ಬೀಟ್ ಪೇದೆಯೇ ನಿಮ್ಮಊರಿಗೆ ಪೊಲೀಸ್ ಮುಖ್ಯಸ್ಥ!

Spread the love

ಬೀಟ್ ಪೇದೆಯೇ ನಿಮ್ಮಊರಿಗೆ ಪೊಲೀಸ್ ಮುಖ್ಯಸ್ಥ!
ಬೆಂಗಳೂರು: ನಗರಕ್ಕೆ ಪೊಲೀಸ್ ಕಮಿಷನರ್, ಜಿಲ್ಲೆಗೊಬ್ಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಠಾಣೆಗಳಿಗೆ ಠಾಣಾಧಿಕಾರಿ ಇರುವಂತೆ ಇನ್ನುಮುಂದೆ ‘ಪ್ರದೇಶಕ್ಕೊಬ್ಬ ಪೊಲೀಸ್’ ಇರಲಿದ್ದಾರೆ.
ಆಯಾ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು, ಅಪರಾಧ ಕೃತ್ಯಗಳು ನಡೆದರೆ ಇವೆಲ್ಲದಕ್ಕೂ ಬೀಟ್‌ಗೆ ನೇಮಕವಾಗಿರುವ ಕಾನ್ಸ್‌ಟೇಬಲ್ ಅಥವಾ ಹೆಡ್‌ಕಾನ್ಸ್‌ಟೇಬಲ್ ಜವಾಬ್ದಾರಿಯಾಗಿರುತ್ತಾನೆ. ಪೊಲೀಸರು ಜನಸ್ನೇಹಿಯಾಗಬೇಕು, ಪೊಲೀಸ್ ವ್ಯವಸ್ಥೆ ಸಮುದಾಯದತ್ತ ಚಲಿಸಬೇಕೆಂಬ ಹಿನ್ನೆಲೆಯಲ್ಲಿ ‘ಗಸ್ತು ವ್ಯವಸ್ಥೆ’ (ಬೀಟ್) ಜಾರಿಗೊಳಿಸಿ ಸರ್ಕಾರ ಈ ಆದೇಶ ಹೊರಡಿಸಿದೆ.
ನೂತನ ಗಸ್ತು ವ್ಯವಸ್ಥೆ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದ್ದು, ಇದರನ್ವಯ ಇನ್ನುಮುಂದೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ‘ಗಸ್ತು’ ಪ್ರದೇಶವೇ ಅತ್ಯಂತ ಸಣ್ಣ ಘಟಕವಾಗಲಿದೆ.
ಒಂದು ಪ್ರದೇಶಕ್ಕೆ ಒಂದು ವರ್ಷದ ಅವಧಿಗೆ ಬೀಟ್ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಆಯಾ ಗಸ್ತು ವ್ಯಾಪ್ತಿಯಲ್ಲಿನ ಕಾನ್ಸ್‌ಟೇಬಲ್ ಅಥವಾ ಹೆಡ್‌ಕಾನ್ಸ್‌ಟೇಬಲ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಕಮಿಷನರ್, ಠಾಣಾಧಿಕಾರಿಗೆ ಇರುವಂತೆ ತನ್ನ ವ್ಯಾಪ್ತಿಗೆ ಬರುವ ಗಸ್ತು ಪ್ರದೇಶದಲ್ಲಿ ಸಂಪೂರ್ಣ ಅಧಿಕಾರ ಇರುತ್ತದೆ.
