ಪರ್ಯಾಯಕ್ಕೆ ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ, ಡ್ರೋನ್ ಹಾರಾಟ ನಿಷೇಧ

Spread the love

ಪರ್ಯಾಯಕ್ಕೆ ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ, ಡ್ರೋನ್ ಹಾರಾಟ ನಿಷೇಧ

ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜ. 17 ಮತ್ತು 18 ರಂದು ನಡೆಯಲಿರುವ ಅದಮಾರು ಸ್ವಾಮೀಜಿಯ ಪರ್ಯಾಯ ಮಹೋತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೋಲಿಸ್ ಭದ್ರತೆಯನ್ನು ಒದಗಿಸಿಲಾಗಿದೆ.

ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಪರ್ಯಾಯ ಉತ್ಸವಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಲಿದ್ದು, ಅಲ್ಲದೇ ಸದ್ರಿ ಕಾರ್ಯಕ್ರಮಕ್ಕೆ ಇತರ ಕೇಂದ್ರ ಮಂತ್ರಿಗಳ ಜಿಲ್ಲಾ ಭೇಟಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಸೂಕ್ಷ್ಮತೆಯನ್ನು ಕಂಡು ಮುಂಜಾಗ್ರತೆಗಾಗಿ ಬಂದೋಬಸ್ತ್ ಕರ್ತವ್ಯಕ್ಕೆ 1-ಎಸ್ಪಿ, 1-ಅಡಿಷನಲ್ ಎಸ್ಪಿ, 8-ಡಿವೈಎಸ್ಪಿ, 23-ಪೊಲೀಸ್ ನಿರೀಕ್ಷಕರು, 65-ಪಿಎಸ್ಐ, 193-ಎಎಸ್ಐ, 289-ಹೆಚ್.ಸಿ ಹಾಗೂ 530 ಪೊಲೀಸ್ ಕಾನ್ಸ್ಟೇಬಲ್ಗಳನ್ನು ಒಟ್ಟು 1110 ಅಧಿಕಾರಿ/ಸಿಬ್ಬಂದಿಯವರುಗಳನ್ನು ಹಾಗೂ 300 ಗೃಹರಕ್ಷಕ ಸಿಬ್ಬಂದಿಯವರನ್ನೂ ಸಹ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ.

ಅಲ್ಲದೇ 04 ಕೆಎಸ್ಆರ್ಪಿ, 10 ಡಿಎಆರ್, 05 ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶ್ರೀ ಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಮತ್ತು ಸರ್ವೀಸ್ ಬಸ್ ನಿಲ್ದಾಣದ ಬಳಿ ಹೊರಠಾಣೆಗಳನ್ನು ತೆರಯಲಾಗಿದೆ.

ಒಟ್ಟು ನಗರದ 04 ಆಯಕಟ್ಟಿನ ಸ್ಥಳಗಳಲ್ಲಿ (ಅಂಬಾಗಿಲು, ಇಂದ್ರಾಳಿ, ಕುಕ್ಕಿಕಟ್ಟೆ. ಬಲಾಯಿಪಾದೆ ಕ್ರಾಸ್) ಚೆಕ್ಪೋಸ್ಟ್ಗಳನ್ನು ತೆರೆದು ದಿನದ 24 ಗಂಟೆಯೂ ಸೂಕ್ತ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಡ್ರೋನ್ಗಳ ಹಾರಾಟವನ್ನು ನಿಷೇಧಿಸಲಾಗಿದೆ

