ಫೆ. 22, 23 ಕಾರ್ಕಳದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಬೆಳ್ಳಿಹಬ್ಬ ಸಮಾರಂಭ

Spread the love

ಫೆ. 22, 23 ಕಾರ್ಕಳದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಬೆಳ್ಳಿಹಬ್ಬ ಸಮಾರಂಭ

ಉಡುಪಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 25ನೇ ವರ್ಷದ ಬೆಳ್ಳಿಹಬ್ಬ ಸಮಾರಂಭ ಫೆ.22 ಮತ್ತು 23ರಂದು ಕಾರ್ಕಳದ ಶ್ರೀವೆಂಕಟರಮಣ ದೇವಸ್ಥಾನ ಶಿಕ್ಷಣ ಸಮೂಹ ಸಂಸ್ಥೆಯ (ಎಸ್ವಿಟಿ ವಿದ್ಯಾಸಂಸ್ಥೆ) ಆವರಣದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಜಗದೀಶ್ ಪೈ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಿದ ಅವರು, ಎರಡು ದಿನಗಳ ಸಮಾರಂಭದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರದಾನ ನಡೆಯಲಿದೆ ಎಂದರು.

ಈ ಕಾರ್ಯಕ್ರಮಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಮೀನುಗಾರಿಕೆ, ಬಂದರು ಮತ್ತು ಧಾರ್ಮಿಕದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸಿ.ಟಿ.ರವಿ ಪಾಲ್ಗೊಳ್ಳಲಿದ್ದಾರೆ ಎಂದು ಜಗದೀಶ್ ಪೈ ತಿಳಿಸಿದರು.

ಫೆ.22ರ ಶನಿವಾರ ಬೆಳಗ್ಗೆ 8:30ಕ್ಕೆ ಅಕಾಡೆಮಿಯ ಬೆಳ್ಳಿಹಬ್ಬದ ಪ್ರಯುಕ್ತ ಕಾರ್ಕಳ ಗಾಂಧಿ ಮೈದಾನದಿಂದ ಎಸ್ವಿಟಿ ಶಾಲೆಯವರೆಗೆ ಶೋಭಾ ಯಾತ್ರೆ ನಡೆಯಲಿದೆ. 10ಗಂಟೆಗೆ ಸಚಿವ ಸಿ.ಟಿ.ರವಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರಿನ ಕೊಂಕಣಿ ಸಾಹಿತಿ ಗೋಕುಲದಾಸ ಪ್ರಭು ಅವರು ಸಮ್ಮೇಳನಾಧ್ಯಕ್ಷರಾಗಿರುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಮಂದಿ ಕೊಂಕಣಿ ಭಾಷಿಗರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಬೆಳ್ಳಿಹಬ್ಬ ಹಾಗೂ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಫೆ.23ರ ರವಿವಾರ ಸಂಜೆ 4:30ರಿಂದ 6:00ರವರೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ.ಕೆ. ಜಗದೀಶ್ ಪೈ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಆರ್.ಆರ್. ಜನ್ನು, ಸಂಧ್ಯಾ ಪೈ ಹಾಗೂ ಖ್ಯಾತ ಸಾಹಿತಿ ನಾ.ಡಿಸೋಜ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಗಳು ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿಯನ್ನು ಗೋಕುಲದಾಸ್ ಪ್ರಭು (ಸಾಹಿತ್ಯ), ಆರ್ಗೋಡು ಮೋಹನದಾಸ ಶೆಣೈ (ಕಲೆ) ಹಾಗೂ ವಿಷ್ಣು ಶಾಬು ರಾಣೆ (ಜಾನಪದ) ಇವರಿಗೂ, ಪುಸ್ತಕ ಪ್ರಶಸ್ತಿಗಳನ್ನು ವೆಂಕಟೇಶ್ ನಾಯಕ್ (ಕವನ), ಕ್ಲೆರೆನ್ಸ್ ಡೊನಾಲ್ಡ್ ಪಿಂಟೊ (ಸಣ್ಣಕಥೆ) ಹಾಗೂ ಡಾ.ಪಿಯುಸ್ ಪದಲಿಸ್ ಪಿಂಟೊ (ಅಧ್ಯಯನ) ಇವರಿಗೆ ಪ್ರದಾನ ಮಾಡಲಿದ್ದಾರೆ ಎಂದು ಡಾ.ಪೈ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಬೆಳ್ಳಿಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಶೆಣೈ, ವೆಂಕಟೇಶ್ ಹೆಗಡೆ ಹಾಗೂ ಅಕಾಡೆಮಿ ರಿಜಿಸ್ಟ್ರಾರ್ ಕುಮಾರ ಬಾಬು ಬೆಕ್ಕೇರಿ ಉಪಸ್ಥಿತರಿದ್ದರು.


Spread the love