ಪೇಜಾವರ ಶ್ರೀಗಳ ರಕ್ಷಣೆಗೆ ನಾವಿದ್ದೇವೆ ಎಂದ ಯುವ ಕಾಂಗ್ರೆಸಿಗರೇ ಈಗೆಲ್ಲಿದ್ದೀರಿ – ಶ್ರೀಶ ನಾಯಕ್ 

Spread the love

ಪೇಜಾವರ ಶ್ರೀಗಳ ರಕ್ಷಣೆಗೆ ನಾವಿದ್ದೇವೆ ಎಂದ ಯುವ ಕಾಂಗ್ರೆಸಿಗರೇ ಈಗೆಲ್ಲಿದ್ದೀರಿ – ಶ್ರೀಶ ನಾಯಕ್ 

 ಉಡುಪಿ: ಕೃಷ್ಣ ಮಠಕ್ಕೆ ಮುಸ್ಲೀಂ ಬಾಂಧವರನ್ನು ಆಹ್ವಾನಿಸಿ, ಅವರಿಗೆ ಇಫ್ತಾರ್ ಕೂಟ ನಡೆಸುವುದಕ್ಕೆ ಪೇಜಾವರ ಶ್ರೀಗಳು ಅವಕಾಶ ಕೊಟ್ಟಾಗ, ಪೇಜಾವರ ಶ್ರೀಗಳ ರಕ್ಷಣೆಗೆ ನಾವಿದ್ದೇವೆ ಎಂದು ಯುವ ಕಾಂಗ್ರೆಸ್ ನಾಯಕರು ಅನಗತ್ಯ  ಹೇಳಿಕೆ ನೀಡಿದ್ದರು. ಆದರೇ ಈಗ ಕೆಲವು ದುರುಳರು ಪೇಜಾವರ ಶ್ರೀಗಳ ಭಾವಚಿತ್ರವನ್ನು ತುಳಿದು ಅವಮಾನ ಮಾಡಿದ್ದಾರೆ, ಬೆದರಿಕೆ ಒಡ್ಡಿದ್ದಾರೆ. ಆದರೇ ಈ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ತುಟಿಪಿಟಿಕ್ಕೆನ್ನುತ್ತಿಲ್ಲ. ಈ ಮೂಲಕ ಪೇಜಾವರ ಶ್ರೀಗಳ ಬಗ್ಗೆ ಯುವ ಕಾಂಗ್ರೆಸ್ ನಾಯಕರ ಭಕ್ತಿ, ಗೌರವ, ಕಾಳಜಿ ಏನೆಂಬುದು ಜಗಜ್ಜಾಹೀರಾಗಿದೆ ಎಂದು ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಹೇಳಿದ್ದಾರೆ.

ಪೇಜಾವರ ಶ್ರೀಗಳ ಬಗ್ಗೆ ಕಾಂಗ್ರೆಸಿಗರಿಗೆ ನಿಜವಾದ ಗೌರವ ಇದ್ದಿದ್ದರೇ, ಪೇಜಾವರ ಶ್ರೀಗಳನ್ನು ಅವಮಾನಿಸಿದ ಕೃತ್ಯವನ್ನು ಖಂಡಿಸಬೇಕಾಗಿತ್ತು, ಪೇಜಾವರ ಶ್ರೀಗಳೊಂದಿಗೆ ನಾವಿದ್ದೇವೆ ಎಂದು ಈಗ ಹೇಳಬೇಕಾಗಿತ್ತು. ಆದರೇ ಅವರು ಆಂದು ಕೇವಲ ಮುಸ್ಲೀಮರನ್ನು ಓಲೈಸುವುದಕ್ಕಾಗಿ ಪೇಜಾವರ ಶ್ರೀಗಳನ್ನು ಬೆಂಬಲಿಸಿದ್ದರು. ಇದರಿಂದ ಕಾಂಗ್ರೆಸಿನಲ್ಲಿರುವ ಹಿಂದುಗಳಿಗೆ ಪೇಜಾವರ ಶ್ರೀಗಳ ಬಗ್ಗೆ ಗೌರವ ಇಲ್ಲ, ಅವರದ್ದು ಕೇವಲ ಬೂಟಾಟಿಕೆಯ ಹಿಂದುತ್ವ ಎಂಬುದು ಇದರಿಂದ ಸಾಬೀತಾಗಿದೆ ಎಂದು ಶ್ರೀಶ ನಾಯಕ್ ಟೀಕಿಸಿದ್ದಾರೆ.

ಪೇಜಾವರ ಶ್ರೀಗಳು, ಧರ್ಮ ಸಂಸದ್ ನಲ್ಲಿ ಅಲ್ಪಸಂಖ್ಯಾತರಿಗೆ ಸಿಗುವ ಸರ್ಕಾರಿ ಸೌಲಭ್ಯಗಳು ಹಿಂದುಗಳಿಗೂ ಸಿಗಬೇಕು, ಅದಕ್ಕೆ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು ಎಂದು ಹೇಳಿದ್ದಾರೆ, ಇದರಲ್ಲಿ ಏನು ತಪ್ಪಿದೆ, ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರ, ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದುಗಳಿಗೆ ಅನ್ಯಾಯ ಮಾಡಿದೆ. ಅದನ್ನು ಸಂವಿಧಾನಾತ್ಮಕವಾಗಿ ಸರಿಪಡಿಸಿ ಎಂದು ಶ್ರೀಗಳು ಆಗ್ರಹಿಸಿದ್ದಾರೆ. ಇದಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತದೆ.

ಆದರೇ ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸಿಗರಿಗೆ ಇದು ಸಹಜವಾಗಿಯೇ ಇಷ್ಟವಾಗಿಲ್ಲ. ಆದ್ದರಿಂದ ಅವರ ಕುಮ್ಮಕ್ಕಿನಿಂದಲೇ ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ ಅವಮಾನ ನಡೆಸಲಾಗುತ್ತಿದೆ. ಅಂತಹ ಯುವ ಕಾಂಗ್ರೆಸ್ ಪಕ್ಷದಿಂದ ಪೇಜಾವರ ಶ್ರೀಗಳಿಗೆ ರಕ್ಷಣೆ ಬೆಂಬಲ ಬೇಕಾಗಿಲ್ಲ. ಅವರ ಬೆಂಬಲಕ್ಕೆ ಬಿಜೆಪಿ ಯುವ ಮೋರ್ಚಾ ಯಾವತ್ತೂ ಸಿದ್ಧ ಇದೆ ಎಂದು ಶ್ರೀಶ ನಾಯಕ್ ಹೇಳಿದ್ದಾರೆ.


Spread the love