ಪೆಟ್ರೋಲ್ ದರ 1 ಪೈಸೆಗೆ ಇಳಿಕೆ – ಜನರನ್ನು ಮೂರ್ಖರೆಂದು ಭಾವಿಸಿದ ಕೇಂದ್ರ; ಉಡುಪಿ ಜಿಲ್ಲಾ ಕಾಂಗ್ರೆಸ್

Spread the love

ಪೆಟ್ರೋಲ್ ದರ 1 ಪೈಸೆಗೆ ಇಳಿಕೆ – ಜನರನ್ನು ಮೂರ್ಖರೆಂದು ಭಾವಿಸಿದ ಕೇಂದ್ರ; ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ: ಕಳೆದ 16 ದಿನಗಳಲ್ಲಿ ಪೆಟ್ರೋಲ್ ದರ ಲೀಟರಿಗೆ ರೂ.3.64 ಹಾಗೂ ಡಿಸೆಲ್ ರೂ 3.24 ಸತತವಾಗಿ ಏರಿಕೆ ಕಂಡಿದೆ ಆದರೆ ಈಗ ದಿಡೀರನೆ ಪೆಟ್ರೋಲ್ ಹಾಗೂ ಡಿಸೆಲ್ ದರವು ಕೇವಲ ಒಂದು ಪೈಸೆ ಇಳಿಕೆ ಕಂಡಿರುವುದು ಈ ವರ್ಷಾವಧಿಯ ಕೇಂದ್ರ ಸರಕಾರದ ದೊಡ್ಡ ಜೋಕ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಬಣ್ಣಿಸಿದೆ.

ಕೇಂದ್ರ ಸರಕಾರ ದೇಶದ ಜನತೆಯನ್ನು ಎಷ್ಟು ಲಘುವಾಗಿ ಪರಿಗಣಸಿದ್ದಾರೆ ಎನ್ನುವುದಕ್ಕೆ ಈ ನಿರ್ದಾರವೇ ಸ್ಪಷ್ಟ ಉದಾಹರಣೆ. ಜನರ ಸಂಕಷ್ಟವನ್ನು ಪರಿಹರಿಸುವ ಬದಲು ಪರಿಹಾಸ್ಯ ಮಾಡುವ ಕೇಂದ್ರದ ನಡೆ ಆತಂಕಕಾರಿಯಾಗಿದೆ. ಪದೇ ಪದೇ ಸುಳ್ಳನ್ನು ಹೇಳಿ ಜನತೆಯನ್ನು ವಂಚಿಸುವುದರಲ್ಲಿ ಯಶಸ್ವಿಯಾಗಿರುವ ಬಿಜೆಪಿ ತನ್ನ ಪ್ರತಿಯೊಂದು ನಿರ್ಧಾರವು ದೇಶದ ಉದ್ದಾರಕ್ಕಾಗಿ ಎಂದು ಬಿಂಬಿಸುತ್ತಿದೆ. ಯು.ಪಿ.ಎ. ಸರಕಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 140 ಡಾಲರ್ ಇದ್ದಾಗಲೂ ರೂ.69ಕ್ಕೆ ಪೆಟ್ರೋಲ್ ಹಾಗೂ ರೂ. 57ಕ್ಕೆ ಡೀಸೆಲ್ ದೊರಕುತ್ತಿತ್ತು. ಆದರೆ ಮೋದಿ ಸರಕಾರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 60 ಡಾಲರ್‍ಗಿಂತಲೂ ಇಳಿಕೆ ಕಂಡಿರುವಾಗಲೂ ಪೆಟ್ರೋಲ್ ದರವು ರೂ.75ಕ್ಕೆ ಏರಿಕೆ ಕಂಡಿದೆ. ದೇಶದ ಮಧ್ಯಮ ಹಾಗೂ ಬಡ ಜನತೆಯ ಸಂಕಷ್ಟಕ್ಕೆ ಕೇಂದ್ರ ಸ್ಪಂದಿಸುವ ಬದಲು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಆದ ಇಳಿಕೆಯ ಲಾಭವನ್ನು ಜನತೆಗೆ ಹಂಚದೆ ಸಂಪೂರ್ಣ ಲಾಭವನ್ನು ತನ್ನ ಖಜಾನೆಯನ್ನು ತುಂಬಿಸಿಕೊಳ್ಳುವುದರಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದೆ. ಜನ ಸಾಮಾನ್ಯರಿಗೆ ಹೊರೆಯಾಗದಂತೆ ದೇಶದ ಅಭಿವೃದ್ಧಿ ಮಾಡುವುದು ಯು.ಪಿ.ಎ. ಸರಕಾರದ ಉದ್ದೇಶವಾಗಿತ್ತು.

ಆದರೆ ಈಗ ಮೋದಿ ಸರಕಾರ ಜನ ಸಾಮಾನ್ಯರನ್ನು ಲೂಟಿ ಮಾಡಿ. ಶೋಷಿಸಿ ಅಭಿವೃದ್ಧಿಗೊಳಿಸುವ ಯೋಜನೆ ರೂಪಿಸುತ್ತಿದೆ. ಇದನ್ನೇ ಅಚ್ಚೇ ದಿನ್ ಎಂದು ಬಿಂಬಿಸುತ್ತಿದೆ. ಕರ್ನಾಟಕ ವಿಧಾಸಭಾ ಚುನಾವಣಾ ಅವಧಿ ಕೇಂದ್ರ ಸರಕಾರವು ತೈಲ ಬೆಲೆ ಏರಿಕೆಯನ್ನು 15 ದಿನಗಳ ಕಾಲಾವಧಿ ತಡೆಹಿಡಿದು ಚುನಾವಣೆ ಮುಗಿದ ನಂತರ ಈಗ ಏರಿಕೆಯ ಪ್ರಕ್ರಿಯೆ ಪ್ರಾರಂಭಿಸಿದೆ. ವಿವಿಧ ಮಾಧ್ಯಮಗಳ ಪ್ರಕಾರ ಕಚ್ಚಾ ತೈಲ ದರ ಏರುವ ಬದಲು 50 ಡಾಲರ್‍ನತ್ತ ಇಳಿಕೆಯಾಗಲಿದೆ. ಕಳೆದ ವಾರವೇ ಕಚ್ಚಾ ತೈಲದ ದರದಲ್ಲಿ ಶೇಕಡಾ 2.5ರಷ್ಟು ಇಳಿಕೆ ಕಂಡಿದೆ. ಹೀಗಿರುವಾಗ ಕೇಂದ್ರ ಸರಕಾರ ಪೆಟ್ರೋಲ್ ದರವನ್ನು ಒಂದು ಪೈಸೆ ಕಡಿತಗೊಳಿಸಿ ಜನರನ್ನು ಮೂರ್ಖರಾಗಿಸುವ ಪ್ರಯತ್ನದಲ್ಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ದಿನೇಶ್ ಪುತ್ರನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಜಿಲ್ಲಾ ಕಾರ್ಯದರ್ಶಿ ಹರೀಶ್ ಕಿಣಿ, ಉಡುಪಿ ಬ್ಲಾಕ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love