ಫೆ. 29 ರಿಂದ ಉಡುಪಿಯಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ : ಪ್ರೀತಿ ಗೆಹಲೋತ್

Spread the love

ಫೆ. 29 ರಿಂದ ಉಡುಪಿಯಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ : ಪ್ರೀತಿ ಗೆಹಲೋತ್

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲೆ ತೋಟಗಾರಿಕೆ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನವು ಫೆ. 29 ರಿಂದ ಮಾರ್ಚ್ 2 ರ ವರೆಗೆ ಉಡುಪಿ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ (ಪುಷ್ಪ ಹರಾಜು) ಕೇಂದ್ರದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ತಿಳಿಸಿದ್ದಾರೆ.

ಅವರು ಗುರುವಾರ, ತೋಟಗಾರಿಕಾ ಇಲಾಖೆಯಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತೋಟಗಾರಿಕೆ ಫಲಪುಷ್ಪ ಪ್ರದರ್ಶನವನ್ನು ಫೆ. 29 ರಂದು ಸಂಜೆ 4.30 ಕ್ಕೆ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಸಮುದ್ರ ನೀರಿನಲ್ಲಿ ವಾಸಿಸುವ ಜಲಚರಗಳ ಆಕೃತಿಗಳನ್ನು ತಯಾರಿಸುವುದು ಮುಖ್ಯ ವಿಷಯವಾಗಿರುತ್ತದೆ. ಪ್ರಮುಖವಾಗಿ ಸೀ ಹಾರ್ಸ್, ಮೆಕೆರಲ್- ಇಂಡಿಯನ್ ಫಿಶ್, ಸಾರ್ ಡೈನ್- ಇಂಡಿಯನ್ ಫಿಶ್ (ಭೂತಾಯಿ), ಅಕ್ಟೋಪಸ್, ಶೆಲ್ ಫಿಶ್, ಸ್ಟಾರ್ ಫಿಶ್ ಗಳು ಗುಲಾಬಿ, ಸೇವಂತಿಗೆ, ಚೆಂಡು ಹೂವು, ಗ್ಲಾಡಿಯೋಲಸ್, ಕಾರ್ನೇಶನ್ ಪುಷ್ಪ ಗಳಿಂದ ಅಲಂಕೃತಗೊಳ್ಳಲಿವೆ.

24 ಅಡಿ ಉದ್ದದ ಹಡಗಿನ ಕಲಾಕೃತಿಯನ್ನು ಗುಲಾಬಿ, ಸೇವಂತಿಗೆ, ಚೆಂಡು ಹೂವು, ಗ್ಲಾಡಿಯೋಲಸ್, ಕಾರ್ನೇಶನ್ ಪುಷ್ಪ ಗಳಿಂದ ಅಲಂಕೃತಗೊಳಿಸಲಾಗುತ್ತದೆ. ಒಟ್ಟು 30000 ಹೂವುಗಳನ್ನು ಮಾದರಿ ರಚನೆಗಳಿಗೆ ಬಳಸಲಾಗುತ್ತಿದೆ.

ತರಕಾರಿಯಲ್ಲಿ ವಿವಿಧ ದಾರ್ಶನಿಕರ ಪ್ರಾಣಿಗಳ ಮಾದರಿಯನ್ನು ಕೆತ್ತನೆ ಮಾಡಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಕುಂಡಗಳಲ್ಲಿ ಹಾಗೂ ಪಾಲಿಬ್ಯಾಗ್‍ಗಳಲ್ಲಿ ಅಲಂಕಾರಿಕ ಪುಷ್ಪ ಜಾತಿಯ ಹೂವುಗಳಾದ ಪೆಟೋನಿಯ, ಸ್ಯಾಲ್ವಿಯಾ, ಸೆಲೋಶಿಯಾ, ಕಾಕ್ಸ್ ಕೂಂಬ್, ಗಾಝೀನಿಯಾ, ಡಯಾಂತಸ್, ಥೊರೇನಿಯಾ, ಗುಲಾಬಿ, ದಾಸವಾಳ, ಸೇವಂತಿಗೆ, ಚೆಂಡು ಹೂವು, ಕಳಂಚಿಯಾ ಹೀಗೆ ಒಟ್ಟು 12 ವಿವಿಧ ಜಾತಿಯ ಅಲಂಕಾರಿಕ ಪುಷ್ಪಗಳ 6000 ಗಿಡಗಳನ್ನು ವಿವಿಧ ಮಾದರಿಯಲ್ಲಿ ಜೋಡಿಸಲಾಗುತ್ತದೆ.

