ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲು

Spread the love

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರು ಮಲ್ಲಿ ಸಮೀಪ ನೇತ್ರಾವತಿ ನದಿಯಲ್ಲಿ ಈಜಾಡಲು ಹೋದ ಒಂದೇ ಕುಟುಂಬದ ಬಾಲಕರಿಬ್ಬರು ಬುಧವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬ ಗಂಭೀರ ಸ್ಥಿತಿಯಲ್ಲಿದ್ದಾನೆ. ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ನಿವಾಸಿ ಇಸಾಕ್ ಎಂಬವರ ಮಕ್ಕಳಾದ ಶಾಹಿಲ್(15), ಶೋಯಲ್(12) ಮೃತಪಟ್ಟ ಬಾಲಕರು. ಸಂಜೆ 5.30ರ ಸುಮಾರಿಗೆ 8 ಮಂದಿ ಸಮಾನ ಮನಸ್ಕ ಬಾಲಕರು ಸೇರಿ ನೇತ್ರಾವತಿ ನದಿಗೆ ಈಜಾಡಲು ಹೋಗಿದ್ದರು. ಸ್ನೇಹಿತರೊಂದಿಗೆ ನೀರಿನಲ್ಲಿ ಈಜಾಡುತ್ತಿದ್ದಂತೆಯೇ, ಶಾಹಿಲ್, ಶೋಯಲ್ ನೀರಿನಾಳಕ್ಕೆ ತೆರಳಿದ್ದರು. ಸುಳಿವಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದು, ಗುಂಪಿನಲ್ಲಿದ್ದ ಮತ್ತೊಬ್ಬ ಬಾಲಕ ರಕ್ಷಣೆಗೆ ಧಾವಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನದಿ ವಠಾರದಲ್ಲಿದ್ದ ಸ್ಥಳೀಯ ನಿವಾಸಿಗಳು ಮೂವರು ಬಾಲಕರನ್ನು ಮೇಲೆತ್ತಿದ್ದಾರೆ. ಅಸ್ವಸ್ಥಗೊಂಡಿದ್ದ ಬಾಲಕರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ವಿಪರೀತ ನೀರು ಕುಡಿದಿದ್ದರಿಂದ ಉಸಿರಾಟಕ್ಕೆ ತೊಂದರೆಯಾಗಿ ಇಬ್ಬರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮತ್ತೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ, ಸಬ್ ಇನ್ಸ್‌ಪೆಕ್ಟರ್ ರಕ್ಷಿತ್ ಧಾವಿಸಿದ್ದಾರೆ. ಬಾಲಕರ ತಂದೆ ಇಸಾಕ್ ಗಲ್ ಉದ್ಯೋಗಿಯಾಗಿದ್ದು, ಮಕ್ಕಳ ಅಂತ್ಯಕ್ರಿಯೆಗಾಗಿ ತವರೂರಿಗೆ ಮರಳಲಿದ್ದಾರೆ. ಬಾಲಕರಿಬ್ಬರ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗುರುವಾರ ಮಾರಿಪಳ್ಳ ಜುಮಾ ಮಸೀದಿಯ ಬಳಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಚಿಕ್ಕಪ್ಪ ತಿಳಿಸಿದ್ದಾರೆ.


Spread the love