ಆಯಾ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಬೀಟ್ ವ್ಯವಸ್ಥೆ ಸೂಕ್ತವಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶೇ.೯೦ರಷ್ಟು ಕಾನ್ಸ್‌ಟೇಬಲ್ ಮತ್ತು ಹೆಡ್‌ಕಾನ್ಸ್‌ಟೇಬಲ್ ಸಿಬ್ಬಂದಿಯಿದೆ. ಠಾಣೆಯಲ್ಲಿರುವ ಕಾನ್ಸ್‌ಟೇಬಲ್ ಮತ್ತು ಹೆಡ್‌ಕಾನ್ಸ್‌ಟೇಬಲ್‌ಗಳ ಒಟ್ಟು ಸಂಖ್ಯೆಗೆ ಅನುಗುಣವಾಗಿ ಠಾಣೆಯ ಭೌಗೋಳಿಕ ಸರಹದ್ದನ್ನು ವಿಂಗಡಿಸಿ ಒಂದು ‘ಬೀಟ್’ (ಗಸ್ತು) ಸೃಜಿಸಲಾಗುವುದು. ಆ ಬೀಟ್‌ನ ಎಲ್ಲಾ ಪೊಲೀಸ್ ಕರ್ತವ್ಯಾಧಿಕಾರಿಗಳನ್ನು ಮತ್ತು ಜವಾಬ್ದಾರಿಯನ್ನು ಒಬ್ಬ ಹೆಡ್‌ಕಾನ್ಸ್‌ಟೇಬಲ್ ಅಥವಾ ಕಾನ್ಸ್‌ಟೇಬಲ್‌ಗಳಿಗೆ ನೀಡಲಾಗುತ್ತದೆ.
ಬೀಟ್‌ಗೆ ನೇಮಕಗೊಳ್ಳುವ ಕಾನ್ಸ್‌ಟೇಬಲ್ ತನ್ನ ಪ್ರದೇಶದಲ್ಲಿ ಬರುವ ಸಾರ್ವಜನಿಕರ ಅರ್ಜಿ ವಿಚಾರಣೆ, ಪಾಸ್‌ಪೋರ್ಟ್, ಉದ್ಯೋಗ ಮತ್ತು ಗುಣ-ನಡತೆಗಳ ಪರಿಶೀಲನೆ, ರೌಡಿಗಳು, ಮತೀಯ ಗೂಂಡಾಗಳ ಪರಿಶೀಲನೆ, ನ್ಯಾಯಾಲಯದ ಆದೇಶಗಳ ಜಾರಿ, ಅಪರಾಧ, ಅಪರಾಧಿಗಳು ಮತ್ತು ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹ ಮತ್ತು ಪಿಸ್ತೂಲ್ ಪರವಾನಗಿ ಅರ್ಜಿ ಪರಿಶೀಲನೆ, ಗಸ್ತಿನ ವ್ಯಾಪ್ತಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾಗಬೇಕು.
ಬೀಟ್‌ನಲ್ಲಿ ನಡೆಯುತ್ತಿರುವ ಘಟನೆಗಳು, ವಿದ್ಯಮಾನಗಳು, ಅಕ್ರಮ ಮುಂತಾದವುಗಳ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಿ, ಆ ಮಾಹಿತಿಯನ್ನು ಠಾಣಾಧಿಕಾರಿಗಳಿಗೆ ತಿಳಿಸಬೇಕು. ಠಾಣಾಧಿಕಾರಿಗಳು ನಿತ್ಯ ಬೀಟ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ. ಇನ್ನು ಕೋರ್ಟ್, ಠಾಣೆ ಬರಹಗಾರರು, ಗುಪ್ತ ಮಾಹಿತಿ ವಿಭಾಗ ಸಿಬ್ಬಂದಿ, ಅಪರಾಧ ವಿಭಾಗದ ಸಿಬ್ಬಂದಿ, ತನಿಖಾ ಸಹಾಯಕರು ಹೀಗೆ ಠಾಣೆಯಲ್ಲಿ ವಿವಿಧ ರೀತಿಯ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಕಾನ್ಸ್‌ಟೇಬಲ್ ಮತ್ತು ಹೆಡ್‌ಕಾನ್ಸ್‌ಟೇಬಲ್‌ಗಳು ಈ ಎಲ್ಲಾ ಕೆಲಸದ ಜತೆಗೆ ಬೀಟ್ ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಬೀಟ್‌ನಲ್ಲಿ ಮಾಸಿಕ ಸಭೆ: ಬೀಟ್ ಸಿಬ್ಬಂದಿ ಮತ್ತು ಬೀಟ್ ನಾಗರಿಕ ಸದಸ್ಯರು ಪ್ರತ್ಯೇಕವಾಗಿ ಮಾಸಿಕ ಸಭೆ ನಡೆಸಬೇಕು. ಸಾಧ್ಯವಾದಲ್ಲಿ ಉಸ್ತುವಾರಿ ಎಎಸ್‌ಐ ಅಥವಾ ಠಾಣಾಧಿಕಾರಿ ಈ ಸಭೆಗೆ ಹಾಜರಾಗಬೇಕು.
