ಬಿಜೆಪಿಯಿಂದ ಕಾಂಗ್ರೆಸ್‍ಗೆ ಮರಳಿದ ಭಟ್ಕಳ ಮಾಜಿ ಶಾಸಕ ಜೆ.ಡಿ.ನಾಯಕ್

Spread the love

ಬಿಜೆಪಿಯಿಂದ ಕಾಂಗ್ರೆಸ್‍ಗೆ ಮರಳಿದ ಭಟ್ಕಳ ಮಾಜಿ ಶಾಸಕ ಜೆ.ಡಿ.ನಾಯಕ್

ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಪ್ರಮುಖ ನಾಯಕರು ಹಾಗೂ ಮಾಜಿ ಶಾಸಕರಾದ ಜೆ.ಡಿ.ನಾಯಕ್ ಕಾಂಗ್ರೆಸ್‍ಗೆ ಮರಳಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಕಾಂಗ್ರೆಸ್‍ಗೆ ಮರಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆ.ಡಿ.ನಾಯಕ್ ಅವರನ್ನು ಕಾಂಗ್ರೆಸ್‍ಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿಯ ಹಿಂದುತ್ವಕ್ಕೆ ಬೇಸತ್ತು ಅವರು ಕಾಂಗ್ರೆಸ್ ವಾಪಸಾಗಿದ್ದಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ಹಿಂದುತ್ವ ಎಂದರೆ ಬರಿ ಕೋಮುವಾದ, ವೈಷಮ್ಯದ ರಾಜಕಾರಣ. ಅಲ್ಲಿ ಸರ್ವಸಮಾನತೆ ಇಲ್ಲ. ಕಾಂಗ್ರೆಸ್‍ನಲ್ಲಿ ಮಾತ್ರ ಜಾತ್ಯತೀತ ತತ್ವಗಳಿಗೆ ಅವಕಾಶಗಳಿವೆ. ಕೇವಲ ರಾಜಕಾರಣಕ್ಕಾಗಿ ಹಿಂದುತ್ವ ಬಳಸಿಕೊಳ್ಳುತ್ತಿರುವುದರಿಂದ ಜೆ.ಡಿ.ನಾಯಕ್ ಅವರಂತಹ ಹಲವಾರು ಮುಖಂಡರು ಬೇಸರಗೊಂಡಿದ್ದಾರೆ ಎಂದರು.

ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ಆ ಹಿನ್ನೆಲೆಯಲ್ಲಿ ಜೆ.ಡಿ.ನಾಯಕ್ ಅವರನ್ನು ಕಾಂಗ್ರೆಸ್‍ಗೆ ಮರಳಿ ಕರೆತರಲಾಗಿದೆ ಎನ್ನುವುದು ಆಧಾರ ರಹಿತ ವದಂತಿ.

ಸದ್ಯಕ್ಕೆ ನಾನು ಲೋಕಸಭೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

ಅನಂತ್‍ಕುಮಾರ್ ಹೆಗಡೆ ಅವರು ಐದು ಬಾರಿ ಸಂಸದರಾಗಿ ಉತ್ತರ ಕನ್ನಡ ಕ್ಷೇತ್ರವನ್ನು ಸ್ಪರ್ಧಿಸಿದ್ದಾರೆ. ಆದರೆ, ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ಲೋಕಸಭೆಯಲ್ಲೂ ಅವರು ಕ್ರಿಯಾಶೀಲರಾಗಿಲ್ಲ. ಕೇವಲ ಪ್ರಚೋದನಕಾರಿ ಭಾಷಣ ಮಾಡಿ ಕೋಮು ವೈಷಮ್ಯ ಮೂಡಿಸುವುದೇ ಅವರ ಸಾಧನೆ. ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಸಾಧನೆ ಶೂನ್ಯ ಎಂದು ಕಿಡಿಕಾರಿದರು.

ಜೆ.ಡಿ.ನಾಯಕ್ ಭಟ್ಕಳ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನನ್ನ ಹಳೆಯ ಸ್ನೇಹಿತರು. ಅವರು ಮರಳುವಿಕೆಯಿಂದ ಪಕ್ಷದ ಬಲವರ್ಧನೆಯಾಗಿದೆ ಎಂದು ಹೇಳಿದರು.ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್ ಹಾಗೂ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.


Spread the love