ಪೆಟ್ ಶಾಪ್‍ಗಳ ನೋಂದಣಿ ಕಡ್ಡಾಯ :ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚನೆ

Spread the love

ಪೆಟ್ ಶಾಪ್‍ಗಳ ನೋಂದಣಿ ಕಡ್ಡಾಯ :ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚನೆ

ಮಂಗಳೂರು:  ಜೀವಂತ ಪ್ರ್ರಾಣಿ ಮತ್ತು ಪಕ್ಷಿಗಳ ಮಾರಾಟ ಮಾಡುವ ಪೆಟ್ ಶಾಪ್‍ಗಳು ಪ್ರಾಣಿ ಹಿಂಸಾ ತಡೆ ಕಾಯಿದೆಯಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಆಗಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 20 ಪೆಟ್ ಶಾಪ್‍ಗಳಿದ್ದು, ಈ ಪೈಕಿ ಕೇವಲ 2 ಪೆಟ್ ಶಾಪ್‍ಗಳು ಮಾತ್ರ ಈ ಕಾಯ್ದೆಯಡಿ ನೋಂದಣಿ ಮಾಡಿದೆ. ಕಾಯಿದೆಯಡಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಪ್ರತ್ಯೇಕವಾಗಿ ನೋಂದಣಿ ಮಾಡಬೇಕು. ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳು, ಪೆಟ್ ಶಾಪ್‍ಗಳಿಗೆ ಟ್ರೇಡ್ ಲೈಸನ್ಸ್ ನೀಡುವ ಮುನ್ನ ಈ ಕಾಯಿದೆಯಡಿ ನೋಂದಣಿ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಪ್ರಾಣಿ ದಯಾ ಸಂಘದ ಸದಸ್ಯರು ಮಾತನಾಡಿ, ಕೆಲವು ಪೆಟ್ ಶಾಪ್‍ಗಳಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು ಕ್ರೂರವಾಗಿ ಇಡಲಾಗುತ್ತಿದ್ದು, ಯಾವುದೇ ರೀತಿಯ ಅಗತ್ಯ ಸೌಕರ್ಯಗಳನ್ನು ಒದಗಿಸುವುದಿಲ್ಲ. ರಾತ್ರಿ ವೇಳೆ ಅಂಗಡಿಗಳ ಬಾಗಿಲು ಮುಚ್ಚಿ ಹೋಗುವುದರಿಂದ ಅವುಗಳಿಗೆ ಸೂಕ್ತ ಗಾಳಿ ಬೆಳಕು ದೊರಕುವುದಿಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಕುಮಾರಧಾರ ಸರಕಾರಿ ಗೋಶಾಲೆ ನಿರ್ಮಿಸಲು ಮಂಜೂರು ಮಾಡಿರುವ 98.45 ಎಕರೆ ಭೂಮಿಯ ಗಡಿ ಗುರುತು ಮಾಡಿ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು. ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ತಾಲೂಕಿನ ಬೊಂಡಂತಿಲದಲ್ಲಿ ಪ್ರಾಣಿ ಮಿತ್ರ ಆಸ್ಪತ್ರೆ ಸ್ಥಾಪನೆ ಸಂಬಂಧ ಸದರಿ ಜಾಗದ ಅತಿಕ್ರಮಣ ತಡೆಯಲು ತಡೆಗೋಡೆ ನಿರ್ಮಾಣಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳ ಸಂತಾನ ಹರಣ ಹಾಗೂ ಅವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 11 ಖಾಸಗಿ ಗೋಶಾಲೆಗಳಿಗೆ ಸರಕಾರದಿಂದ ರೂ. 22 ಲಕ್ಷ ಮೊತ್ತವನ್ನು ನಿರ್ವಹಣೆಗಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ನಗರದ ನಂದಿಗುಡ್ಡೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಪ್ರಾಣಿಗಳ ಶವಗಾರವನ್ನು ಸಾರ್ವಜನಿಕರ ವಿರೋಧದಿಂದ ಕೈ ಬಿಡಲಾಗಿದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಪಶುಸಂಗೋಪನೆ ಉಪನಿರ್ದೇಶಕ (ಪಾಲಿ ಕ್ಲಿನಿಕ್) ಗೋಪಾಲಕೃಷ್ಣ ಭಟ್, ಪ್ರಾಣಿ ದಯಾ ಸಂಘದ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು


Spread the love
Subscribe
Notify of

0 Comments
Inline Feedbacks
View all comments