ಪಾಂಗಾಳ : ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು
ಉಡುಪಿ : ಬಸ್ಸೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಪಾಂಗಾಳ ರಾ.ಹೆ 66ರಲ್ಲಿ ಸೋಮವಾರ ಮದ್ಯಾಹ್ನ ಸಂಭವಿಸಿದೆ.
ಮೃತ ಸ್ಕೂಟಿ ಸವಾರನನ್ನು ಮೂಲತ: ಮೂಳೂರಿನ ಕೃಷ್ಣರಾಜ್ ಎಂದು ಗುರುತಿಸಲಾಗಿದ್ದು, ಸದ್ಯ ಅವರು ಪಡುಕರೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಪಾಂಗಾಳದ ಅಪಾಯಕಾರಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಉಡುಪಿಯಿಂದ ಕಾಪು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದಿದೆ. ಬಸ್ಸು ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗಾಯಾಳುವನ್ನು ಮೂಳೂರಿನ ಎಸ್ಡಿಪಿಐ ಆಂಬುಲೆನ್ಸ್ ಮೂಲಕ ಸಮಾಜ ಸೇವಕ ಜಲಾಲುದ್ದೀನ್ ಮತ್ತು ಹಮೀದ್ ರವರು ಉಡುಪಿ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಅಪಘಾತದಿಂದ ಬಸ್ಸು ರಸ್ತೆ ಮಧ್ಯದಲ್ಲಿಯೇ ಇದ್ದು ಸ್ಥಳದಲ್ಲಿದ್ದ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಅವರು ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಲು ಸಹಕರಿಸಿದರು.
ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.













