ಪ್ರಾದೇಶಿಕ ತಾರತಮ್ಯವು ಅಖಂಡ ಕರ್ನಾಟಕಕ್ಕಿರುವ ಬಹುದೊಡ್ಡ ಸವಾಲು: ವೈ.ಎಸ್.ವಿ. ದತ್ತ

Spread the love

ಪ್ರಾದೇಶಿಕ ತಾರತಮ್ಯವು ಅಖಂಡ ಕರ್ನಾಟಕಕ್ಕಿರುವ ಬಹುದೊಡ್ಡ ಸವಾಲು: ವೈ.ಎಸ್.ವಿ. ದತ್ತ

ವಿದ್ಯಾಗಿರಿ: ಸಂಪತ್ತಿನ ಕೇಂದ್ರಿಕರಣವು ಕರ್ನಾಟಕದ ಅಖಂಡತೆಗೆ ಇರುವ ಪ್ರಮುಖ ಸವಾಲಾಗಿದ್ದು ,ಜಾತಿಪ್ರೇರಿತವಾದ ಸ್ವಾರ್ಥ, ಪಕ್ಷಪ್ರೇರಿತವಾದ ರಾಜಕಾರಣ, ವ್ಯಕ್ತಿಪ್ರತಿಷ್ಠೆಯಾದ ಮೂರ್ಖತನವು ಆರ್ಥಿಕತೆಯ ವಿಕೇಂದ್ರಿಕರಣಕ್ಕೆ ಅಡ್ಡಿಯನ್ನುಂಟು ಮಾಡಿವೆ.ಇದನ್ನು ಹೋಗಲಾಡಿಸಲು ಭೌಗೋಳಿಕ ರಾಜಕೀಯ ವ್ಯವಸ್ಥೆಯೊಳಗೆ ಪ್ರಾದೇಶಿಕ ಸಮಾನತೆಯನ್ನು ಕಾಪಾಡುವಂತಹ ಏಕರೂಪತೆ ಬರಬೇಕು ಎಂದು ವೈ.ಎಸ್.ವಿ. ದತ್ತ ಹೇಳಿದರು.

ಆಳ್ವಾಸ್ ನುಡಿಸಿರಿ ಎರಡನೇ ದಿನ ನಡೆದ ವಿಶೇಷೋಪನ್ಯಾಸದಲ್ಲಿ `ಅಖಂಡ ಕರ್ನಾಟಕ” ವಿಷಯದ ಕುರಿತು ಮಾತನಾಡಿದರು.

ಕೆಂಗಲ್ ಹನುಮಂತಯ್ಯರವರಂತಹ ಮಹಾನ್ ವ್ಯಕ್ತಿಗಳ ಪರಿಶ್ರಮದಿಂದ ಹುಟ್ಟಿಕೊಂಡ ಅಖಂಡ ಕರ್ನಾಟಕದಲ್ಲಿ ಪ್ರಸ್ತುತ ರಾಜಕಾರಣ, ಜಾತಿ, ಧರ್ಮ, ಸ್ವಾರ್ಥ, ಸಂಪತ್ತಿನ ಕ್ರೋಢೀಕರಣಗಳು ವಿಜೃಂಭಿಸುತ್ತಿವೆ. ಇವುಗಳಿಂದ ಬೇಸತ್ತ ಜನರು ಪ್ರತ್ಯೇಕ ರಾಜ್ಯಗಳ ಬೇಡಿಕೆಗಳನ್ನಿಡುತ್ತಿದ್ದಾರೆ. ಇಂದಿನ ರಾಜಕೀಯ ನಾಯಕರು ಅಖಂಡ ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಬೇಕಿದೆ. ಇಲ್ಲವಾದಲ್ಲಿ ಈ ಅಖಂಡ ರಾಜ್ಯವು 1799ರ ಟಿಪ್ಪುಸುಲ್ತಾನರ ಕಥೆಯಾಗಬಹುದು ಎಂದು ಎಚ್ಚರಿಸಿದರು.

ಕರ್ನಾಟಕ ಏಕೀಕರಣವನ್ನು ವಿವರಿಸಿದ ವೈ.ಎಸ್.ವಿ. ದತ್ತ ಕರ್ನಾಟಕ ಏಕೀಕರಣವಾಗಿ ಇಷ್ಟು ವರ್ಷವಾದರೂ ಇಲ್ಲಿ ಒಂದು ರೀತಿಯ ಏಕರೂಪತೆ ಬಂದಿಲ್ಲ. ಹೋಬಳಿಗಳು, ಗ್ರಾಮಪಂಚಾಯತ್‍ಗಳ ಪರಿಧಿ ಗಾಗೂ ವಿಸ್ತಾರಗಳನ್ನು ಮತ್ತೆ ಪುನರ್ ವಿಮರ್ಶೆ ಮಾಡಬೇಕಿದೆ. ಈ ಅಖಂಡ ಕರ್ನಾಟಕಕ್ಕೆ ಸುವ್ಯವಸ್ಥಿವಾದ ಆಡಳಿತವಿದ್ದಾಗ ಮಾತ್ರ ಸರ್ಕಾರ ಅಭಿವೃದ್ಧಿಗೆ ನೀಡುವ ಹಣವು ಸಮರ್ಪಕವಾಗಿ ವಿತರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಖಂಡ ಕರ್ನಾಟಕಕ್ಕೆ 1500 ವರ್ಷದ ಅಸ್ಮಿತೆಯಿದ್ದು, ಇದು ರಾಜ್ಯದ ಭದ್ರ ಬುನಾದಿಯಾಗಿದೆ. ಜಾತಿ, ಧರ್ಮ, ಸ್ವಾರ್ಥ, ರಾಜಕಾರಣಗಳಂತಹ ಕುಂಠಿತ ಮನೋಭಾವನೆಗಳಿಗೆ ಬೆಲೆ ನೀಡದೇ ಅಖಂಡ ಕರ್ನಾಟಕದ ಉಳಿವಿಕೆ ಹಾಗೂ ಉತ್ತರ ಕರ್ನಾಟಕದ ಜನರ ಅಪನಂಬಿಕೆಗಳನ್ನು ಹೋಗಲಾಡಿಸುವಲ್ಲಿ ರಾಜಕಾರಣಗಳು ಕಾರ್ಯ ನಿರ್ವಹಿಸಬೇಕು ಎಂದು ರಾಜಕಾರಣಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷೆ ಮಲ್ಲಿಕಾ ಎಸ್.ಘಂಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉಪಸ್ಥಿತರಿದ್ದರು.

ಶ್ರೀರಕ್ಷಾ ರಾವ್,
ಆಳ್ವಾಸ್ ಕಾಲೇಜು ಮೂಡಬಿದ್ರೆ


Spread the love