ಫಿಟ್ ನೆಸ್ ಜಾಗೃತಿಗಾಗಿ ಸೀರೆಯುಟ್ಟ ನಾರಿಯರಿಗಾಗಿ ಓಟ – ನಡಿಗೆ ಸ್ಪರ್ಧೆ ; 500 ಮಂದಿ ಭಾಗಿ

Spread the love

ಫಿಟ್ ನೆಸ್ ಜಾಗೃತಿಗಾಗಿ ಸೀರೆಯುಟ್ಟ ನಾರಿಯರಿಗಾಗಿ ಓಟ – ನಡಿಗೆ ಸ್ಪರ್ಧೆ ; 500 ಮಂದಿ ಭಾಗಿ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ದೇಶದಲ್ಲೆಲ್ಲಾ ಫಿಟ್ ನೆಸ್ ನದ್ದೇ ಹವಾ. ಎಲ್ಲರೂ ಫಿಟ್ ನೆಸ್ ಕಾನ್ಶಿಯಸ್ ಆಗಿ ಬಿಟ್ಟಿದ್ದಾರೆ. ಪ್ರಧಾನಿ ಮೋದಿ ಆದಿಯಾಗಿ ಸಚಿವರು, ಕ್ರೀಡಾಪಟುಗಳು, ಚಿತ್ರ ತಾರೆಯರು ಫಿಟ್ ನೆಸ್ ಚಾಲೆಂಜ್ ಹಾಕುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ಆದರೆ ಸಾಮಾನ್ಯವಾಗಿ ಸೀರೆಯುಟ್ಟು ಮನೆಗೆಲಸದಲ್ಲೇ ತಲ್ಲೀನರಾಗಿರುವ ಮಹಿಳೆಯರಲ್ಲಿ ಫಿಟ್ ನೆಸ್ ಬಗ್ಗೆ ಜಾಗೃತಿ ಮೂಡುವುದಾದರೂ ಯಾವಾಗ? ಈ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರಿನಲ್ಲಿ ಸೀರೆಯುಟ್ಟ ನಾರಿಯರಿಗಾಗಿ ಓಟ – ನಡಿಗೆ ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ಮಹಿಳಾ ರನ್ ತಂಡ ನಗರದಲ್ಲಿ ಮೊದಲ ಬಾರಿಗೆ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಸೀರೆಯ ನಾರಿಯರಿಗೆ ಜಾಗಿಂಗ್ , ವಾಕಿಂಗ್ ಸ್ಥೈರ್ಯ ತುಂಬಲು ಓಟ ಹಮ್ಮಿಕೊಳ್ಳಲಾಗಿತ್ತು.

ಸೀರೆಯುಟ್ಟ ನಾರಿಯರಿಗಾಗಿ ಓಟ – ನಡಿಗೆ ಸ್ಪರ್ಧೆಯನ್ನು ಮ್ಯಾಂಗಲೋರಿಯನ್ ಡಾಟ್ ಇದರ ಮ್ಹಾಲಕರು ಮತ್ತು ಸಂಪಾದಕಿಯಾಗಿರುವ ಸಮಾಜ ಸೇವಕಿ ವಾಯ್ಲೆಟ್ ಪಿರೇರಾ ಮತ್ತು ಕಾರ್ಪೋರೇಟರ್ ಜಯಂತಿ ಆಚಾರ್ ಅವರು ಮಹಾತ್ಮಾ ಗಾಂಧಿ ಪಾರ್ಕಿನ ಬಳಿ ಹಸಿರು ನಿಶಾನೆ ತೋರಿದರು.

ಸುಮಾರು 500 ಮಂದಿ ಸೀರೆಯುಟ್ಟ ಮಹಿಳೆಯರು ಓಟ-ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 72 ವರ್ಷದ ಮಹಿಳೆಯೊಬ್ಬರು ಭಾಗವಹಿಸಿದ್ದು ಓಟ – ನಡಿಗೆ ಕಾರ್ಯಕ್ರಮದ ವಿಶೇಷವಾಗಿತ್ತು.

ಓಟ ನಡಿಗೆಯನ್ನು ಎರಡು ವಿಭಾಗದಲ್ಲಿ ವಿಂಗಡಿಸಲಾಗಿತ್ತು. 18 ರಿಂದ 80 ವರ್ಷದೊಳಗಿನ ಎಲ್ಲರೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದು, ಪಾಲ್ಗೊಂಡ ಎಲ್ಲರಿಗೂ ಪದಕ ಮತ್ತು ಪ್ರಮಾಣಪತ್ರ  ನೀಡಲಾಗುತ್ತದೆ. ಮಹಿಳೆಯರಿಗೆ ದೈಹಿಕ ಚಟುವಟಿಕೆಗಳಾದ ವ್ಯಾಯಾಮ ,ಜಾಂಗಿಂಗ್, ಓಟ ಗಳಿಗೆ ಪ್ರೇರೇಪಿಸಲು ಈ ಸೀರೆ ಓಟ ಕೈಗೊಳ್ಳಲಾಗಿದ್ದು, ಇದರಿಂದಾಗಿ ಮಹಿಳೆಯರಲ್ಲಿ ದೈಹಿಕ ಚಟುವಟಿಕೆಗಳಿಗೆ ನಾವು ತೊಡುವ ಉಡುಪು ಅಡ್ಡವಾಗಲಾರದು ಎಂಬ ಭಾವನೆ ಅವರ ಮನಸ್ಸಿನಲ್ಲಿ ಬರಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಕಾರ್ಯಕ್ರಮದ ಸಂಯೋಜಕರಾದ ರಾಜೇಶ್.


Spread the love