ಪುತ್ತೂರಿನಲ್ಲಿ ಗಾಂಜಾ ಮಾರಾಟ ಆರೋಪ: 400 ಗ್ರಾಂ ಗಾಂಜಾ ಸಹಿತ ವ್ಯಕ್ತಿ ಬಂಧನ
ಪುತ್ತೂರು: ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಜನವರಿ 1ರಂದು ಬೆಳಿಗ್ಗೆ ಗಾಂಜಾ ಮಾರಾಟ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ, ಪುತ್ತೂರು ನಗರ ಠಾಣೆಯ ಪಿ.ಎಸ್.ಐ ಜನಾರ್ಧನ ಕೆ.ಎಂ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಸಂಶಯಾಸ್ಪದ ವ್ಯಕ್ತಿಯನ್ನು ತಡೆದು ವಿಚಾರಣೆ ನಡೆಸಿದರು. ಈ ವೇಳೆ ಆತನು ಪುತ್ತೂರು ಕಸಬಾ ಗ್ರಾಮದ ನಿವಾಸಿ ಮಹಮ್ಮದ್ ತೌಸೀಫ್ (36) ಎಂದು ಗುರುತಿಸಿಕೊಂಡಿದ್ದು, ತನ್ನ ಬಳಿ ನಿಷೇಧಿತ ಗಾಂಜಾ ಇರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ನಡೆಸಿದ ತಪಾಸಣೆಯಲ್ಲಿ ಆತನಿಂದ ಸುಮಾರು 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮವಾಗಿ ಆರೋಪಿಯನ್ನು ವಶಕ್ಕೆ ಪಡೆದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಅ.ಕ್ರ. 02/2026 ಕಲಂ 8(ಸಿ), 20(ಬಿ) ಎನ್‌ಡಿಪಿಎಸ್ ಕಾಯ್ದೆ 1985ರಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಿಚಾರಣೆ ಬಳಿಕ ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.













