ಪಿಲಿಕುಳದಲ್ಲಿ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೆ ಪ್ರಯೋಗ ತರಬೇತಿ

Spread the love

ಪಿಲಿಕುಳದಲ್ಲಿ ಪ್ರೌಢ  ಶಾಲಾ ವಿಜ್ಞಾನ ಶಿಕ್ಷಕರಿಗೆ ಪ್ರಯೋಗ ತರಬೇತಿ

ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 19.07.2016 ರಿಂದ 21.07.2016 ರವರೆಗೆ ದ. ಕ. ಜಿಲ್ಲೆಯ ಆಯ್ದ ಪ್ರೌಢ ಶಾಲಾ ವಿಜ್ಞಾನ ಅಧ್ಯಾಪಕರಿಗೆ ಪ್ರಯೋಗ ಆಧಾರಿತ ಚಟುವಟಿಕೆಗಳನ್ನು ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಟಿ. ಐ. ಎಫ್. ಆರ್. ಮುಂಬಯಿಯ ಸಂಪನ್ಮೂಲ ವ್ಯಕ್ತಿಗಳಾದ ಡಾ. ಪಿ. ಕೆ. ಜೋಶಿ, ಶ್ರೀ ಪ್ರದೀಪ್ ದಾಸಗುಪ್ತ, ಶ್ರೀಮತಿ ಸುಜಾತಾ, ಕು. ಶುವೆಚ್ಚಾ ಇವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ, ಸುರತ್ಕಲ್, ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಮತ್ತು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜಂಟಿ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಯಿತು.

image001pilikula-20160721-001 image002pilikula-20160721-002

ಮೂರು ದಿನಗಳ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಇದರ ಸಮನ್ವಯ ಅಧಿಕಾರಿ ಡಾ. ಪಿ. ಕೆ. ಜೋಶಿ ನೆರವೇರಿಸಿದರು. ತಮ್ಮ ಉದ್ಘಾಟನಾ ಮಾತುಗಳಲ್ಲಿ ಅವರು ಜೂನಿಯರ್ ಸೈನ್ಸ್ ಒಲಿಂಪಿಯಾಡ್ ಬಗ್ಗೆ ವಿವರಿಸಿ ನಮ್ಮ ವಿದ್ಯಾರ್ಥಿಗಳು ಉತ್ತಮ ತರಬೇತಿ ಪಡೆದು ಜಾಗತಿಕ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಹಲವು ಬಾರಿ ಪ್ರಥಮ ಸ್ಥಾನ ಪಡೆದು ಭಾರತಕ್ಕೆ ಕೀರ್ತಿ ತಂದಿರುತ್ತಾರೆ ಮತ್ತು ಉತ್ತಮ ಸಾಧನೆಯನ್ನು ಪ್ರದರ್ಶಿಸಿರುತ್ತಾರೆ. ಇಂತಹ ತಂಡ ಕಟ್ಟುವಾಗ ನಮ್ಮ ಅನುಭವ ಏನಿತ್ತು ಅಂದರೆ ಅವರೆಲ್ಲರಿಗೆ ಪ್ರಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಪ್ರಯೋಗಗಳನ್ನು ಕೈಕೊಳ್ಳುವಾಗ ಅದಕ್ಕೆ ಬೇಕಾದ ಮೂಲಭೂತ ಸಿದ್ಧಾಂತದ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ಅದಕ್ಕೆ ಅಗತ್ಯ ತರಬೇತಿಯನ್ನು ನೀಡಿದಾಗ ಅವರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಸುಮಾರು 40 ಸಾವಿರ ವಿದ್ಯಾರ್ಥಿಗಳು ಪ್ರತೀ ವರ್ಷ ಇದಕ್ಕಾಗಿ ಪ್ರವೇಶ ಪಡೆಯಲು ಯತ್ನಿಸಿದರೂ ಕೊನೆಯ ಹಂತಕ್ಕೆ ಬರುವ 30 ವಿದ್ಯಾರ್ಥಿಗಳು ತಮ್ಮ ಕೇಂದ್ರದಲ್ಲಿ ಒಲಿಂಪಿಯಾಡ್‍ಗೆ ಸ್ಪರ್ಧಿಸಲು ಅರ್ಹತೆ ಪಡೆದು ತರಬೇತಿ ಪಡೆಯುತ್ತಾರೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಪೂರಕ ವಾತವರಣವಿದ್ದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಆಸಕ್ತಿ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಹಲವು ಮಂದಿ ಒಲಿಂಪಿಯಾಡ್ ವಿಜೇತರು ಇಲ್ಲಿಂದ ಭಾಗವಹಿಸುವ ಅವಕಾಶವಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀ ಪುರುಷೋತ್ತಮರವರು ಮಾತನಾಡಿ ಇಂತಹ ಕಾರ್ಯಕ್ರಮಗಳಿಗೆ ಇಲಾಖೆ ಸ್ಪಂದಿಸುವುದು ಹಾಗೂ ಎಲ್ಲ ರೀತಿಯ ಸಹಕಾರವನ್ನು ನೀಡುವುದು ಎಂದರು. ಈಗಾಗಲೇ ಹಲವು ರೀತಿಯ ರಾಷ್ಟ್ರೀಯ ಹಾಗೂ ಅಂತ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಗಳಲ್ಲಿ ಇಲ್ಲಿಯ ಭಾಗವಹಿಸಿ ಪದಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ ಆ ಪರಂಪರೆ ಮುಂದುವರಿಯಲಿ ಎಂದು ಆಶಿಸಿದರು. ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಕ್ರಿಸ್ಟೋಫರ್ ಮಿಸ್ಕಿತ್ ಶುಭಾಶಂಸನೆಗೈದು ವಿಜ್ಞಾನ ಶಿಕ್ಷಣ ಇಂದು ವಿದ್ಯಾರ್ಥಿಗಳಿಗೆ ಎಲ್ಲಾ ಆಯಾಮಗಳಲ್ಲಿ ನೀಡಬೇಕಾಗಿದೆ ಹಾಗೂ ಅವರ ಕೌಶಲವನ್ನು ಅಭಿವೃದ್ಧಿಪಡಿಸಲು ಹಲವು ವಿಧದ ಕಾರ್ಯಕ್ರಮವನ್ನು ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜೊತೆ ಮುಂದೆ ಸಹ ನಾವು ಸಂಪರ್ಕ ಇಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಲು ಕೈಜೋಡಿಸುವ ಭರವಸೆಯಿತ್ತರು.

