ಬರಹಗಾರ ಸ್ಥಿತ ಪ್ರಜ್ಞನಾಗಿರಬೇಕು : ಡಾ. ಅಜೆಕ್ಕಳ

Spread the love

ಬರಹಗಾರ ಸ್ಥಿತ ಪ್ರಜ್ಞನಾಗಿರಬೇಕು : ಡಾ. ಅಜೆಕ್ಕಳ

ವಿದ್ಯಾಗಿರಿ : ಟೀಕೆ, ವಿಮರ್ಶೆಯನ್ನು ಸ್ವೀಕರಿಸುವವನು ಮಾತ್ರ ನಿಜವಾದ ಬರಹಗಾರನಾಗುತ್ತಾನೆ. ಓದು ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಂಡಲ್ಲಿ ಬರವಣಿಗೆ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ ಎಂದು ಬೆಂಗಳೂರಿನ ಕುವೆಂಪು ಭಾಷಾಭಾರತಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಹೇಳಿದರು.

ಆಳ್ವಾಸ್ ಕಾಲೇಜಿನ ಪಿ.ಜಿ ಸೆಮಿನಾರ್ ಹಾಲ್‍ನಲ್ಲಿ ವೃತ್ತಿಪರ ವಾಣಿಜ್ಯ ವಿಭಾಗ ಆಯೋಜಿಸಿದ ‘’ಬರಹಗಾರರ ಬಳಗ- ಬರವಣಿಗೆಗಾಗಿ ಮೆರವಣಿಗೆ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬರವಣಿಗೆಗೆ ವಸ್ತು ಮತ್ತು ವಿಷಯ ಬಹಳ ಮುಖ್ಯ. ಬರಹಗಾರರು ವಿಷಯದ ಬಗ್ಗೆ ಸ್ಥಿತ ಪ್ರಜ್ಞರಾಗಿರಬೇಕು. ಕಥೆ, ಕಾದಂಬರಿಗಳ ವಸ್ತುವಿಗೆ ಸೃಜನಶೀಲತೆಯ ಜತೆಗೆ ಬರಹದ ತಾಂತ್ರಿಕತೆಯೂ ಬೇಕು. ಓದಿಲ್ಲದೆ ಯಾರೂ ಬರಹಗಾರ ಎಂದೆನ್ನಿಸಿಕೊಳ್ಳುವುದಿಲ್ಲ. ಬರಹಗಾರನಾದವನು ವಾಸ್ತವದ ಜತೆಗೆ ಕಲ್ಪನಾತ್ಮಕವಾಗಿ ವಿಷಯಗಳನ್ನು ಕ್ರೊಡೀಕರಿಸುವ ಚಾಕಚಕ್ಯತೆ ಹೊಂದಿರಬೇಕು. ದಿನನಿತ್ಯ ಬರವಣಿಗೆಯಲ್ಲಿ ಬೆಳೆದಂತೆ ಭಾಷೆಯನ್ನು ಗಟ್ಟಿಗೊಳಿಸಿಕೊಳ್ಳುವ ಗುಣ ಬರಹಗಾರನಿಗಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಮಾತನಾಡಿ, ಕವಿ, ಕಥೆಗಾರ, ಕಾದಂಬರಿಕಾರನಾದವನು ಅಂತರ್ಮುಖಿಯಾಗುವುದರೊಂದಿಗೆ, ಬಹಿರ್ಮುಖಿಯೂ ಆಗಿರಬೇಕು. ನಮ್ಮ ಸುತ್ತಮುತ್ತಲಿನಲ್ಲಾಗುವ ಬದಲಾವಣೆಯನ್ನು ಗಮನಿಸಿದಾಗ ಮಾತ್ರ ಬರಹಗಾರ ನಿಜವಾದ ಬರಹಗಾರ ಎಂದೆನ್ನಿಸಿಕೊಳ್ಳುತ್ತಾನೆ. ಬರೆಯುವ ಮುನ್ನಾ ಒಬ್ಬ ಒಳ್ಳೆಯ ಓದುಗನಾಗಬೇಕು, ಕೇಳುಗನಾಗಬೇಕು ಆಗ ಮಾತ್ರ ಬರವಣಿಗೆಯಲ್ಲಿ ಸಾರ್ಥಕತೆ ಕಾಣುವುದಕ್ಕೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬರಹಗಾರರ ಬಳಗ ಸಂಚಾಲಕಿ ನವ್ಯ ಶೆಡ್ತಿ, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ.ಜಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಲಭಿತೇಶ್ ಸ್ವಾಗತಿಸಿ, ಸುಬ್ರಹ್ಮಣ್ಯ ವಂದಿಸಿ, ಹೃತಿಕಾ ಕಾರ್ಯಕ್ರಮ ನಿರ್ವಹಿಸಿದರು.


Spread the love