ಪ್ರವಾಸೋದ್ಯಮ ಮುಂದಿನ ದಿನಗಳಲ್ಲಿ ಪ್ರಮುಖ ಆರ್ಥಿಕ ಮೂಲವಾಗಲಿದೆ- ಪ್ರಮೋದ್ ಮಧ್ವರಾಜ್

Spread the love

ಪ್ರವಾಸೋದ್ಯಮ ಮುಂದಿನ ದಿನಗಳಲ್ಲಿ ಪ್ರಮುಖ ಆರ್ಥಿಕ ಮೂಲವಾಗಲಿದೆ- ಪ್ರಮೋದ್ ಮಧ್ವರಾಜ್
ಉಡುಪಿ: ಕರ್ನಾಟಕದಲ್ಲಿ ಇರುವಷ್ಟು ಪ್ರವಾಸಿ ಕೇಂದ್ರಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಮುಂದೊಂದು ದಿನ ಕರ್ನಾಟಕದಲ್ಲಿ ಪ್ರವಾಸೋದ್ಯಮ ಜನರ ಆದಾಯದ ಪ್ರಮುಖ ಮೂಲವಾಗಲಿದೆ ಎಂದು ರಾಜ್ಯ ಮೀನುಗಾರಿಕಾ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಪತ್ರಿಕಾ ಭವನದಲ್ಲಿ “ಹೆವನ್ಸ್ ಆಫ್ ಕರ್ನಾಟಕ ” ವೆಬ್‌ಸೈಟ್ ಉದ್ಘಾಟನೆಯನ್ನು ನಡೆಸಿ ಮಾತನಾಡಿದರು.

tourism-website-pramod-madhwaraj tourism-website-pramod-madhwaraj09 tourism-website-pramod-madhwaraj099

ನಮ್ಮ ಜಿಲ್ಲೆಯಷ್ಟೂ ವಿಶಾಲವಾಗಿರದ ಸಿಂಗಾಪುರ ಇಂದು ಜಗತ್ತಿನ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಿದೆ. ಪ್ರವಾಸೋದ್ಯಮವೇ ಅಲ್ಲಿನ ಮೂಲ ಆದಾಯ. ನಮ್ಮ ದೇಶದಲ್ಲಿ ನೂರಾರು ಸಿಂಗಾಪುರಗಳನ್ನು ಸೃಷ್ಟಿಸುವಷ್ಟು ಪ್ರಾಕೃತಿಕ ಸಂಪತ್ತಿದೆ. ಆದರೆ ಈ ಕಾರ್ಯಕ್ಕೆ ಸರಕಾರದ ಜೊತೆಗೆ ಜನರ ಪ್ರಯತ್ನವೂ ಅತೀ ಅಗತ್ಯ ಎಂದು ಹೇಳಿದರು.

ಹೆವನ್ಸ್ ಆಫ್ ಕರ್ನಾಟಕ ವೆಬ್‌ಸೈಟ್ ಉಡುಪಿಯ ಕೆಲ ಉತ್ಸಾಹಿ ಯುವಕರು ಸಿದ್ಧಪಡಿಸಿದ ವೆಬ್‌ಸೈಟ್ ಆಗಿದೆ. ಇದನ್ನು ಸರಕಾರದ ನೆರವಿನಿಂದ ಅಭಿವೃದ್ಧಿ ಪಡಿಸುವ ಬಗ್ಗೆ ನಾನು ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡುತ್ತೇನೆ. ಯುವಕರು ಇಂಥ ಕೆಲಸಗಳನ್ನು ಮಾಡುವ ಮೂಲಕ ಕೇವಲ ಸಾಮಾಜಿಕ ಸೇವೆಯನ್ನಷ್ಟೇ ಅಲ್ಲದೆ ಆರ್ಥಿಕ ಸ್ವಾವಲಂಭನೆಯನ್ನೂ ಪಡೆಯಬೇಕು ಎಂದು ಹೇಳಿದರು.

ಯಾವುದೇ ಫಲಾಪೇಕ್ಷೆ ಇಲ್ಲದೇ ಉಡುಪಿಯ ಯುವಕರ ತಂಡ ಈ ಅಂತರ್ಜಾಲ ತಾಣವೊಂದನ್ನು ತೆರೆದಿದ್ದು, ಇದರಲ್ಲಿ ರಾಜ್ಯದ ಪ್ರವಾಸಿ ಕೇಂದ್ರಗಳ ವಿಸ್ತೃತ ಮಾಹಿತಿ ನೀಡಲಾಗಿದೆ. ರಾಜ್ಯದ ಸುಮಾರು 100ರಷ್ಟು ಪ್ರವಾಸಿ ಕೇಂದ್ರಗಳನ್ನು ಮೊದಲ ಹಂತದಲ್ಲಿ ಪರಿಚಯಿಸಲಾಗಿದೆ. ಮುಂದಿನ ಹಂತದಲ್ಲಿ ಇನ್ನೂ 50 ಕೇಂದ್ರಗಳನ್ನು ಸೇರ್ಪಡೆ ಮಾಡಲಿದೆ. ಪ್ರವಾಸೀ ಕೇಂದ್ರಗಳ ಇತಿಹಾಸ, ವಿಶೇಷತೆ, ಹತ್ತಿರವಿರುವ ಇತರ ತಾಣಗಳು, ಪ್ರಯಾಣಿಸಲು ಇರುವ ಸೌಕರ್ಯ, ಮಾರ್ಗ ನಕ್ಷೆ, ಸೇರಿದಂತೆ ಎಲ್ಲಾ ಮಾಹಿತಿಯನ್ನು ಈ ತಾಣ ಒದಗಿಸಲಿದೆ ಎಂದು ತಂಡ ತಿಳಿಸಿದೆ.

ತಂಡದ ಸದಸ್ಯರಾದ ಶಶಿಕಾಂತ್ ಶೆಟ್ಟಿ, ಅವಿನಾಶ್ ಕಾಮತ್, ರಷ್ಮಿ ಜೆನ್ನಿಫರ್, ನಿತೇಶ್ ರಾವ್, ವಿರಾಜ್ ಕಾಪು, ಶೈಲೇಶ್ , ಅಸ್ಪರ್, ಚೇತನ್, ದಿವಾಕರ್ ಹಿರಿಯಡ್ಕ ಮೊದಲಾದವರು ಇದ್ದರು.


Spread the love