image003pilikula-20160721-003 image004pilikula-20160721-004 image005pilikula-20160721-005 image006pilikula-20160721-006

ಅಧ್ಯಕ್ಷತೆ ವಹಿಸಿದ ಕೇಂದ್ರದ ನಿರ್ದೇಶಕರಾದ ಡಾ. ಕೆ. ವಿ. ರಾವ್ ಮಾತನಾಡಿ ಕೇಂದ್ರವು ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಕಲಿಕೆಗೆ ಪೂರಕವಾಗಿ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಈ ಎಲ್ಲ ಸೌಲಭ್ಯಗಳ ಪ್ರಯೋಜನವನ್ನು ಎಲ್ಲರೂ ಪೂರ್ಣ ಬೆಂಬಲವಿತ್ತು ಪಡೆದುಕೊಳ್ಳಬೇಕೆಂದು ಕೋರಿದರು. ಎನ್.ಐ.ಟಿ.ಕೆ. ಸುರತ್ಕಲ್‍ನ ರಸಾಯನಶಾಸ್ತ್ರ ವಿಭಾಗದ ಡಾ. ಅರುಣ ಇಸ್ಲೂರ್ ಸ್ವಾಗತಿಸಿ ದ.ಕ. ಜಿಲ್ಲೆಯ ವಿದ್ಯಾರ್ಥಿಗಳಿಗೋಸ್ಕರ ಈ ಕಾರ್ಯಕ್ರಮವನ್ನು ಆಯೋಜಿಸಲು ತಮ್ಮ ಆಸಕ್ತಿ ಹಾಗೂ ಹೋಮಿ ಭಾಭಾ ಕೇಂದ್ರ ಮತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಕಾರ ಭವಿಷ್ಯದಲ್ಲಿ ಒಲಿಂಪಿಯಾಡ್ ಭಾಗವಹಿಸುವಿಕೆಗೆ ಬುನಾದಿಯಾಗಲಿ ಎಂದು ಹಾರೈಸಿದರು. ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್ ಇದರ ಪ್ರಾಶುಪಾಲೆ ಶ್ರೀಮತಿ ಸುರೇಖಾ ಭಟ್ ವಂದಿಸಿದರು.

ಮೂರು ದಿನಗಳ ಅವಧಿಯ ತರಬೇತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದ ಆಯ್ದ ಕೆಲವು ಪ್ರಯೋಗಗಳನ್ನು ಸಮಗ್ರತೆ ದೃಷ್ಟಿಯಿಂದ ಮತ್ತು ಪ್ರತೀ ಅಂಶದ ಪ್ರಶ್ನಾ ಭಾಗಗಳಾಗಿ ವಿಂಗಡಿಸಿದ ಪೂರಕ ಮಾಹಿತಿಗಳನ್ನು ಒಳಗೊಂಡಂತೆ ಅಧ್ಯಾಪಕರೇ ಮಾಡಿ ವಿಶ್ಲೇಷಣೆಯನ್ನು ಸಂಪನ್ಮೂಲ ವ್ಯಕ್ತಿಗಳೊಡನೆ ಚರ್ಚಿಸಿದರು.

ಕೊನೆಯ ದಿನದ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅಧ್ಯಾಪಕರು ಕಾರ್ಯಕ್ರಮ ಹೇಗೆ ತಮ್ಮ ಅಧ್ಯಯನಕ್ಕೆ ಪೂರಕವಾಗಿತ್ತು ಮತ್ತು ಹೇಗೆ ವಿಭಿನ್ನ ಮತ್ತು ವಿನೂತನ ಅಂಶಗಳನ್ನು ಒಳಗೊಂಡಿತೆಂಬುದನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಭಾಗವಹಿಸಿದ ಅಧ್ಯಾಪಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.


Spread the love