ಏಷ್ಯಾಟಿಕ್ ಲಿಲ್ಲಿ ಮತ್ತು ಆಲ್‍ಸ್ಟ್ರೋಮೇರಿಯಾ ಲಿಲ್ಲಿ ಅಲಂಕಾರಿಕ ಹೂವುಗಳ ಇಕೆಬನ ಹೆಚ್ಚಿನ ಆಕರ್ಷಣೆಯನ್ನು ನೀಡಲಿದೆ. ಒಟ್ಟು 8 ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಮಳಿಗೆಗಳಿದ್ದು ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಸಿಗಲಿದೆ.

ಇಲಾಖೆಯ ವತಿಯಿಂದ ಹೈಡ್ರೋಪೋನಿಕ್ಸ್ ಹಾಗೂ ವರ್ಟಿಕಲ್ ಗಾರ್ಡನ್ ಮಾದರಿಗಳನ್ನು ತಯಾರಿಸಲಾಗಿದ್ದು, ಲಭ್ಯವಿರುವ ಜಾಗದ ವ್ಯವಸ್ಥಿತ ಬಳಕೆಗೆ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ನಡೆಸಲು ಮಾಹಿತಿ ನೀಡಲಾಗುತ್ತದೆ.

ರೈತ ಸೇವಾ ಕೇಂದ್ರದ ಹಿಂಭಾಗದಲ್ಲಿ ವಸ್ತುಗಳ ಮಾರಾಟ ಹಾಗೂ ಸಾವಯವ ಸಿರಿಧಾನ್ಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಖಾಸಗಿ ನರ್ಸರಿಗಳಲ್ಲಿ ಕಸಿ/ಸಸಿಗಳ ಮಾರಾಟ, ಜೇನು ಕೃಷಿ ಮಾಹಿತಿ ಮತ್ತು ಜೇನು ತುಪ್ಪ ಮಾರಾಟ, ತೋಟಗಾರಿಕೆ ಹಾಗೂ ಕೃಷಿಯಲ್ಲಿ ರೈತರಿಗೆ ಉಪಯೋಗವಾಗುವ ಯಂತ್ರೋಪಕರಣಗಳ ಮಾರಾಟಕ್ಕಾಗಿ 32 ಮಳಿಗೆಗಳನ್ನು ನೀಡಲಾಗುತ್ತಿದ್ದು, ಬಂದಂತಹ ಆಸಕ್ತ್ತರಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ಮಾಹಿತಿ ಹಾಗೂ ಖರೀದಿಗೆ ಅವಕಾಶವಿರುತ್ತದೆ.

ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ಸಸ್ಯಾಗಾರಗಳಲ್ಲಿ ಬೆಳೆಸಿರುವ ವಿವಿಧ ಕಸಿ/ಸಸಿಗಳ ಮಾರಾಟದ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ರೈತ ಸೇವಾ ಕೇಂದ್ರದ ಆವರಣದಲ್ಲಿ ಇರುವ ಮಾದರಿ ಮಲ್ಲಿಗೆ ತೋಟ, ತರಕಾರಿ ತೋಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವಂತೆ ಸಿಇಓ ತಿಳಿಸಿದರು.
ರಂಗೋಲಿ ಸ್ಪರ್ಧೆ : ಫಲಪುಷ್ಪ ಪ್ರದರ್ಶನದ ಅಂಗವಾಗಿ ಸಾರ್ವಜನಿಕರಿಗೆ , ಪುಷ್ಪ ರಂಗೋಲಿ ರಚನೆಯ ಸ್ಪರ್ದೆಯನ್ನು ಮಾರ್ಚ್ 1 ರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಿಇಓ ತಿಳಿಸಿದರು.

ವಿಚಾರ ಸಂಕಿರಣ: ಮಾರ್ಚ್ 2 ರಂದು ತೋಟಗಾರಿಕೆ ಇಲಾಖೆಯಿಂದ ಬಹುವಾಷಿಕ ತೋಟಗಾರಿಕೆ ಬೆಳೆಗಳಲ್ಲಿ ಲಾಭದಾಯಕ ಮಿಶ್ರ ಬೇಸಾಯ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರ್ಣವನ್ನು ಆಯೋಜಿಸಿದ್ದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಪ್ರೀತಿ ಗೆಹಲೋತ್ ತಿಳಿಸಿದರು.

ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿದರು, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧೀಶ್ ವಂದಿಸಿದರು.


Spread the love