ಪ.ಜಾತಿ ಪಂಗಡ ಕಾಯ್ದೆ ಅರಿವು ಇರಲಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

Spread the love

ಪ.ಜಾತಿ ಪಂಗಡ ಕಾಯ್ದೆ ಅರಿವು ಇರಲಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಉಡುಪಿ: ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ 1989 ಹಾಗೂ ಪಿ.ಟಿ.ಸಿಎಲ್ ಕಾಯ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಅವಶ್ಯಕ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಅವರು ಗುರುವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ 62 ನೇ ಪುಣ್ಯ ಸ್ಮರಣೆ ನಿಮಿತ್ತ ಪುಷ್ಪಾರ್ಚನೆ ಮತ್ತು ನಮನ ಕಾರ್ಯಕ್ರಮ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ 1989 ಹಾಗೂ ಪಿ.ಟಿ.ಸಿಎಲ್ ಕಾಯ್ದೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ ಕುರಿತು ಎಲ್ಲಾ ಇಲಾಖಾಧಿಕಾರಿಗಳು ಅಗತ್ಯ ಮಾಹಿತಿ ಹೊಂದಿರಬೇಕು, ದೈನಂದಿನ ಕರ್ತವ್ಯದಲ್ಲಿ ಈ ಕಾಯ್ದೆಯ ಉಲ್ಲಂಘನೆ ಕುರಿತು ಬರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ 1989 ಕುರಿತು ಮಾತನಾಡಿದ ವಕೀಲ ಸತೀಶ್ ಕಾಳಾವರ್ಕರ್, ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳೂ ಸಹ ಈ ಕಾಯ್ದೆಯ ಕುರಿತು ಅರಿವು ಹೊಂದಿರಬೇಕು, ಕಾಯ್ದೆ ಅರಿಯದೇ ದೌರ್ಜನ್ಯ ಪ್ರಕರಣಗಳಲ್ಲಿ ನಿರ್ಲಕ್ಷ ವಹಿಸಿದರೆ ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿದೆ, ಸರಿಯಾದ ಕಾಲಂಗಳಡಿ ಪ್ರಕರಣ ದಾಖಲಿಸಬೇಕು, 60 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸುವುದರೊಂದಿಗೆ ಕಾಯಿದೆಯಲ್ಲಿ ನಿಗಧಿಪಡಿಸಿದ ಎಲ್ಲಾ ಕರ್ತವ್ಯಗಳನ್ನು ನೆರವೇರಿಸಬೇಕು. ದೌರ್ಜನ್ಯ ಕಾಯ್ದೆಯಡಿ ವ್ಯಕ್ತಿ ಆಪಾದಿತನಾದರೆ ಆತನ ಚರ ಮತ್ತು ಸ್ಥಿರಾಸ್ತಿಯನ್ನು ಪ್ರಕರಣ ಮುಗಿಯುವವರೆಗೂ ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಅಪರಾಧಿ ಎಂದು ಘೋಷಿತನಾದರೆ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಕಾನೂನಿನಲ್ಲಿದೆ, ಪ್ರಕರಣ ನಡೆದ ಸ್ಥಳಗಳಿಗೆ ಜಿಲ್ಲಾಧಿಕಾರಿ, ಎಸಿ, ಎಸ್ಪಿ, ಡಿವೈಎಸ್ಪಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು, ಜಿಲ್ಲಾಧಿಕಾರಿಗಳು ಮತ್ತು ಇತರೆ ದಂಡಾಧಿಕಾರಿಗಳು ಸಂತ್ರಸ್ಥರಿಗೆ ಮತ್ತು ಅವರ ಕುಟುಂಬದವರಿಗೆ ಅಗತ್ಯ ಪರಿಹಾರ ಮತ್ತು ಸವಲತ್ತುಗಳನ್ನು ಒದಗಿಸಬೇಕು, ಪರಿಹಾರ ನೀಡಿದ ಕುರಿತು ವಿಶೇಷ ನ್ಯಾಯಾಲಯಕ್ಕೆ ವರದಿ ಕಳುಹಿಸಬೇಕು, ನೊಂದವರಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜೊತೆಗೆ, ಪ್ರಕರಣದ ವಿಚಾರಣೆಗೆ ಹಾಜರಾಗಲು ಅವರ ವಾಸಸ್ಥಳದಿಂದ ತನಿಖಾ ಸ್ಥಳ ಅಥವಾ ವಿಚಾರಣಾ ಸ್ಥಳಕ್ಕೆ ಹಾಜರಾಗಲು ಸೂಕ್ತ ಪ್ರಯಾಣಭತ್ಯೆ ವಿತರಿಸಬೇಕು ಎಂದು ಹೇಳಿದ ಅವರು, ಪ್ರತಿಯೊಬ್ಬ ಸರಕಾರಿ ಅಧಿಕಾರಿಗಳು ಮತ್ತು ಪಾತ್ರ ಮತ್ತು ಜವಾಬ್ದಾರಿಯನ್ನು ನಿರ್ವಹಿಸಿ ಸಂತ್ರಸ್ಥರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭುಜಬಲಿ , ವಕೀಲ ಮಹಾಬಲ ಹಾಗೂ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು


Spread the love