ಪೆಟ್ರೋಲ್, ಡಿಸೆಲ್ ದರ ಹೆಚ್ಚಳ ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

Spread the love

ಪೆಟ್ರೋಲ್, ಡಿಸೆಲ್ ದರ ಹೆಚ್ಚಳ ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ನಿರಂತರವಾಗಿ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪುವಿನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವುದರ ಮೂಲಕ ಜನತೆಯನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗರಿಷ್ಠ ಮಟ್ಟದಲ್ಲಿ ಕುಸಿದಿದ್ದರೂ ಕೂಡ ದೇಶದಲ್ಲಿ ಮಾತ್ರ ಪೆಟ್ರೋಲ್ ಡಿಸೇಲ್ ಬೆಲೆ ವಿಪರೀತ ಏರಿಕೆ ಆಗುತ್ತಲೇ ಇದೆ. ಲಾಕ್ ಡೌನ್ ಸಮಯದಲ್ಲೂ ಬೆಲೆ ಏರಿಕೆ ಮಾಡುವುದರ ಮೂಲಕ ಜನರನ್ನು ಲೂಟುವ ಕೆಲಸ ಮೋದಿಯವರು ಮಾಡಿದ್ದಾರೆ. ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರಕಾರ ನಿರಂತರ ತೈಲ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾದಿಂದ ದೇಶದ ಜನರ ಬದುಕು ತತ್ತರಿಸಿ ಹೋಗಿದೆ. ಅನೇಕ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಸಾಮಾನ್ಯ ವರ್ಗದ ಜನರು ತೀವ್ರ ಸಂಕಷ್ಟದಲ್ಲಿರುವಾಗ ಕೇಂದ್ರ ಸರಕಾರ ತೈಲ ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರಿಂದ ಹಣ ದೋಚುತ್ತಿದೆ. ತಕ್ಷಣವೇ ತೈಲ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿಇನ್ನೂ ತೀವ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಭವನದಿಂದ ಕಾಪು ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಬಳಿಕ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ನವೀನ್ ಚಂದ್ರ ಜೆ. ಶೆಟ್ಟಿ, ವೈ. ಸುಕುಮಾರ್, ಹರೀಶ್ ಕಿಣಿ, ಸರಸು ಡಿ. ಬಂಗೇರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಹಾಗೂ ಪಕ್ಷದ ಬ್ಲಾಕ್, ಬೂತ್ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love