ಸಂಚಾರ ಮಾರ್ಗ ಬದಲಾವಣೆ
1) ಜನವರಿ 17 ರಂದು ಮಧ್ಯಾಹ್ನ 2.00 ಗಂಟೆಯಿಂದ ಜನವರಿ 18 ರಂದು ಬೆಳಿಗ್ಗೆ 7.00 ಗಂಟೆಯವರೆಗೆ ಮಂಗಳೂರು, ಬಲಾಯಿಪಾದೆ, ಅಂಬಲಪಾಡಿ ಕಡೆಯಿಂದ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಲಪಾಡಿ ಮುಖೇನ ರಾಹೆ – 66 ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವೀಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು. ಉಡುಪಿ ನಗರಕ್ಕೆ ಸಂಜೆ 7.00 ಗಂಟೆಯ ನಂತರ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸಂಜೆ 7.00 ಗಂಟೆಯ ನಂತರ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಕರಾವಳಿ ಜಂಕ್ಷನ್ನಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಮಂಗಳೂರು ಕಡೆಗೆ ಹೋಗುವುದು. ಮಣಿಪಾಲಕ್ಕೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ನಿಂದ ಮುಂದಕ್ಕೆ ಸಾಗಿ ಅಂಬಾಗಿಲು ಮುಖೇನ ಪೆರಂಪಳ್ಳಿ ರಸ್ತೆಯಿಂದಾಗಿ ಕಾಯಿನ್ ಸರ್ಕಲ್- ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗುವುದು.

2) ಜನವರಿ 17 ರಂದು ಸಂಜೆ 7.00 ಗಂಟೆಯ ತನಕ ಕುಂದಾಪುರ ಬ್ರಹ್ಮಾವರ ಮಾರ್ಗವಾಗಿ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಲಪಾಡಿ ಮುಖೇನ ರಾಹೆ-66 ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ, ಸವರ್ಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು. ಸಂಜೆ 7.00 ಗಂಟೆಯ ನಂತರ ಕುಂದಾಪುರದಿಂದ ಉಡುಪಿ ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳನ್ನು ಪ್ರವೇಶಿಸುದನ್ನು ನಿಷೇಧಿಸಲಾಗಿದೆ. ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಕರಾವಳಿ ಜಂಕ್ಷನ್ನಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಕುಂದಾಪುರ ಕಡೆಗೆ ಹೋಗುವುದು.

3) ಜನವರಿ 17ರಂದು ಸಂಜೆ 7.00 ಗಂಟೆಯ ತನಕ ಕಾರ್ಕಳ. ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ , ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವಂತಹ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವೀಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು ಸಂಜೆ 7.00 ಗಂಟೆಯ ನಂತರ ಮಿಷನ್ ಕಂಪೌಂಡ್ ರಸ್ತೆ ಅಂತಿಮ ನಿಲುಗಡೆಯಾಗಿದ್ದು ಅಲ್ಲಿಂದಲೇ ವಾಪಾಸು ಹಿಂತಿರುಗುವುದು.

4) ಜನವರಿ 17 ರಂದು ಸಂಜೆ 7.00 ಗಂಟೆಯ ತನಕ ಕಾರ್ಕಳ – ಮಣಿಪಾಲಕ್ಕೆ ಹೋಗಿ ಬರುವಂತಹ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವೀಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು. ಸಂಜೆ 7.00 ಗಂಟೆಯ ನಂತರ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಕಾಯಿನ್ ಸರ್ಕಲ್- ಪೆರಂಪಳ್ಳಿ ಅಂಬಾಗಿಲು ಮಾರ್ಗವಾಗಿ ಕರಾವಳಿ ಜಂಕ್ಷನ್ ಆಗಮಿಸಿ, ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಅಂಬಾಗಿಲು ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲ -ಕಾರ್ಕಳ ಕಡೆಗೆ ಹೋಗುವುದು.

5) ಜನವರಿ17 ರಂದು ಮಧ್ಯಾಹ್ನ 2.00 ಗಂಟೆಯಿಂದ ಜನವರಿ 18 ರಂದು ಬೆಳಿಗ್ಗೆ 07.00 ಗಂಟೆಯವರೆಗೆ ಮಂಗಳೂರಿನಿಂದ ಮುಂಬೈ ಹೋಗುವ ಎಲ್ಲಾ ಬಸ್ಸುಗಳು ಕರಾವಳಿ ಜಂಕ್ಷನ್ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನೇರವಾಗಿ ಸಂತೆಕಟ್ಟೆ ಮಾರ್ಗವಾಗಿ ಮುಂಬೈ ಕಡೆಗೆ ತೆರಳುವುದು.

