ಪ್ರತಿಭಟನೆಗೆ ವ್ಯವಸ್ಥಿತ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಮೀನುಗಾರರ ಪ್ರಶಂಸೆಗೆ ಪಾತ್ರವಾದ ಜಿಲ್ಲಾ ಪೊಲೀಸ್!

Spread the love

ಪ್ರತಿಭಟನೆಗೆ ವ್ಯವಸ್ಥಿತ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಮೀನುಗಾರರ ಪ್ರಶಂಸೆಗೆ ಪಾತ್ರವಾದ ಜಿಲ್ಲಾ ಪೊಲೀಸ್!

ಉಡುಪಿ: ಕಳೆದ 23 ದಿನಗಳಿಂದ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರನ್ನು ಹುಡುಕಿ ತರುವಂತೆ ಆಗ್ರಹಿಸಿ ಕರಾವಳಿಯ ಮೂರು ಜಿಲ್ಲೆಗಳ ಸಹಸ್ರಾರು ಸಂಖ್ಯೆಯ ಮೀನುಗಾರರು ರವಿವಾರ ಉಡುಪಿಯ ಅಂಬಲಪಾಡಿ ಜಂಕ್ಷನ್ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಮೀನುಗಾರರ ಆಕ್ರೋಶಕ್ಕೆ ಸುಮಾರು ನಾಲ್ಕು ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಮೂರು ತಾಸುಗಳ ಕಾಲ ಸ್ಥಗಿತಗೊಂಡಿತು. ಘಟನೆ ನಡೆದ ದಿನದಿಂದ ಉಡುಪಿಯ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ ನಿಂಬರಗಿ ಅವರ ಸಹಕಾರ ಹಾಗೂ ಪ್ರತಿಭಟನೆಯಲ್ಲಿ ನಿರ್ವಹಿಸಿದ ಪೊಲೀಸ್ ಬಂದೊಬಸ್ತು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮೀನುಗಾರರ ಪ್ರಶಂಸೆಗೆ ಭಾನುವಾರ ಕಾರಣವಾಯಿತು.

ಪ್ರತಿಭಟನೆಯುದ್ದಕ್ಕೂ ಮಲ್ಪೆಯಿಂದ ಉಡುಪಿಯ ವರೆಗೆ ಸುಮಾರು 8 ಕಿ.ಮೀ ವರೆಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ ನಿಂಬರಗಿ ಸ್ವತಃ ಮೆರವಣಿಗೆಯಲ್ಲಿ ನಡೆದುಕೊಂಡು ಬಂದು ಪ್ರತಿಭಟನೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳಾಗದಂತೆ ಎಚ್ಚರಿಕೆ ವಹಿಸಿದ್ದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿಗಳಾದ ಜೈಶಂಕರ್, ದಿನೇಶ್ ಕುಮಾರ್, ಅರುಣಾಕ್ಷುಗಿರಿ ಸಾಥ್ ನೀಡಿದ್ದರು.

ರಾಷ್ಟ್ರೀಯ ಬಂದ್ ಹೋರಾಟದ ಹಿನ್ನೆಲೆಯಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಉಸ್ತುವಾರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಮಲ್ಪೆ ಹಾಗೂ ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸುಮಾರು 400 ಪೊಲೀಸ್ ಸಿಬ್ಬಂದಿಗಳು, 100ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು, ಮೂರು ಕೆಎಸ್ಆರ್ಪಿ, ಆರು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆ ಸಂಪೂರ್ಣ ಚಿತ್ರೀಕರಣಕ್ಕೆ ಒಂದು ಡ್ರೋನ್ ಕೆಮೆರಾವನ್ನು ಬಳಸಲಾಗಿತ್ತು

ಹೆದ್ದಾರಿ ತಡೆಯ ಹಿನ್ನೆಲೆಯಲ್ಲಿ ಕುಂದಾಪುರದಿಂದ ಮಂಗಳೂರಿಗೆ ಹೋಗುವ ವಾಹನಗಳಿಗೆ ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ಮಾರ್ಗವಾಗಿ ಅಲ್ಲಿಂದ ಅಲೆವೂರು ರಸ್ತೆ, ಬೀಡಿನಗುಡ್ಡೆ ರಸ್ತೆ ಹಾಗೂ ಹಿರಿಯಡ್ಕ ಜೈಲು ರಸ್ತೆಯನ್ನು ಮತ್ತು ಮಂಗಳೂರಿನಿಂದ ಕುಂದಾಪುರಕ್ಕೆ ಹೋಗುವ ವಾಹನಗಳಿಗೆ ಕಿನ್ನಿಮುಲ್ಕಿ ಮಾರ್ಗ-ಬ್ರಹ್ಮಗಿರಿ-ಬನ್ನಂಜೆ-ಕಲ್ಸಂಕ-ಅಂಬಾಗಿಲು ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಕಲ್ಪಿಸಲಾಗಿತ್ತು. ಲಾರಿ ಸಂಚಾರವನ್ನು ಸಾಸ್ತಾನ ಹಾಗೂ ಹೆಜಮಾಡಿ ಟೋಲ್ ಕೇಂದ್ರಗಳಲ್ಲಿಯೇ ಸ್ಥಗಿತಗೊಳಿಸಲಾಗಿತ್ತು.

ಪ್ರತಿಭಟನೆಯ ಕೊನೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಅವರು ಮಾತನಾಡಿ ಘಟನೆ ನಡೆದ ದಿನದಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೀನುಗಾರರ ಪತ್ತೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದಲ್ಲದೆ ತಮ್ಮ ಶಕ್ತಿ ಮೀರಿ ಸಹಕಾರ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಿನಕ್ಕೆ 10 ಬಾರಿಯಾದರೂ ಶೋಧ ಕಾರ್ಯದ ಕುರಿತ ಬೆಳವಣಿಗೆಯನ್ನು ಮೀನುಗಾರರೊಂದಿಗೆ ಹಂಚಿಕೊಂಡಿದ್ದಾರೆ ಆದ್ದರಿಂದ ಯಾವುದೇ ಮೀನುಗಾರರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ದ ಯಾವುದೇ ಘೋಷಣೆ ಕೂಗದಂತೆ ವಿನಂತಿಸಿಕೊಂಡರು.

ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯ ವರೆಗೆ ಉಡುಪಿ ಕಿನ್ನಿಮುಲ್ಕಿಯಿಂದ ಅಂಬಾಗಿಲು ಜಂಕ್ಷನ್ವರೆಗಿನ ಸುಮಾರು ನಾಲ್ಕು ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದರೊಂದಿಗೆ ಸಂಚಾರ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವುದರೊಂದಿಗೆ, ಪ್ರತಿಭಟನೆಯಲ್ಲಿ ಕಾನೂನು ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಿದ ಜಿಲ್ಲಾ ಪೊಲೀಸ್ ಮೀನುಗಾರರ ಪ್ರಶಂಸೆಗೆ ಕಾರಣವಾಯಿತು.


Spread the love