ಬಿಜೆಪಿ ಯುವಕರನ್ನು ದಾರಿ ತಪ್ಪಿಸಿದರೆ, ಕಾಂಗ್ರೆಸ್ ರಾಷ್ಟ್ರ ಕಟ್ಟುವ ಕೆಲಸ ಮಾಡಿಸುತ್ತಿದೆ ; ಪ್ರಮೋದ್ ಮಧ್ವರಾಜ್

Spread the love

ಬಿಜೆಪಿ ಯುವಕರನ್ನು ದಾರಿ ತಪ್ಪಿಸಿದರೆ, ಕಾಂಗ್ರೆಸ್ ರಾಷ್ಟ್ರ ಕಟ್ಟುವ ಕೆಲಸ ಮಾಡಿಸುತ್ತಿದೆ ; ಪ್ರಮೋದ್ ಮಧ್ವರಾಜ್

ಉಡುಪಿ : ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಯುವಕರನ್ನು ಪ್ರಚೋದನಾಕಾರಿ ಭಾಷಣಗಳ ಮೂಲಕ ತಪ್ಪು ದಾರಿಗೆ ಎಳೆದು ಅವರ ಜೀವದ ಜೊತೆ ಆಡಿದರೆ ಕಾಂಗ್ರೆಸ್ ಪಕ್ಷ ಯುವಕರನ್ನು ರಾಷ್ಟ್ರ ಕಟ್ಟುವ ಕೆಲಸಕ್ಕೆ ಉಪಯೋಗಿಸುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಮಂಗಳವಾರ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಪದಗ್ರಹಣ ಹಾಗೂ ಯುವ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಬಿಜೆಪಿ ಪಕ್ಷ ಅಮಾಯಕ ಯುವಕರನ್ನು ಕೋಮುವಾದದ ವಿಷ ಬೀಜ ಬಿತ್ತುವುದರ ಮೂಲಕ ತಪ್ಪು ದಾರಿಗೆ ಎಳೆಯುವ ಕೆಲಸ ನಡೆಸುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಕೊಕ್ಕರ್ಣೆಯಲ್ಲಿ ಸಂಘ ಪರಿವಾರದವರಿಂದ ಹತನಾದ ಬಿಜೆಪಿ ಯುವ ನಾಯಕ ಪ್ರವೀಣ್ ಪೂಜಾರಿ ಸ್ಪಷ್ಟ ಉದಾಹರಣೆ. ಒಂದು ಕಡೆಯಿಂದ ತನ್ನ ಮಗನನ್ನು ಕಳೆದುಕೊಂಡ ದುಃಖದಿಂದ ಪ್ರವೀಣ್ ಪೂಜಾರಿಯ ಕುಟುಂಬ ಕಂಗಾಲಾಗಿದ್ದರೆ ಇನ್ನೊಂದು ಕಡೆ 16-21 ವರ್ಷ ವಯಸ್ಸಿನ 21 ಯುವಕರು ಜೈಲಿನಲ್ಲಿ ಜೀವನ ಪರ್ಯಂತ ಇರುವುದರ ಮೂಲಕ ಅವರುಗಳ ಕುಟುಂಬವೂ ಕೂಡ ದುಃಖದಲ್ಲಿಯೇ ಕಾಲ ಕಳೆಯುವಂತಹ ಪರಿಸ್ಥಿತಿ ಉಂಟಾಗಿದೆ.  ಆದರೆ ಕಾಂಗ್ರೆಸ್ ಪಕ್ಷ ಎಂದೀಗೂ ಕೂಡ ತನ್ನ ಯುವ ಕಾರ್ಯಕರ್ತರನ್ನು ಅಂತಹ ನೀಚ ಕೆಲಸಗಳಿಗೆ ದುರುಪಯೋಗಪಡಿಸಿಕೊಳ್ಳದೆ ರಾಷ್ಟ್ರದ ಒಳಿತಿಗೆ ಯುವ ಶಕ್ತಿಯನ್ನು ಸದ್ಬಳಕೆ ಮಾಡುವ ಕೆಲಸ ಮಾಡುತ್ತದೆ. ಪ್ರತಿ ವಿದಾನಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಯುವ ಕಾಂಗ್ರೆಸ್ ಬಲಪಡಿಸುವುದರೊಂದಿಗೆ ಮುಂದಿನ ವರ್ಷದ ಒಳಗೆ ಸಂಪೂರ್ಣವಾಗಿ ಯುವ ಕಾಂಗ್ರೆಸ್ ಬಲಪಡಿಸುವುದರೊಂದಿಗೆ ಪಕ್ಷದ ಸಂಘಟನೆ ಮಾಡಲಾಗುವುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ ದೇಶದಲ್ಲಿ ಯುವ ಕಾಂಗ್ರೆಸ್ ಮೂಲಕ ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ವಿಶೇಷ ಜವಾಬ್ದಾರಿಯನ್ನು ಹೊಂದಿದೆ. ದೇಶವನ್ನು ಆಳಿದ ಕಾಂಗ್ರೆಸ್ ಸರಕಾರ ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದು ಅದನ್ನು ಜನರಿಗೆ ನೇರವಾಗಿ ಮನಮುಟ್ಟುವಂತೆ ತಿಳಿಸುವ ಜವಾಬ್ದಾರಿ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ. ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರಕಾರ ಆಹಾರ ಭದ್ರತೆ ಕಾಯಿದೆಯನ್ನು ಪರಿಚಯಿಸಿದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡುವುದರ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ಜನಪರ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜನರಿಗೆ ಪರಿಚಯಿಸುವುದರ ಮೂಲಕ ಚುನಾವಣೆಗೆ ಸನ್ನದ್ದರಾಗಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎ ಗಫೂರ್, ವೆರೊನಿಕಾ ಕರ್ನೆಲಿಯೊ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಐಟಿ ಸೆಲ್ ಜಿಲ್ಲಾಧ್ಯಕ್ಷ ವಿಶ್ವಾಸ್ ಶೆಟ್ಟಿ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಯುವ ಕಾಂಗ್ರೆಸ್ ನಾಯಕ, ಸೆನೆಟ್ ಸದಸ್ಯ ಅಮೃತ್ ಶೆಣೈ, ನಗರಾಭಿವೃದ್ಧಿ ಪ್ರಾಧಿಕಾರಾದ ಅಧ್ಯಕ್ಷ ನರಸಿಂಹ ಮೂರ್ತಿ, ಯತೀಶ್ ಕರ್ಕೆರಾ, ಸತೀಶ್ ಅಮೀನ್ ಪಡುಕೆರೆ, ಅಶೋಕ್ ಕುಮಾರ್ ಕೊಡವೂರು, ಸಂಧ್ಯಾ ತಿಲಕ್ ರಾಜ್, ಶೋಭಾ ಕಕ್ಕುಂಜೆ ಹಾಗೂ ಇತರರು ಉಪಸ್ಥಿತರಿದ್ದರು.

ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಯುವ ಕಾಂಗ್ರೆಸ್ ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಪಕ್ಷದ ಶಾಲು ಹೊದಿಸುವುದರ ಮೂಲಕ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಸ್ಪರ್ಧೆಗಳು ಜರುಗಿದವು.


Spread the love

1 Comment

  1. 60 VARSHA DESHA AALI DESHA KATTIDDU SAAKU . JANARE NIMMANNU TIRASKARISIDDARE . JANA MOORKHARALLA EMBUDANNU ARITUKOLLI. NAANU CONGRESS VIRODIYALLA. ALPASANKYATARA OLAIKE MADIDDU BITTARE AVRIGU SAHAYA MADIDDILLA .

Comments are closed.