ಬೆಂಗಳೂರು ಗಲಭೆ ಪೂರ್ವ ನಿಯೋಜಿತ ; ಸಮಾಜಘಾತುಕ ಶಕ್ತಿಗಳಿಂದ ಶಾಂತಿ ಕದಡುವ ಪ್ರಯತ್ನ – ಸಚಿವ ಬೊಮ್ಮಾಯಿ

Spread the love

ಬೆಂಗಳೂರು ಗಲಭೆ ಪೂರ್ವ ನಿಯೋಜಿತ ; ಸಮಾಜಘಾತುಕ ಶಕ್ತಿಗಳಿಂದ ಶಾಂತಿ ಕದಡುವ ಪ್ರಯತ್ನ – ಸಚಿವ ಬೊಮ್ಮಾಯಿ

ಉಡುಪಿ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿ ಗಲಭೆ ಸೃಷ್ಟಿಸಿದ ಘಟನೆ ಸಂಪೂರ್ಣ ಪೂರ್ವಯೋಜಿತವಾಗಿದ್ದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಪ್ರಯತ್ನವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಬುಧವಾರ ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಕೆಲವೊಂದು ಸಮಾಜ ಘಾತುಕ ಶಕ್ತಿಗಳು ಪುಂಡಾಟದ ಮೂಲಕ ಸಮಾಜ ಹದಗೆಡಿಸಲುಹಲವು ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಿಡಿಗೇಡಿಗಳು ಮನಸೋಇಚ್ಛೆ ವರ್ತಿಸಿದಾಗ ಕೊನೆಯ ಅಸ್ತ್ರವಾಗಿ ಗೋಲಿಬಾರ್ ಮಾಡಲಾಗಿದೆ. ಗೋಲಿಬಾರ್ ನಿಂದಾಗಿ ಮೂರು ಜನ ಅಸುನೀಗಿದ್ದು ಪೊಲೀಸರ ಮೇಲೂ ಕಲ್ಲುತೂರಾಟವಾಗಿ ಒರ್ವ ಪೊಲೀಸ್ ಅಧಿಕಾರಿ ತಲೆಗೆ ಗಂಭೀರ್ ಗಾಯಗಳಾಗಿವೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಪ್ರಕರಣ ಸಂಬಂಧ ಈಗಾಗಲೇ 110 ಜನ ಬಂಧನವಾಗಿದೆ ಎಂದರು.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರ ಪ್ರಥಮ ಆದ್ಯತೆ ನೀಡುತ್ತಿದ್ದು, ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಗೃಹ ಕಾರ್ಯದರ್ಶಿ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯಕ್ಕೆ ಕೇಂದ್ರದಿಂದ ಆರು ಸಿ.ಆರ್.ಪಿ.ಎಫ್ ಕಂಪೆನಿ ಬರುತ್ತಿದ್ದು ಹೈದರಾಬಾದಿನಿಂದ ಮೂರು ಹೆಚ್ಚುವರಿ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ. ಅವುಗಳನ್ನು ಎಲ್ಲಿ ನಿಯೋಜನೆ ಮಾಡಬೇಕು ಎನ್ನುವುದನ್ನು ಪೊಲೀಸ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ.

ಪ್ರಸ್ತುತ ಎರಡು ಪ್ರದೇಶಗಳೂ ಸಂಪೂರ್ಣ ಪೊಲೀಸರ ಹತೋಟಿಯಲ್ಲಿದ್ದು, ಇನ್ನಷ್ಟು ಆರೋಪಿಗಳ ಬಂಧನ ಆಗೋದು ಬಾಕಿ ಇದೆ. ಘಟನೆ ನಡೆಸಿದ ಪುಂಡರ ಹಿಂದೆ ಯಾರಿದ್ದಾರೆ ಅನ್ನೋದನ್ನ ತನಿಖೆ ಮಾಡುತ್ತೇವೆ. ಘಟನೆಯ ಕುರಿತು ಸಿಎಂ ಜೊತೆ ಬೆಳಿಗ್ಗೆ ಬಗ್ಗೆ ಚರ್ಚೆ ಮಾಡಿದ್ದು, ಮಧ್ಯಾಹ್ನ ಸಿಎಂ ಮತ್ತು ಹಿರಿಯ ಅಧಿಕಾರಿ ಜೊತೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದ್ದೇವೆ. ಘಟನೆಯ ಕುರಿತು ಸಿಸಿ ಕ್ಯಾಮರ ದಾಖಲೆ ಪೊಲೀಸ್ ಠಾಣೆಯ ದಾಖಲೆ ಸಂಗ್ರಹಿಸಲಾಗುವುದು. ಇದರಿಂದ ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದವರು ಮಾಹಿತಿ ಸಂಗ್ರಹವಾಗುತ್ತಿದೆ. ಇದೊಂದು ಪೂರ್ವ ನಿಯೋಜಿತ ಷ್ಯಡ್ಯಂತ್ರ ವಾಗಿದ್ದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನಮಾಡಿದ್ದಾರೆ. ಈ ವರೆಗೆ ರಾಜ್ಯ ಶಾಂತವಾಗಿತ್ತು ಇದನ್ನು ಸಹಿಸದ ಸಮಾಜಘಾತಕ ಶಕ್ತಿಗಳು ಸಂದರ್ಭದ ಉಪಯೋಗ ಮಾಡಿದ್ದಾರೆ ಎಂದರು.


Spread the love