ಪಾಕಿಸ್ತಾನ ಪರ ಘೋಷಣೆ ಕೂಗಿದ  ರಾಘವೇಂದ್ರ ಗಾಣಿಗನಿಗೆ ಚಿಕಿತ್ಸೆ ನೀಡಲು ನ್ಯಾಯಾಲಯ ಆದೇಶ

Spread the love

ಪಾಕಿಸ್ತಾನ ಪರ ಘೋಷಣೆ ಕೂಗಿದ  ರಾಘವೇಂದ್ರ ಗಾಣಿಗನಿಗೆ ಚಿಕಿತ್ಸೆ ನೀಡಲು ನ್ಯಾಯಾಲಯ ಆದೇಶ

ಕುಂದಾಪುರ: ಕುಂದಾಪುರ ಮಿನಿ ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಆರೋಪಿ ರಾಘವೇಂದ್ರ ಗಾಣಿಗನಿಗೆ ಚಿಕಿತ್ಸೆ ನೀಡುವಂತೆ ಕುಂದಾಪುರ ನ್ಯಾಯಾಲಯ ಆದೇಶಿಸಿದೆ.

ಮಾರ್ಚ್ 2ರಂದು ಕುಂದಾಪುರ ಮಿನಿ ವಿಧಾನಸೌಧದ ಒಳಗೆ ಇಂದು ಬೆಳಗ್ಗೆ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ ಆರೋಪದಡಿ ಬಂಧಿತನಾಗಿರುವ ಕೋಡಿಯ ರಾಘವೇಂದ್ರ ಗಾಣಿಗ(43) ವಿರುದ್ಧ ಕುಂದಾಪುರ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ರಾಘವೇಂದ್ರಗಾಣಿಗನಿಗೆ ಮಾರ್ಚ್ 16 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದರು ಅಲ್ಲದೆ ಆರೋಪಿ ರಾಘವೇಂದ್ರ ಗಾಣಿಗನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದರು.

ಪಾಕ್ ಪರ ಘೋಷಣೆ ಕೂಗಿದ ಕೋಡಿ ನಿವಾಸಿ ರಾಘವೇಂದ್ರ ಗಾಣಿಗನಿಗೆ ಯಾರದ್ದಾದರೂ ಪ್ರೇರಣೆ ಇದೆಯೇ ಎಂಬಿತ್ಯಾದಿ ವಿಚಾರದ ಕುರಿತು ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಆರೋಪಿಯನ್ನು ಬುಧವಾರ ಬೆಳಿಗ್ಗೆ ಹಾಜರುಪಡಿಸಿದ್ದು, ಆರೋಪಿ ಪರ ವಕೀಲ ಜಿ. ಸಂತೋಷ್ಕುಮಾರ್ ಶೆಟ್ಟಿ ವಾದ ಮಂಡಿಸಿದ್ದು ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಆತ ಯಾವುದೇ ದುರುದ್ದೇಶವಿಲ್ಲದೇ ಆ ರೀತಿ ವರ್ತಿಸಿದ್ದು, ಪೊಲೀಸರ ಎದುರು ಕೂಡಾ ಅದೇ ರೀತಿ ಕೂಗುತ್ತಿದ್ದ. ಈ ನಿಟ್ಟಿನಲ್ಲಿ ಆತನಿಗೆ ಚಿಕಿತ್ಸೆಯ ಅಗತ್ಯವಿದ್ದು, ಜಾಮೀನು ನೀಡಬೇಕು ಎಂಬುದಾಗಿ ವಾದಿಸಿದ್ದರು.

ಆರೋಪಿಯ ಪರ ವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿ ರಾಘವೇಂದ್ರನಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಾರ್ಚ್ 13ರ ವರೆಗೆ ಚಿಕಿತ್ಸೆ ನೀಡಿ ವರದಿ ಸಲ್ಲಿಸುವಂತೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಸಂದರ್ಭ ಸೂಕ್ತ ಪೊಲಿಸ್ ಭದ್ರತೆಯನ್ನು ನೀಡುವಂತೆಯೂ ಸೂಚಿಸಿದ್ದಾರೆ. ಮಾರ್ಚ್ 13ರವರೆಗೆ ನಿಗಾವಹಿಸಿ ಬಳಿಕ ನೀಡುವ ವೈದ್ಯರ ವರದಿಯ ಆಧಾರದ ಮೇಲೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೇ ಅಥವಾ ಪೊಲೀಸ್ ಕಸ್ಟಡಿಗೆ ನೀಡಬಕೇ ಎನ್ನುವ ಬಗ್ಗೆ ಸೂಚಿಸುವುದಾಗಿ ನ್ಯಾಯಾಲಯ ತಿಳಿಸಿದೆ.


Spread the love