುಖ ಕಾರಣ ಮಾನವ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆಯ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು. ಪ್ರಸ್ತುತ ದೇಶದ ಅನೇಕ ರಾಜ್ಯಗಳು ಹವಮಾನ ವೈಪರೀತ್ಯದಿಂದಾಗಿ ತತ್ತರಿಸಿ ಹೋಗುತ್ತಿವೆ ಇದಕ್ಕೆ ಪ್ರಮುಖ ಕಾರಣ ಪರಿಸರ ನಾಶ ಹಾಗೂ ಜಾಗತಿಕ ತಾಪಮಾನದ ಏರಿಳಿತ. ಪರಿಸರದ ಬಗ್ಗೆ ಕಾಳಜಿವಹಿಸಿ ನಮ್ಮ ಬದುಕಿಗಾಗಿ ಕಾರ್ಯ ನಿರ್ವಹಿಸಿದಾಗಲೇ ಮುಂದಿನ ಪೀಳಿಗೆಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ತಿಳಿಸಿದರು.

ದೊಡ್ಡ ಸಂಖ್ಯೆಯ ಸಸ್ಯ ಹಾಗೂ ಜೀವ ಸಂಕುಲಗಳು ಪಶ್ಚಿಮ ಘಟ್ಟದ ಪರಿಸರದಲ್ಲಿ ಕಂಡುಬರುತ್ತವೆ. ಆದ್ದರಿಂದ ಅಲ್ಲಿ ಔಷಧ ತಯಾರಿಸಲು ಯಾವುದೇ ಅಡ್ಡಿಯಿಲ್ಲ. ವಿವಿಧ ಸ್ಥಳೀಯ ಸಸ್ಯ ಪ್ರಭೇದಗಳಿರುವ ಪ್ರದೇಶದಲ್ಲಿ ನೀರಿನ ಸಮಸ್ಯೆ ಯಾವುದೇ ಕಾರಣಕ್ಕೂ ಉಂಟಾಗುವುದಲ್ಲ. ರಬ್ಬರ್ ಹಾಗೂ ಅಕೇಶಿಯಾ ಮರಗಳಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯನ್ನು ಅಧಿಕ ಪ್ರಮಾಣದಲ್ಲಿ ಎದುರಿಸಬೇಕಾಗುತ್ತದೆ. ಜನರು ಪರಿಸರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಡವುತ್ತಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಪನ್ಮೂಲಗಳ ಪ್ರಾಮುಖ್ಯತೆಯನ್ನು ಅರಿತು ಬದುಕುವುದು ಒಳಿತು. ದೇಶದ ಬೆಳವಣಿಗೆ ಅಗತ್ಯ ಆದರೆ ಆ ಬೆಳವಣಿಗೆ ಇನ್ನೊಂದು ಸಮಸ್ಯೆಗೆ ದಾರಿಯಾಗಬಾರದು. ಸಂಪನ್ಮೂಲಗಳ ವ್ಯರ್ಥ ಬಳಕೆಯು ಜನರ ಸಂಪತ್ತನ್ನು ತೋರುತ್ತದೆ. ಮುಂದಿನ ಪೀಳಿಗೆಗೆ ಸಂಪನ್ಮೂಲಗಳ ಸದ್ಬಳಕೆಯನ್ನು ಮಾಡುವಂತೆ ಮಾರ್ಗದರ್ಶನ ನೀಡಬೇಕು ಎಂದರು.


Spread the love