ಬಹು ನಿರೀಕ್ಷೆಯ ಆಗಸ್ಟ್ 25ರಂದು “ಮಾರ್ಚ್ – 22” ಸಿನೆಮಾ ಬಿಡುಗಡೆ

Spread the love

ಬಹು ನಿರೀಕ್ಷೆಯ   ಆಗಸ್ಟ್ 25ರಂದು  “ಮಾರ್ಚ್ – 22”  ಸಿನೆಮಾ ಬಿಡುಗಡೆ

ಮಂಗಳೂರು : ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹು ನಿರೀಕ್ಷಿತ ‘ಮಾರ್ಚ್ 22’ ಕನ್ನಡ ಸಿನೆಮಾ ಅಗಸ್ಟ್ 25ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಕುಟುಂಬ ಸಮೇತರಾಗಿ ನೋಡ ಬಹುದಾದ ಸದಭಿರುಚಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರಕ್ಕೆ ಈಗಾಗಲೇ ಸೆನ್ಸರ್ ಮಂಡಳಿಯು “ಯು” ಪ್ರಮಾಣ ಪತ್ರ ನೀಡಿದೆ.

‘ಮಾರ್ಚ್ 22’ ಚಿತ್ರ ಸಮಾಜಕ್ಕೆ ಹೊಸ ಮತ್ತು ಅರ್ಥಪೂರ್ಣ ಸಂದೇಶ ನೀಡಲು ಹೊರಟಿದ್ದು, ಸಾಮಾಜಿಕ ಕಳಕಳಿಯುಳ್ಳ, ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬಲ್ಲ, ಸದಭಿರುಚಿಯ ಸಿನೆಮಾವಾಗಿದೆ. ಉದ್ಯಮಿ ಹರೀಶ್ ಶೇರಿಗಾರ್ ಅವರ ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ನಿರ್ಮಿಸಲಾಗಿರುವ ‘ಮಾರ್ಚ್ 22’ ಸಿನೆಮಾ ಬಗ್ಗೆ ಕನ್ನಡ ಸಿನೆಮಾ ಪ್ರಿಯರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೀವಜಲದ ಮಹತ್ವ ಮತ್ತು ಜಾಗೃತಿಯ ಸಂದೇಶ ಸಾರುವ “ಮಾರ್ಚ್-22” ಸಿನೆಮಾದ ಬಗ್ಗೆ ಕನ್ನಡ ಸಿನಿಮಾಭಿಮಾನಿಗಳು ಬಹುನಿರೀಕ್ಷೆಯನ್ನಿಟ್ಟು ಕೊಂಡಿದ್ದು, ಸಿನೆಮಾ ಬಿಡುಗಡೆಗೂ ಮುನ್ನವೇ ಭಾರಿ ಸುದ್ದಿ ಮಾಡಿದೆ.

ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇರದಷ್ಟು ಧರ್ಮಗಳು, ಜಾತಿಗಳು ಭಾರತದಲ್ಲಿವೆ. ವೈವಿಧ್ಯಮಯ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ, ಇಲ್ಲಿ ಜನರು ಬಹಳ ಅನ್ಯೋನ್ಯತೆಯಿಂದ ಮತ್ತು ಸ್ನೇಹದಿಂದ ಬದುಕುತ್ತಿದ್ದಾರೆ. ಭಾರತೀಯೇತರ ಪ್ರಜೆ ಊಹಿಸಲು ಆಗದ ರೀತಿಯ ಸೌಹಾರ್ದತೆಯ ಬದುಕು ಇಲ್ಲಿ ಕಾಣಬಹುದು. ಆದಾಗ್ಯೂ ಹಿಂದೂಗಳು ಮತ್ತು ಮುಸ್ಲೀಮರ ನಡುವಿನ ಸಂಬಂಧಕ್ಕೆ ಕೆಲವೊಮ್ಮೆ ಕೆಲವು ಪ್ರಚೋದನೆಗಳಿಂದಾಗಿ ಧಕ್ಕೆ ಬಂದಿರುವುದು ಕೂಡ ಸತ್ಯ. ದೇಶದ ಇತಿಹಾಸದಲ್ಲಿ ಇದು ದೊಡ್ಡ ಗಾಯದಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರು ಈ ಕಹಿ ನೆನಪು ಹಾಗೆಯೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ‘ಮಾರ್ಚ್ 22’ ಸಿನೆಮಾ ತಂಡ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ವಾಸ್ತವಿಕ ಪರಿಕಲ್ಪನೆಯೊಂದಿಗೆ ಅದ್ಭುತ ಕಥೆಯೊಂದನ್ನು ಜನ ಎಂದೆಂದಿಗೂ ನೆನಪಿಡುವಂತೆ ಮಾಡುವ ಪ್ರಯತ್ನವನ್ನು ಮಾಡಿದೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈ ಹಾಡು ಈಗಾಗಲೇ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಜೊತೆಗೆ ನಿರ್ಮಾಪಕ ಹರೀಶ್ ಶೇರಿಗಾರ್ ಹಾಗೂ ಅಕ್ಷತಾ ರಾವ್ ಹಾಡಿರುವ “ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತೆ” ಸುಮಧುರ ಹಾಡು ಬಹಳಷ್ಟು ಸದ್ದು ಮಾಡುವ ಮೂಲಕ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ. ಮಾತ್ರವಲ್ಲದೇ ಸಿನಿಮಾದ ಇತರ ಇಂಪಾದ ಹಾಡುಗಳು ಮನಸ್ಸಿಗೆ ಖುಷಿ ಕೊಡುವ ಮೂಲಕ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಸೆಪ್ಟಂಬರ್ ನಲ್ಲಿ ಮುಂಬೈ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರ ಪ್ರದರ್ಶನ: ಚಿತ್ರದ ಕಥೆಯ ಬಗ್ಗೆ ಆಕರ್ಷಕರಾಗಿರುವ ಕೆಲ ನಿರ್ಮಾಪಕರು ಈ ಚಿತ್ರವನ್ನು ಇತರ ಭಾಷೆಗಳಲ್ಲಿ ನಿರ್ಮಿಸಲು ಮುಂದೆ ಬಂದಿದ್ದು, ಈವರೆಗೆ ಈ ಬಗ್ಗೆ ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ಅವರು ಯಾವೂದೇ ತೀರ್ಮಾನ ಕೈಗೊಳ್ಳದೇ ತಮ್ಮ ನಿರ್ಧಾರವನ್ನು ಕಾದಿರಿಸಿದ್ದಾರೆ. ಸೆಪ್ಟಂಬರ್ ತಿಂಗಳಲ್ಲಿ ಮುಂಬೈ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದ್ದು, ಎಲ್ಲಾ ಸಿದ್ದತೆಗಳು ನಡೆದಿದೆ.

ತಾರಾಗಣ : ತಾರಾಗಣದಲ್ಲಿ ಹಿರಿಯ ನಟ ಅನಂತ್ ನಾಗ್ ಹಾಗೂ ವಿನಯಾ ಪ್ರಸಾದ್, ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್ ಸೇರಿದಂತೆ ಹಲವು ಹಿರಿಯ ನಟ-ನಟಿಯರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ತಮ್ಮ ನಟನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ.

ಚಿತ್ರ ನಿರ್ಮಾಣ: ಹರೀಶ್ ಶೇರಿಗಾರ್ – ಶರ್ಮಿಳಾ ಶೇರಿಗಾರ್ , ಕಥೆ-ಚಿತ್ರಕಥೆ-ನಿರ್ದೇಶನ: ಖ್ಯಾತ ಹಿರಿಯ ನಿರ್ದೇಶಕ ಕೊಡ್ಲು ರಾಮಕೃಷ್ಣ, ಸಂಗೀತ ನಿರ್ದೇಶಕರು: ಮಣಿಕಾಂತ್ ಕದ್ರಿ -ಎನ್.ಜೆ.ರವಿಶೇಕರ್ ರಾಜಮಗ, ಹಿನ್ನೆಲೆ ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್. ರಾಜಮಗ, ಅಕ್ಷತಾ ರಾವ್, ಛಾಯಾಗ್ರಾಹಣ: ಮೋಹನ್, ಸಂಭಾಷಣೆ: ಬಿ.ಎ.ಮಧು, ಸಂಕಲನ: ಬಸವರಾಜ್ ಅರಸ್ , ಸಾಹಸ ನಿರ್ದೇಶನ: ಥ್ರಿಲ್ಲರ್ ಮಂಜು-ಕುಂಗ್ಫು ಚಂದ್ರು , ನೃತ್ಯ ನಿರ್ದೇಶನ: ಮದನ್ ಹರಿಣಿ.


Spread the love