ಬಜ್ಪೆ: ನೈತಿಕ ಪೊಲೀಸ್‌ಗಿರಿ ಆರೋಪ – ಇಬ್ಬರ ಬಂಧನ 

Spread the love

ಬಜ್ಪೆ: ನೈತಿಕ ಪೊಲೀಸ್‌ಗಿರಿ ಆರೋಪ – ಇಬ್ಬರ ಬಂಧನ 

ಮಂಗಳೂರು: ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 27ರಂದು ಸಂಭವಿಸಿದ ಘಟನೆಯೊಂದಕ್ಕೆ ಸಂಬಂಧಿಸಿ, ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಯೆಡಪದಾವು ನಿವಾಸಿಗಳಾದ ಸುಮಿತ್ ಭಂಡಾರಿ (21) ಹಾಗೂ ರಜತ್ ನಾಯ್ಕ್ (30) ಎಂದು ಗುರುತಿಸಲಾಗಿದೆ. ಗೋಮಾಂಸ ಸಾಗಿಸುತ್ತಿದ್ದ ಅಬ್ದುಲ್ ಸತ್ತಾರ್ ಹಾಗೂ ಅವರ 11 ವರ್ಷದ ಪುತ್ರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಇವರ ಮೇಲೆ ಇದೆ.

ಪೊಲೀಸ್ ವರದಿ ಪ್ರಕಾರ, ಅಬ್ದುಲ್ ಸತ್ತಾರ್ ತಮ್ಮ ಪುತ್ರಿಯೊಂದಿಗೆ ಮಲಾಲಿ–ನರ್ಲಪದವಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಅಗತ್ಯ ಕಾನೂನು ದಾಖಲೆಗಳಿಲ್ಲದೆ ಸುಮಾರು 19 ಕೆ.ಜಿ ಗೋಮಾಂಸವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಟಾಟಾ ಸುಮೋ ವಾಹನದಲ್ಲಿ ಹಿಂಬಾಲಿಸಿದ ಆರೋಪಿಗಳು ದ್ವಿಚಕ್ರ ವಾಹನವನ್ನು ತಡೆದು ಉರುಳಿಸಿದ ಪರಿಣಾಮ, ಬಾಲಕಿಗೆ ಬೈಕ್‌ನ ಸೈಲೆನ್ಸರ್ ತಾಗಿದ್ದು ಕಾಲಿಗೆ ಗಾಯವಾಗಿದೆ. ಘಟನೆ ಬಳಿಕ ಅಬ್ದುಲ್ ಸತ್ತಾರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸಂಬಂಧ ಬಜ್ಪೆ ಪೊಲೀಸರು ಸುಮಿತ್ ಭಂಡಾರಿ ಹಾಗೂ ರಜತ್ ನಾಯ್ಕ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆರಂಭದಲ್ಲಿ ರಜತ್ ನಾಯ್ಕ್ ತಾನು ವೈದ್ಯಕೀಯ ಪ್ರತಿನಿಧಿಯಾಗಿ ಕ್ಲಿನಿಕ್‌ಗೆ ಔಷಧಿ ವಿತರಿಸಲು ಹೋಗುತ್ತಿದ್ದೆನೆ ಎಂದು ಹೇಳಿದ್ದಾನೆ. ಆದರೆ, ಕ್ಲಿನಿಕ್‌ನಲ್ಲಿ ನಡೆಸಿದ ಪರಿಶೀಲನೆಯಲ್ಲಿ ಈ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ. ಅಲ್ಲದೆ, ದೇವಾಲಯ ಹುಡುಕುತ್ತಿದ್ದೆವು ಎಂದು ಆರೋಪಿಗಳು ಹೇಳಿಕೊಂಡರೂ, ಪ್ರತ್ಯೇಕ ವಿಚಾರಣೆಯಲ್ಲಿ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಲು ಸಾಧ್ಯವಾಗಿಲ್ಲ.

ಆಸ್ಪತ್ರೆಯಲ್ಲಿ ದಾಖಲಿಸಿದ ಬಾಲಕಿಯ ಹೇಳಿಕೆ ಪ್ರಕಾರ, ಆರೋಪಿಗಳು ದ್ವಿಚಕ್ರ ವಾಹನವನ್ನು ತಡೆದು ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ.

ನೈತಿಕ ಪೊಲೀಸ್‌ಗಿರಿ ಪ್ರಕರಣದ ಜೊತೆಗೆ, ಅಕ್ರಮವಾಗಿ ಗೋಮಾಂಸ ಸಾಗಿಸಿದ ಆರೋಪದಡಿ ಅಬ್ದುಲ್ ಸತ್ತಾರ್ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತ (ಸುವೋ ಮೊಟು) ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯಲ್ಲಿ ಅಬ್ದುಲ್ ಸತ್ತಾರ್ ಈ ಪ್ರದೇಶದಲ್ಲಿ ನಿರಂತರವಾಗಿ ಗೋಮಾಂಸ ವಿತರಿಸುತ್ತಿದ್ದಾನೆ ಎಂಬ ಆರೋಪವೂ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ 19 ಕೆ.ಜಿ ಗೋಮಾಂಸವನ್ನು 35 ಪ್ಯಾಕೆಟ್‌ಗಳಾಗಿ ವಿಭಜಿಸಲಾಗಿತ್ತು.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಒಂದೇ ಒಂದು ವಾಹನ ಮಾತ್ರ ದ್ವಿಚಕ್ರ ವಾಹನವನ್ನು ಹಿಂಬಾಲಿಸಿದ್ದು ಹಾಗೂ ಘಟನೆಯಲ್ಲಿ ಇಬ್ಬರು ಮಾತ್ರ ಭಾಗಿಯಾಗಿರುವುದು ದೃಢಪಟ್ಟಿದೆ. ಆದರೆ, ಹಲವು ವಾಹನಗಳು ಹಾಗೂ ಐದು ಮಂದಿ ಭಾಗಿಯಾಗಿದ್ದಾರೆ ಎಂದು ಸುಳ್ಳು ಮಾಹಿತಿ ಹರಡಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳ ಹೆಸರು ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಮಾಹಿತಿ ಹರಡುವುದು ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್ 353ರ ಉಲ್ಲಂಘನೆಯಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಆರೋಪಿಗಳು ದಾರಿ ಕೇಳಲು ಮಾತ್ರ ನಿಲ್ಲಿಸಿದ್ದೇವೆ ಎಂದು ಹೇಳಿಕೊಂಡಿದ್ದರೂ, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸುಮಾರು ಐದು ಕಿಲೋಮೀಟರ್‌ವರೆಗೆ ದ್ವಿಚಕ್ರ ವಾಹನವನ್ನು ಹಿಂಬಾಲಿಸಿ ತಡೆದಿರುವುದು ದಾಖಲಾಗಿದೆ.

ಘಟನೆ ಸಂಬಂಧ ತನಿಖೆ ಮುಂದುವರಿದಿದ್ದು, ಯಾವುದೇ ಪಕ್ಷಗಳಿಂದಲೂ ಸತ್ಯವನ್ನು ವಿಕೃತಗೊಳಿಸುವ ಪ್ರಯತ್ನ ಕಂಡುಬಂದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬಜ್ಪೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments