ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣಕ್ಕೆ ತಿರುವು: ಅಪಘಾತವಲ್ಲ, ಕೊಲೆ 

Spread the love

ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣಕ್ಕೆ ತಿರುವು: ಅಪಘಾತವಲ್ಲ, ಕೊಲೆ 

ಮಡಿಕೇರಿ : ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ಸಾವು ಹತ್ಯೆಯೆಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಜಿಲ್ಲಾ ಪೊಲಿಸರು ಬಂಧಿಸಿದ್ದಾರೆ.

ಸಂಪಾಜೆ ನಿವಾಸಿ ಸಂಪತ್ ಕುಮಾರ್(34), ಮಡಿಕೇರಿಯ ಗೌಳಿ ಬೀದಿ ನಿವಾಸಿ ಜಯನ್ ಅಲಿಯಾಸ್ ಜಗ್ಗು(34) ಹಾಗೂ ಸಂಪಾಜೆ ನಿವಾಸಿ ಹರಿ ಪ್ರಸಾದ್(36) ಎಂಬವರೇ ಬಂಧಿತ ಆರೋಪಿಗಳು.

ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ವೈನ್ ಶಾಪ್ ಹಾಗೂ ಕ್ಲಬ್‍ಗೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆಯೆಂದು ವಿಚಾರಣೆ ವೇಳೆ ತಿಳಿದು ಬಂದಿರುವುದಾಗಿ ವಿವರಿಸಿದರು.

ಮಾರ್ಚ್ 29 ರಂದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಸಂಪತ್ ಕುಮಾರ್ ಹಾಗೂ ಹರಿ ಪ್ರಸಾದ್ ಸುಮಾರು ಒಂದು ತಿಂಗಳಿನಿಂದ ಬಾಲಚಂದ್ರ ಕಳಗಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಸಂಪತ್ ಕುಮಾರ್ ತನ್ನ ಸ್ನೇಹಿತ ಜಯನ್ ಎಂಬಾತನಿಗೆ ಸುಪಾರಿ ನೀಡಿ ಲಾರಿಯಿಂದ ಢಿಕ್ಕಿ ಹೊಡೆದು ಹತ್ಯೆಗೈಯುವಂತೆ ತಿಳಿಸಿ, ಈ ಕಾರ್ಯ ನಿರ್ವಹಿಸಿದ್ದಾರೆ.

ಜಯನ್ ಗೆ ಲಾರಿಯ ಸಾಲ 1.50 ಲಕ್ಷ ರೂ.ಗಳನ್ನು ತೀರಿಸುವ ಆಮಿಷ ಒಡ್ಡಿದ್ದ ಎನ್ನಲಾಗಿದೆ. ಅದರಂತೆ ಸುಪಾರಿಗೆ ಒಪ್ಪಿದ ಜಯನ್ ಮಾ.19 ರಂದು ಸಂಜೆ 6.30ರ ಸುಮಾರಿನಲ್ಲಿ ಬಾಲಚಂದ್ರ ಕಳಗಿಯವರು ಮೇಕೇರಿ ಕಡೆಯಿಂದ ಸಂಪಾಜೆ ಕಡೆಗೆ ತಮ್ಮ ಓಮ್ನಿ ವಾಹನದಲ್ಲಿ ತೆರಳುತ್ತಿದ್ದಾಗ ಲಾರಿಯಿಂದ ಢಿಕ್ಕಿ ಹೊಡೆಸಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಸಂಪತ್ ಕುಮಾರ್ ಹಾಗೂ ಹರಿ ಪ್ರಸಾದ್ ಅವರು ಎರಡು ವರ್ಷಗಳ ಹಿಂದೆ ಸಂಪಾಜೆಯಲ್ಲಿ ರಿಕ್ರಿಯೇಷನ್ ಕ್ಲಬ್ ತೆರೆಯಲು ಪ್ರಯತ್ನಿಸಿದ್ದು, ಇದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿಯವರು ಅನುಮತಿ ನಿರಾಕರಿಸಿದ್ದರು. 2018ರ ಮಾರ್ಚ್ ನಲ್ಲಿ ಸಂಪಾಜೆಯಲ್ಲಿ ಬಾರ್ ತೆರೆಯಲು ಪ್ರಯತ್ನಿಸಿದಾಗಲು ಅನುಮತಿ ನೀಡದಂತೆ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿ ಬಾರ್ ಲೈಸೆನ್ಸ್ ರದ್ದಾಗುವಂತೆ ನೋಡಿಕೊಂಡಿದ್ದಾರೆ. ಅಲ್ಲದೆ 2018 ಎಪ್ರಿಲ್ ತಿಂಗಳಿನಲ್ಲಿ ಸಂಪತ್ ಕುಮಾರ್ ನ ಜೆಸಿಬಿ ಕಳೆದು ಹೋಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತಮ್ಮ ಪ್ರಭಾವ ಬಳಸಿದ ಬಾಲಚಂದ್ರ ಕಳಗಿ ಅವರು ಜೆಸಿಬಿ ಪತ್ತೆಗೆ ಅಡ್ಡಿಯುಂಟು ಮಾಡಿದ್ದಾರೆ ಎನ್ನುವ ಅಸಮಾಧಾನವೂ ಅವರಲ್ಲಿತ್ತು ಎಂದು ಮಾಹಿತಿ ನೀಡಿದರು.

ಹೀಗಾಗಿ ಕಳಗಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದು, ಅದರಂತೆ ಮಾ.19 ರಂದು ತಾಳತ್ ಮನೆ ಮಾರ್ಗವಾಗಿ ಮೇಕೇರಿಗೆ ಬರುವ ರಸ್ತೆಯಲ್ಲಿ ಕಳಗಿಯವರ ಓಮ್ನಿ ವಾಹನಕ್ಕೆ ಲಾರಿಯನ್ನು ಢಿಕ್ಕಿ ಪಡಿಸಿರುವುದಾಗಿ ಎಸ್‍ಪಿ ಡಾ.ಸುಮನ್ ಪನ್ನೇಕರ್ ತಿಳಿಸಿದರು. ಕೃತ್ಯಕ್ಕೆ ಬಳಸಲಾಗಿದ್ದ ಲಾರಿ ಹಾಗೂ ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ, ಪೊಲೀಸ್ ಉಪ ನಿರೀಕ್ಷಕ ಚೇತನ್, ಪಿಎಸ್‍ಐ ಶ್ರವಣ್, ಸಿಬ್ಬಂದಿಗಳಾದ ದಿನೇಶ್, ಶಿವರಾಜು, ರವಿ, ಅನಿಲ್, ಮಂಜುನಾಥ್, ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಹಾಗೂ ಚಾಲಕರಾದ ಸುನಿಲ್ ಮತ್ತು ಅರುಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ತಂಡದ ಕಾರ್ಯವನ್ನು ಮೆಚ್ಚಿ ಪೊಲೀಸ್ ವರಿಷ್ಟಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.


Spread the love