ಪ್ರಮೋದ್ ಮುತಾಲಿಕ್ ಗೆ ಗೋವಾ ಪ್ರವೇಶ ನಿರಾಕರಣೆ: ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Spread the love

ನವದೆಹಲಿ: ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತವರ ಸಹಚರರಿಗೆ ಗೋವಾ ರಾಜ್ಯದೊಳಗೆ ಪ್ರವೇಶ ನಿರ್ಬಂಧಿಸಿ ಮುಂಬೈ ಹೈಕೋರ್ಟ್ ನ  ಗೋವಾ ಪೀಠ ನೀಡಿರುವ ತೀರ್ಪನ್ನು ವಜಾಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಗೋವಾ ರಾಜ್ಯದಲ್ಲಿ ಶಾಂತಿ ಕಾಪಾಡಲು ಈ ಆದೇಶ ನೀಡಿರಬಹುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೆಚ್.ಎಲ್.ದತ್ತು ಮತ್ತು ನ್ಯಾಯಮೂರ್ತಿ ಅಮಿತವ ರಾಯ್ ಅವರಿದ್ದ ಪೀಠ ಹೇಳಿದೆ.

ಗೋವಾ ರಾಜ್ಯದ ಜನತೆ ತಮ್ಮ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತಾರೆ. ನೀವು ಏನು ಮಾಡುತ್ತಿದ್ದೀರಿ? ನೀವು  ಕೇವಲ ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದೀರಿ. ಶ್ರೀರಾಮ ಸೇನೆ ಕಾರ್ಯಕರ್ತರು ಪಬ್ ಗೆ ನುಗ್ಗಿ ಯುವಕ-ಯುವತಿಯರನ್ನು ಹೊಡೆಯುತ್ತಾರೆ. ಸದ್ಯಕ್ಕೆ ಇದೇ ಆದೇಶ ಮುಂದುವರಿಯಲಿ. ಆರು ತಿಂಗಳು ಕಳೆದ ನಂತರ ಬನ್ನಿ ಎಂದು ಛೀಮಾರಿ ಹಾಕಿದ್ದಾರೆ.

ಗೋವಾ ರಾಜ್ಯ ಪೊಲೀಸರು ಮುತಾಲಿಕ್ ಮತ್ತು ಅವರ ಸಹಚರರ ಮೇಲೆ ತಂದಿರುವ ನಿಷೇಧಾಜ್ಞೆ ಆದೇಶದಲ್ಲಿ ಮಧ್ಯ ಪ್ರವೇಶಿಸುವುದನ್ನು ನಿರಾಕರಿಸಿ ಕಳೆದ ಜುಲೈ 2ರಂದು ಮುಂಬೈ ಹೈಕೋರ್ಟ್ ನ ಗೋವಾ ಪೀಠ ಆದೇಶ ನೀಡಿತ್ತು, ಇದನ್ನು ಪ್ರಶ್ನಿಸಿ ಪ್ರಮೋದ್ ಮುತಾಲಿಕ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ತಮ್ಮ ವಿರುದ್ಧ ಸಿಆರ್ ಪಿಸಿ ಸೆಕ್ಷನ್ 144ರಡಿಯಲ್ಲಿ ಹೇರಿರುವ ಆದೇಶ ಕಾನೂನುಬಾಹಿರವಾಗಿದ್ದು, ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ತಮಗೆ ಪ್ರಶ್ನೆ ಮಾಡಲು ಅವಕಾಶ ನೀಡದೆ ಮತ್ತೆ ಮತ್ತೆ ಆದೇಶ ನೀಡಲಾಗಿದೆ ಎಂದು ಮುತಾಲಿಕ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಕಳೆದ ವರ್ಷ ಆಗಸ್ಟ್ 19ರಂದು 60 ದಿನಗಳ ಪ್ರವೇಶ ನಿರಾಕರಿಸಿ ಉತ್ತರ ಮತ್ತು ದಕ್ಷಿಣ ಗೋವಾದ ಜಿಲ್ಲಾ ನ್ಯಾಯಾಧೀಶರು ಆದೇಶ ನೀಡಿದ್ದರು. ನಂತರ ಪ್ರವೇಶ ನಿರ್ಬಂಧವನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುತ್ತಾ ಹೋಗಲಾಯಿತು.


Spread the love