ಪಿಲಿಕುಳ ನಿಸರ್ಗಧಾಮದಲ್ಲಿ ಲೋಕಾಯುಕ್ತ ದಾಳಿ – ದಾಖಲೆ ಪರಿಶೀಲನೆ
ಮಂಗಳೂರು: ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಅಧಿಕಾರಿಗಳು ಇಂದು ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಹಾಗೂ ಅದರ ಘಟಕಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದ್ದಾರೆ.
ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಶ್ರೀ ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ., ಶ್ರೀ ರವಿ ಪೀರು ಪವಾರ್, ಹಾಗೂ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಜೇಂದ್ರ ನಾಯ್ಕ್ ಎಂ.ಎನ್. ಅವರು, ಇಬ್ಬು ವಿಭಾಗಗಳ ಸಿಬ್ಬಂದಿಯೊಂದಿಗೆ, ಗೌರವಾನ್ವಿತ ಲೋಕಾಯುಕ್ತರಿಂದ ಸರ್ಚ್ ವಾರಂಟ್ ಪಡೆದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿದರು.
ಅಧಿಕಾರಿಗಳು ಪ್ರಾಧಿಕಾರದ ವಿವಿಧ ವಿಭಾಗಗಳಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದು, ಆಡಳಿತದಲ್ಲಿ ಕೆಲವು ಲೋಪದೋಷಗಳು ಪತ್ತೆಯಾಗಿರುವುದು ತಿಳಿದು ಬಂದಿದೆ. ಸದ್ಯ ಸರ್ಚ್ ಮತ್ತು ತನಿಖಾ ಕಾರ್ಯಾಚರಣೆ ಮುಂದುವರಿದಿದೆ.
ಪಿಲಿಕುಳ ನಿಸರ್ಗಧಾಮದ ಅಡಿಯಲ್ಲಿ ಬರುವ ಮೃಗಾಲಯ, ಗುತ್ತುಮನೆ, ಮಾನಸ ವಾಟರ್ ಪಾರ್ಕ್, ಲೇಕ್ ಗಾರ್ಡನ್, ಸೈನ್ಸ್ ಮ್ಯೂಸಿಯಂ ಮುಂತಾದ ಘಟಕಗಳಲ್ಲಿ ಯಾವುದೇ ಅಕ್ರಮ ಅಥವಾ ಅವ್ಯವಹಾರ ನಡೆದಿರುವ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತದ ಪೊಲೀಸ್ ಅಧೀಕ್ಷಕರು (ಪ್ರಭಾರ) ಕುಮಾರಚಂದ್ರ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದು “ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಅಥವಾ ಅದರ ಘಟಕಗಳಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ ಕಂಡುಬಂದಲ್ಲಿ ನಾಗರಿಕರು ತಕ್ಷಣವೇ ಲೋಕಾಯುಕ್ತ ಕಚೇರಿಗೆ ದೂರು ನೀಡಬಹುದು” ಎಂದು ಹೇಳಿದ್ದಾರೆ.
ದೂರು ನೀಡಲು ☎️ 0824-2950997 ಗೆ ಕರೆಮಾಡಬಹುದು ಅಥವಾ ನೇರವಾಗಿ ಮಂಗಳೂರು ಲೋಕಾಯುಕ್ತ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.