6) ಜನವರಿ 17 ರಂದು ಸಂಜೆ 6.00 ಗಂಟೆಯ ತನಕ ಮಲ್ಪೆ -ಆದಿಉಡುಪಿ-ಕರಾವಳಿ ಜಂಕ್ಷನ್- ಬನ್ನಂಜೆ – ಮಾರ್ಗವಾಗಿ ಉಡುಪಿ ನಗರಕ್ಕೆ ಪ್ರವೇಶಿಸುವುದು. ಸಂಜೆ 7.00 ಗಂಟೆಯ ನಂತರ ಮಲ್ಪೆ ಕಡೆಯಿಂದ ಬರುವಂತಹ ಎಲ್ಲಾ ವಾಹನಗಳು ಆದಿ ಉಡುಪಿ ಜಂಕ್ಷನ್ ತನಕ ಆಗಮಿಸಿ ನಂತರ ವಾಪಾಸು ಅದೇ ಮಾರ್ಗದಲ್ಲಿ ಮಲ್ಪೆ ಕಡೆಗೆ ಹಿಂತಿರುಗುವುದು. ಮಂಗಳೂರು -ಕುಂದಾಪುರ ಕಡೆಗೆ ಕಡೆಗೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ ಮುಖೇನ ಹಾದು ಹೋಗುವುದು.

7) ಜನವರಿ 17 ರಂದು ಮಧ್ಯಾಹ್ನ 2.00 ಗಂಟೆಯಿಂದ ಜನವರಿ 18 ರಂದು ಬೆಳಿಗ್ಗೆ 07.00 ಗಂಟೆಯವರೆಗೆ ನಗರದ ಕಿನ್ನಿಮೂಲ್ಕಿ – ಜೋಡುಕಟ್ಟೆ – ಲಯನ್ ಸರ್ಕಲ್ – ಕೋಟರ್್ ರಸ್ತೆ, ಡಯನಾ ಜಂಕ್ಷನ್, ಕೆ.ಎಂ ಮಾರ್ಗ, ಹನುಮಾನ್ ಸರ್ಕಲ್, ಸಂಸ್ಕೃತ ಕಾಲೇಜ್ ಜಂಕ್ಷನ್, ಕನಕದಾಸ ರಸ್ತೆ, ಬಡಗುಪೇಟೆ ರಸ್ತೆ, ಚಿತ್ತರಂಜನ್ ಸರ್ಕಲ್, ಮಿತ್ರಾ ಆಸ್ಪತ್ರೆ ರಸ್ತೆ, ತೆಂಕುಪೇಟೆ, ಎಲ್.ವಿ.ಟಿ ತೆಂಕಪೇಟೆ ದೇವಸ್ಥಾನದ ರಸ್ತೆ, ಹರಿಶ್ಚಂದ್ರ ಮಾರ್ಗದಿಂದ ವಿದ್ಯೋದಯ ಶಾಲೆಯವರೆಗೆ, ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್ ಸ್ಥಳದವರೆಗೆ, ಕಟ್ಟೆ ಆಚಾರ್ಯ ಮಾರ್ಗ, ಮತ್ತು ರಥಬೀದಿಗಳಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆಯನ್ನು ನಿಷೇಧಿಸಲಾಗಿದೆ.

