ಫೋನ್ ಕದ್ದಾಲಿಕೆ ಪ್ರಕರಣವನ್ನು” ಸಿಬಿಐ ಅಲ್ಲ ಅಂತರ್ ರಾಷ್ಟ್ರೀಯ ಏಜನ್ಸಿಯಿಂದಲೇ ಮಾಡಲಿ” ; ಕುಮಾರಸ್ವಾಮಿ

Spread the love

ಫೋನ್ ಕದ್ದಾಲಿಕೆ ಪ್ರಕರಣವನ್ನು” ಸಿಬಿಐ ಅಲ್ಲ ಅಂತರ್ ರಾಷ್ಟ್ರೀಯ ಏಜನ್ಸಿಯಿಂದಲೇ ಮಾಡಲಿ” ; ಕುಮಾರಸ್ವಾಮಿ

ಉಡುಪಿ : ಫೋನ್ ಕದ್ದಾಲಿಕೆ ಪ್ರಕರಣವನ್ನು” ಸಿಬಿಐ ಅಲ್ಲ, ಟ್ರಂಪ್ ಸಹಾಯ ಪಡೆದು ಅಂತರ್ ರಾಷ್ಟ್ರೀಯ ಏಜನ್ಸಿಯಲ್ಲೇ ತನಿಖೆ ಮಾಡಲಿ” ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಭಾನುವಾರ ಉಡುಪಿ ಸರ್ಕೀಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನನ್ನ ಇಮೇಜ್ ನಾಶ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಮನವಿ ಮೇರೆಗೆ ಯಡಿಯೂರಪ್ಪ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯರ ಮನವಿಗೆ ಇಷ್ಟು ಬೆಲೆ ಕೊಟ್ಟಿದ್ದಕ್ಕೆ ಯಡಿಯೂರಪ್ಪರಿಗೆ ಧನ್ಯವಾದಗಳು. ಕೇವಲ ನನ್ನ ಅವಧಿ ಮಾತ್ರವಲ್ಲ, ಯಡಿಯೂರಪ್ಪ, ಸಿದ್ದರಾಮಯ್ಯ ಕಾಲದಲ್ಲಾದ ಕದ್ದಾಲಿಕೆ ಪ್ರಕರಣವನ್ನು ನೀಡಲಿ. ಸಿಬಿಐ ತನಿಖೆಯನ್ನು ಎದುರಿಸಲು ನಾನು ಸರ್ವ ಸನ್ನದ್ಧನಾಗಿದ್ದೇನೆ ಎಂದು ಹೇಳಿದರು.

ಸಿಬಿಐ ಅಲ್ಲ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ತನಿಖೆ ಬೇಕಾದರೂ ಮಾಡಲಿ. ಜೆಡಿಎಸ್ ಪಕ್ಷ ಎಲ್ಲ ರೀತಿಯ ಸಹಕಾರ ನೀಡಲಿದೆ. ಫೋನ್ ಕದ್ದಾಲಿಕೆ ವಿಚಾರದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಗಳು ನನ್ನನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದೆ. ನನ್ನ ಮತ್ತು ಜನತೆಯ ನಡುವೆ ಅವಿಶ್ವಾಸ ಮೂಡಿಸಲು ಯತ್ನಿಸುತ್ತಿದೆ. ನಾನು ಯಾವುದೇ ಕಾರಣಕ್ಕೂ ಎಲೆಕ್ಟ್ರಾನಿಕ್ ಮೀಡಿಯಾಗಳ ಒತ್ತಡಕ್ಕೆ ಬಗ್ಗುವುದಿಲ್ಲ. ಮಾಧ್ಯಮಗಳು ಏನು ಬೇಕಾದರೂ ತೋರಿಸಲಿ. ಮಾಧ್ಯಮಗಳು ಫೋನ್ ಕದ್ದಾಲಿಕೆಯ ಸ್ಟೋರಿ ಮಾಡಿ ಬಿಲ್ಡಪ್ ತಗಳೋ ಪ್ರಯತ್ನದಲ್ಲಿದೆ. ಇದರಲ್ಲಿ ಅವುಗಳು ಯಶಸ್ವಿಯಾಗುವುದಿಲ್ಲ ಎಂದರು.

ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದವನು ಅಲ್ಲದೆ ಕಳೆದ 14 ತಿಂಗಳ ಆಡಳಿತದಲ್ಲಿ ನಾನು ತಪ್ಪು ಮಾಡಿಲ್ಲ. ನಾನೇನು ಬಿಜೆಪಿ ನಾಯಕರಂತೆ ನಾನೇನೂ ಚೆಕ್ ಮುಖಾಂತರ ಹಣ ಪಡೆದಿಲ್ಲ, ರಾಜ್ಯ ಲೂಟಿ ಮಾಡಿಲ್ಲ ಆದ್ದರಿಂದ ನಾನು ಭಯಪಡಬೇಕಾದ ಅಗತ್ಯನೂ ಇಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಲಹೆ ಪಡೆದು ಸಿಬಿಐ ಗೆ ಕೊಟ್ಟಿರುವುದಾಗಿ ಯಡಿಯೂರಪ್ಪ ಹೇಳೀದ್ದಾರೆ ಅದಕ್ಕಾಗಿ ಅವರಿಗೆ ಅಭಿನಂದನೆಗಳು ಆಪರೇಷನ್ ಕಮಲದ ಹೆಸರಲ್ಲಿ ಆದ ಸೂಟ್ ಕೇಸ್ ವ್ಯಾಪಾರದ ತನಿಖೆನೂ ಆಗ್ಲಿ ಎಂದು ಕೂಡಾ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ ಅದನ್ನೂ ಕೂಡ ಯಡ್ಯೂರಪ್ಪ ಮಾಡಿಬಿಡಲಿ ಅಲ್ಲದೆ ಹಿಂದಿನ ಹದಿನೈದು ವರ್ಷಗಳ ಎಲ್ಲಾ ಸರ್ಕಾರದ ಅವಧಿಯಲ್ಲಿ ಏನಾಗಿದೆ ತನಿಖೆ ಆಗಲಿ ಎಂದರು.

ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ ಈಗ ಯಲಹಂಕ ತಹಸೀಲ್ದಾರ್ ಪೋಸ್ಟ್ ಗೆ ಎಷ್ಡು ವ್ಯವಹಾರ ಆಯ್ತು ಈ ಬಗ್ಗೆ ಯಡ್ಯೂರಪ್ಪ ಪಟಲಾಂ ಏನು ಹೇಳುತ್ತೆ. ರಾಜ್ಯದಲ್ಲಿ ವರ್ಗಾವಣೆ ದಂಧೆಗೆ ಯಡ್ಯೂರಪ್ಪ ಸುಪುತ್ರನನ್ನೇ ಬಿಟ್ಡಿದ್ದಾರೆ ಮುಂದಿನ ದಿನಗಳಲ್ಲಿ ಹಲವಾರು ವಿಚಾರ ಬರುತ್ತೆ ಎಂದರು.

ರಾಜ್ಯದಲ್ಲಿ ಕಳೆದ 25 ದಿನದಿಂದ ಸಚಿವ ಸಂಪುಟವೇ ಇಲ್ಲ ಆದರೆ ಕೊನೆಗೂ ಬಿಜೆಪಿ ಹೈಕಮಾಂಡ್ ವಿಸ್ತರಣೆಗೆ ಅವಕಾಶ ಕೊಟ್ಟಿದೆ. ಮಳೆ ಅನಾಹುತಕ್ಕೆ ರಾಜ್ಯದಲ್ಲಿ ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಸಂತ್ರಸ್ಥರಿಗೆ ಯಾವ ರೀತಿಯ ನೆರವು ನೀಡ್ತೀರಿ ಅಂತ ಮೊದಲು ವಿಶ್ವಾಸ ಮೂಡಿಸಿ. ಕೇಂದ್ರ ನಾಯಕರ ಪ್ರವಾಸ ಮಾಡಿ ಹೋದರು ಆದರೆ ರಾಜ್ಯಕ್ಕೆ ಇಲ್ಲಿವರೆಗೆ ಏನೂ ನೆರವು ಕೊಟ್ಟಿಲ್ಲ ಇನ್ನಾದರೂ ಅದನ್ನು ಕೊಡಿಸುವ ಕೆಲಸ ಬಿಜೆಪಿ ನಾಯಕರು ಮಾಡಲಿ ಎಂದು ಆಗ್ರಹಿಸಿದರು.


Spread the love