ಸಭೆಯ ನಡಾವಳಿಗಳನ್ನು ಬೀಟ್ ಮಾಹಿತಿ ಪುಸ್ತಕದಲ್ಲಿ ದಾಖಲಿಸಬೇಕು. ಇನ್ನು ಠಾಣಾ ಮಟ್ಟದಲ್ಲಿ ಠಾಣಾಧಿಕಾರಿ ಬೀಟ್ ನಿರ್ವಹಣೆಯು ಸರಿಯಾಗಿ ನಡೆಯುತ್ತಿದೆಯೇ ಎಂಬುದರ ಬಗ್ಗೆ ಉಸ್ತುವಾರಿ ನೋಡಿಕೊಳ್ಳಬೇಕು. ವೃತ್ತ ನಿರೀಕ್ಷಕರು ಮತ್ತು ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಠಾಣಾ ಭೇಟಿಯ ವೇಳೆ ಬೀಟ್ ನಿರ್ವಹಣೆಯ ಬಗ್ಗೆ ವಿಮರ್ಶೆ ಮಾಡಬೇಕು.
ಗಸ್ತು ವ್ಯವಸ್ಥೆಯ ರಚನೆ,  ಕಾರ್ಯನಿರ್ವಹಣೆಯ ಬಗ್ಗೆ ಎಲ್ಲಾ ಹಂತದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ತಮ್ಮ ಗಸ್ತು ವ್ಯಾಪ್ತಿಯಲ್ಲಿನ ಕರ್ತವ್ಯ ನಿರ್ವಹಣೆ ಬಗ್ಗೆ ನಿಯಮಿತವಾಗಿ ತರಬೇತಿ ಆಯೋಜಿಸಿ ಅರಿವು ಮೂಡಿಸಲಾಗುವುದು. ಜನರಿಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರು ಸದಸ್ಯರು: ಪ್ರತಿ ಬೀಟ್‌ನಲ್ಲಿ ಬರುವ ಗ್ರಾಮಗಳು ಅಥವಾ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕರನ್ನು ಬೀಟ್ ಸದಸ್ಯರನ್ನಾಗಿ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಪ್ರತಿ ಬೀಟ್‌ನಲ್ಲಿರುವ ಸಾರ್ವಜನಿಕರು ಮತ್ತು ಪೊಲೀಸ್ ಠಾಣೆಯ ನಡುವೆ ಬೀಟ್‌ಗೆ ನೇಮಕಗೊಂಡ ಸಿಬ್ಬಂದಿ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಬೇಕು. ಇದರಿಂದ ಪೊಲೀಸ್ ಮತ್ತು ಸಮುದಾಯದ ನಡುವೆ ಬಾಂಧವ್ಯ ವೃದ್ಧಿಗೊಳ್ಳಲಿದೆ. ಅಲ್ಲದೆ, ಬೀಟ್‌ನಲ್ಲಿರುವ ಸಮಸ್ಯೆ, ವಿವಾದಗಳು ಕ್ಷಿಪ್ರಗತಿಯಲ್ಲಿ ಠಾಣೆಗೆ ರವಾನೆಯಾಗಿ ಸಮಸ್ಯೆ ಇತ್ಯರ್ಥಗೊಳ್ಳಲಿದೆ.
ಕಮಿಷನರ್, ಎಸ್ಪಿಗಳೇ ಹೊಣೆ: ಗಸ್ತು ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಹಾಗೂ ಸಂಪೂರ್ಣವಾಗಿ ಜಾರಿಗೊಳಿಸುವ ಜವಾಬ್ದಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಆಯುಕ್ತರದ್ದಾಗಿರುತ್ತದೆ. ಜಾರಿಯಲ್ಲಿನ ಯಾವುದೇ ರೀತಿಯ ಕೊರತೆಗೆ ಆಯಾ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಆಯುಕ್ತರನ್ನು ಹೊಣೆ ಮಾಡಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

Spread the love