8) ಪೇಜಾವರ ಮಠದ ಹಿಂಭಾಗದಲ್ಲಿ ಲಘು ಹಾಗೂ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿದ್ದು, ವುಡ್ಲ್ಯಾಂಡ್ ಹೋಟೇಲ್ನಿಂದ ಪೇಜಾವರ ಮಠದ ಹಿಂಭಾಗದವರೆಗೆ ಜನವರಿ 14 ರಿಂದ 20 ರವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

9) ಅಲ್ಲದೇ ಜನವರಿ 17 ರಂದು ಬೆಳಿಗ್ಗೆ 09.00 ಗಂಟೆಯಿಂದ ಜನವರಿ 18 ರಂದು ಸಂಜೆ 06.00 ಗಂಟೆಯವರೆಗೆ ಹೆಚ್ಚುವರಿಯಾಗಿ ಸ್ವಾಗತ ಗೋಪುರ, ಕಿನ್ನಿಮುಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ ಲಯನ್ ಸರ್ಕಲ್, ಡಯಾನ ಸರ್ಕಲ್, ಮಿತ್ರ ಜಂಕ್ಷನ್, ಐಡಿಯಲ್ ಜಂಕ್ಷನ್, ತೆಂಕಪೇಟೆ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಈ ನಿಷೇಧವು ಗಣ್ಯರ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತ ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ.

ಪಾರ್ಕಿಂಗ್ ವ್ಯವಸ್ಥೆ
ಜಿಲ್ಲೆಯಿಂದ ಹಾಗೂ ಹೊರಜಿಲ್ಲೆಗಳಿಮದ ಬರುವ ವಾಹನಗಳಿಗೆ ಈ ಕೆಳಕಂಡ 15 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕ್ರಿಶ್ಚಿಯನ್ ಹೈಸ್ಕೂಲ್ ಆವರಣ, ಉಡುಪಿ, ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್, ಉಡುಪಿ ಆವರಣದ ಎಡಭಾಗ, ವಿವೇಕಾನಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಅಜ್ಜರಕಾಡು. ಉಡುಪಿ, ಭುಜಂಗ ಪಾರ್ಕ್ ಪಕ್ಕದ ರಸ್ತೆ, ಕಿತ್ತೂರು ಚೆನ್ನಮ್ಮ ಕ್ರಾಸ್ ರಸ್ತೆಯ ಇಕ್ಕೆಲಗಳಲ್ಲಿ (ಜಿ.ಟಿ.ಎಸ್ ಶಾಲೆ ರಸ್ತೆ,), ಸೈಂಟ್ ಸಿಸಿಲಿಸ್ ಸ್ಕೂಲ್ ಮೈದಾನ ಅಜ್ಜರಕಾಡು, ಉಡುಪಿ, ಸರ್ವೀಸ್ ಬಸ್ ನಿಲ್ದಾಣದ ಬಳಿ ಬೋರ್ಡ್ ಶಾಲೆ, ಉಡುಪಿ., ಕಲ್ಸಂಕ ಗುಂಡಿಬೈಲು ರಸ್ತೆಯ ಎಡ ಬದಿ ಖಾಲಿ ಸ್ಥಳ, ಬೀಡನಗುಡ್ಡೆ ಮೈದಾನ. ಉಡುಪಿ, ಎಂ.ಜಿ.ಎಂ, ಕಾಲೇಜ್ ಕ್ರೀಡಾಂಗಣ ಉಡುಪಿ, ರಾಜಾಂಗಣ ಪಾರ್ಕಿಂಗ್ ಸ್ಥಳ. ಉಡುಪಿ, ತೆಂಕಪೇಟೆ ಎಲ್ ವಿ ಟಿ ನಾಗಬನ ಬಳಿ, ಪಿ.ಪಿ.ಸಿ. ಕಾಲೇಜ್ ಆವರಣ. ಉಡುಪಿ, ಅಮ್ಮಣ್ಣಿ ರಾಮಣ್ಣ ಹಾಲ್ ಮೈದಾನ. ಉಡುಪಿ, ಪುರಭವನ ಆವರಣ. ಉಡುಪಿ.


Spread the love